ಎರಡು ದಿನಗಳ ಛಾಯಾಚಿತ್ರ ಪ್ರದರ್ಶನ
ಕಾರವಾರ: ರಾಜ್ಯ ವಿಧಾನಸಭೆಯ 60ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ವಾರ್ತಾ ಇಲಾಖೆಯಿಂದ ಆಯೋಜಿಸಲಾಗಿರುವ ಎರಡು ದಿನಗಳ ಛಾಯಾಚಿತ್ರ ಪ್ರದರ್ಶನವನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಸುಬ್ರಾಯ ಕಾಮತ್ ರವೀಂದ್ರನಾಥ ಠಾಗೋರ್ ಕಡಲ ತೀರದ ಮಯೂರವರ್ಮ ವೇದಿಕೆಯಲ್ಲಿ ಶನಿವಾರ ಉದ್ಘಾಟಿಸಿದರು.
ರಾಜ್ಯದ ಶಾಸಕಾಂಗ ನಡೆದು ಬಂದಿರುವ ಹಾದಿಯನ್ನು ಈ ಅಪರೂಪದ ಛಾಯಾಚಿತ್ರಗಳ ಮೂಲಕ ಸೆರೆ ಹಿಡಿಯಲಾಗಿದೆ. ರಾಜ್ಯದ ಸ್ವಾತಂತ್ರ್ಯಾ ನಂತರದ ಇತಿಹಾಸವನ್ನು ಅರಿಯಲು ಈ ಪ್ರದರ್ಶನ ಪೂರಕವಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದನ್ನು ವೀಕ್ಷಿಸಿ ಪ್ರಯೋಜನ ಪಡೆದುಕೊಳ್ಳಲು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ವಿಧಾನಸೌಧ ಕಟ್ಟಡ ನಿರ್ಮಾಣದ ಶಂಕುಸ್ಥಾಪನೆಯಿಂದ ಹಿಡಿದು ಬೆಳಗಾವಿಯಲ್ಲಿ ನಿರ್ಮಿಸಲಾಗಿರುವ ಸುವರ್ಣ ಸೌಧ ಕಾಮಗಾರಿಗಳವರೆಗಿನ ಅಪರೂಪದ 200ಕ್ಕೂ ಅಧಿಕ ಛಾಯಾಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಇದುವರೆಗಿನ ರಾಜ್ಯದ ಎಲ್ಲ ಮುಖ್ಯಮಂತ್ರಿಗಳ ಪ್ರತಿಜ್ಞಾ ಸ್ವೀಕಾರ ಸಮಾರಂಭದ ಛಾಯಾಚಿತ್ರಗಳು, ವಿಧಾನಸೌಧಕ್ಕೆ ಭೇಟಿ ನೀಡಿರುವ ಪ್ರಮುಖ ವಿದೇಶಿ ಗಣ್ಯರ ಛಾಯಾಚಿತ್ರಗಳ ಸಂಗ್ರಹವನ್ನು ವೀಕ್ಷಿಸಬಹುದಾಗಿದೆ. ಪ್ರಮುಖ ಅಧಿವೇಶನಗಳು, ಇದುವರೆಗಿನ ಎಲ್ಲ ಮುಖ್ಯಮಂತ್ರಿ, ರಾಜ್ಯಪಾಲರು ಹಾಗೂ ಸಭಾಧ್ಯಕ್ಷರ ಛಾಯಾಚಿತ್ರಗಳು, ವಿಧಾನಸೌಧ ಕಟ್ಟಡಕ್ಕೆ ಅಂದಿನ ಪ್ರಧಾನಿ ಜವಾಹರ ಲಾಲ್ ನೆಹರು ಶಂಕುಸ್ಥಾಪನೆ ನೆರವೇರಿಸುತ್ತಿರುವ ಛಾಯಾಚಿತ್ರ, ಕರ್ನಾಟಕ ಎಂದು ನಾಮಕರಣ ಮಾಡಿದ ಬಳಿಕ ವಿಧಾನಸೌಧದ ಎದುರಿನಲ್ಲಿ ರಾಜ್ಯದ ನಕಾಶೆಯನ್ನು ಅನಾವರಣಗೊಳಿಸುತ್ತಿರುವ ಚಿತ್ರಗಳು ಗಮನ ಸೆಳೆಯುತ್ತವೆ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬೆಂಗಳೂರು ಭೇಟಿ, ಸಾರ್ಕ್ ಸಮಾವೇಶ, ವಿಧಾನಸಭಾ ಅಧ್ಯಕ್ಷರ ಸಮಾವೇಶ, ಬೆಳಗಾವಿಯಲ್ಲಿ ನಡೆದ ಪ್ರಥಮ ಅಧಿವೇಶನದಂತಹ ಅಪರೂಪದ ಚಿತ್ರಗಳನ್ನು ನೋಡಬಹುದಾಗಿದೆ. ಈ ಛಾಯಾಚಿತ್ರ ಪ್ರದರ್ಶನ ಭಾನುವಾರ ಸಹ ನಡೆಯಲಿದ್ದು, ಬೆಳಗ್ಗೆ 9ರಿಂದ ಸಂಜೆ 7.30ರ ವರೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.