ಜವಾಬ್ದಾರಿ ಬಗ್ಗೆ ಅರಿವು ಮುಖ್ಯ: ಕಾಮತ್
ಕಾರವಾರ: ಗ್ರಾಹಕರಿಗೆ ಇರುವ ಹಕ್ಕುಗಳಂತೆಯೇ ಜವಾಬ್ದಾರಿ ಬಗ್ಗೆ ಅರಿವು ಹೊಂದಿರುವ ಅಗತ್ಯವಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಸುಬ್ರಾಯ ಕಾಮತ್ ಹೇಳಿದರು.
ಅವರು ಜಿಲ್ಲಾಡಳಿತ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಜಿಲ್ಲಾ ಗ್ರಾಹಕರ ವೇದಿಕೆ, ಕಾನೂನು ಮಾಪನಶಾಸ್ತ್ರ ಇಲಾಖೆ, ಸರ್ಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಕಾರವಾರ ಆಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಗ್ರಾಹಕ ಕಾನೂನುಗಳ ಬಗ್ಗೆ ಎಲ್ಲರೂ ತಿಳಿದುಕೊಂಡು ಪರಸ್ಪರರಿಗೆ ಮಾಹಿತಿ ನೀಡುವುದರ ಮೂಲಕ ವ್ಯಾಪಕ ಪ್ರಚಾರ ಮಾಡಬೇಕು. ಗ್ರಾಹಕ ತನ್ನ ಹಕ್ಕುಗಳಿಗೆ ತೊಂದರೆಯಾದಾಗ ಜಿಲ್ಲಾ ಗ್ರಾಹಕ ಪರಿಹಾರಗಳ ವೇದಿಕೆ ದೂರು ನೀಡಿ ಪರಿಹಾರ ಪಡೆಯಬೇಕೆಂದು ಹೇಳಿದರು.
ಪರಿಹಾರ ಕಂಡುಕೊಳ್ಳಿ: ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷ ಕೆ. ಮನಮೋಹನ, ಗ್ರಾಹಕರಿಗಾಗಿಯೇ ಇರುವ 1986ರ ಗ್ರಾಹಕರ ಹಿತರಕ್ಷಣಾ ಕಾಯ್ದೆಯು ಎಲ್ಲರೂ ಸುಲಭವಾಗಿ ತಿಳಿದುಕೊಳ್ಳುವ ಕಾನೂನು ಆಗಿದ್ದು, ಶೋಷಣೆಗೊಳಗಾದ ಗ್ರಾಹಕರು ಜಿಲ್ಲಾ ಗ್ರಾಹಕ ವೇದಿಕೆಗೆ ದೂರು ಸಲ್ಲಿಸಿ ಪರಿಹಾರವನ್ನು ಪಡೆದುಕೊಂಡ ಬಗ್ಗೆ ಮಾಹಿತಿ ನೀಡಿದರು. ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಪ್ರಾಚಾರ್ಯ ಡಾ. ಕಲ್ಪನಾ ಕೇರವಡಿಕರ, ಗ್ರಾಹಕ ಜಾಗೃತಿ ಕಾರ್ಯಕ್ರಮವನ್ನು ಮುಖ್ಯವಾಗಿ ಶಾಲಾ ಕಾಲೇಜಿನಲ್ಲಿ ಏರ್ಪಡಿಸುವುದರಿಂದ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಗ್ರಾಹಕ ಅರಿವು ಮೂಡಲು ಸಹಾಯವಾಗುತ್ತದೆ ಎಂದರು. ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಜಿ.ಲೋಹಿತ್ ಗ್ರಾಹಕರ ಹಕ್ಕುಗಳು ಮತ್ತು ಜವಾಬ್ದಾರಿಗಳ ಕುರಿತು ಉಪನ್ಯಾಸ ನೀಡಿದರು. ಗ್ರಾಹಕರು ದೈನಂದಿನ ಜೀವನದಲ್ಲಿ ಶೋಷಣೆಗೊಳಗಾಗುವ ಸಂದರ್ಭಗಳನ್ನು ವಿವರಿಸಿ, ದೈನಂದಿನ ವ್ಯವಹಾರದಲ್ಲಿ ಜಾಗೃತರಾಗಿರುವಂತೆ ತಿಳಿಸಿದರು. ಗ್ರಾಹಕರು ಸರಕು ಮತ್ತು ಸೇವೆಗಳನ್ನು ಪಡೆಯುವಲ್ಲಿ ತೊಂದರೆಗೆ ಸಿಲುಕಿ ನಷ್ಟ ಮಾಡಿಕೊಂಡಾಗ ಕೂಡಲೇ ಗ್ರಾಹಕ ವೇದಿಕೆಯನ್ನು ಸಂಪರ್ಕಿಸಿ ದೂರು ನೀಡುವ ಬಗ್ಗೆ ಮಾಹಿತಿ ನೀಡಿದರು. ಆಹಾರ ಇಲಾಖೆ ಉಪನಿರ್ದೇಶಕ ವಿನೋದಕುಮಾರ ಹೆಗ್ಗಳಗಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕರ್ನಾಟಕ ಆಹಾರ ನಿಗಮದ ಜಿಲ್ಲಾ ವ್ಯವಸ್ಥಾಪಕ ಚೆನ್ನಯ್ಯ ನಾಯ್ಕ ಇದ್ದರು. ಕಾಲೇಜು ಪ್ರಾಧ್ಯಾಪಕ ವಿ.ಎಂ. ಗಿರಿ ನಿರೂಪಿಸಿದರು. ಚಂದ್ರಶೇಖರ ಲಮಾಣೆ ವಂದಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.