ಜಾನಪದ ಜಗಲಿಯಲ್ಲಿ ದೀಪಾರಾಧನೆ
ಹೊನ್ನಾವರ: ಉಕ ಜಿಲ್ಲೆಯ ಜಾನಪದಕ್ಕೆ ಸಂಬಂಧಿಸಿ ಆಳ ಅಧ್ಯಯನ, ಹರವು, ಸಂಗ್ರಹ, ದಾಖಲೀಕರಣ ಇವೆಲ್ಲ ವಿಷಯಗಳು ಒಂದೆಡೆ ಲಭ್ಯವಾಗುವಂತಿದ್ದರೆ ಅದು ಪ್ರಾಯಶಃ ಹೊನ್ನಾವರದ ಉದಯಗಿರಿ ಡಾ. ಎನ್.ಆರ್. ನಾಯಕ ಮತ್ತು ಅವರ ಪತ್ನಿ ಶಾಂತಿ ನಾಯಕರವರ 'ಸುಹಾಸ' ಮನೆಯ ಪಡಸಾಲೆಯೇ ಜಾನಪದ ವಸ್ತು ವೈವಿಧ್ಯಗಳ ಮ್ಯೂಸಿಯಂ.
1982ರಲ್ಲಿ ಜಾನಪದ ಪ್ರಕಾಶನ ಸಂಸ್ಥೆಯನ್ನು ಹುಟ್ಟುಹಾಕಿ, ಜಾನಪದ ಸಂಗ್ರಹ, ಸಂಪಾದನೆ, ಪ್ರಕಟಣೆಗಳ ಕೈಂಕರ್ಯವನ್ನು ಸರ್ಕಾರ ಅಥವಾ ವಿದೇಶಿ ಸಂಸ್ಥೆಗಳ ನೆರವು ಪಡೆಯದೆ ಕಟ್ಟಿಬೆಳೆಸಿ ಇಲ್ಲಿನ ಸಮೃದ್ಧ ಜಾನಪದ ಸಂಪತ್ತಿಗೆ ಬೆಳಕು ಹಾಯಿಸಿ ಬೆಳಕಾಗಿಸುವಲ್ಲಿ ಅವರು ಕಂಡುಕೊಂಡ ದಾರಿ ಜಾನಪದ ದೀಪಾರಾಧನೆ.
1983ರಿಂದ ಜಾನಪದ ದೀಪಾರಾಧನೆ ಎಂಬ ವಿನೂತನ ಕಾರ್ಯಕ್ರಮವನ್ನು ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡದ ಧರ್ಮಸ್ಥಳ, ಜಾನಪದ ಲೋಕ ಬೆಂಗಳೂರು, ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು, ಕುವೆಂಪು ವಿವಿ ಶಿವಮೊಗ್ಗ, ಕವಿವಿ ಧಾರವಾಡ, ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ, ಮುಂಬಯಿ ವಿವಿ, ಕಲಬುರ್ಗಿ ವಿವಿ, ದೆಹಲಿ ಕರ್ನಾಟಕ ಸಂಘ, ಹೀಗೆ ರಾಷ್ಟ್ರದೆಲ್ಲೆಡೆ ಈವರೆಗೆ 30 ದೀಪಾರಾಧನೆಯ ಜಾನಪದ ತಳಿ ಬೆಳಗಿದ್ದು, ನಾಡಿನ ನಾಮಾಂಕಿತ 42 ಜಾನಪದ ವಿದ್ವಾಂಸರನ್ನು, 92 ಜಾನಪದ ಕಲಾವಿದರನ್ನು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆಯನ್ನು ಸಲ್ಲಿಸಿದ 32 ಗಣ್ಯರನ್ನು ಸನ್ಮಾನಿಸಿ ಗೌರವಿಸಿದೆ.
12 ವರ್ಷಗಳಿಂದ ಸಂಸ್ಥೆಯು ಕುವೆಂಪು ದೀಪ ಪ್ರಶಸ್ತಿ, ಶಿವರಾಮ ಕಾರಾಂತ ದೀಪ ಪ್ರಶಸ್ತಿ, ದೇವಮ್ಮಾ ರಾಮ ನಾಯಕ ದೀಪ ಪ್ರಶಸ್ತಿ ಹಾಗೂ ಪ್ರತಿಭಾ ವಿದ್ಯಾರ್ಥಿ ದೀಪ ಪ್ರಶಸ್ತಿ ಎಂಬ ನಾಲ್ಕು ವಿಶೇಷ ಪ್ರಶಸ್ತಿಗಳನ್ನು ಸ್ಥಾಪಿಸಿ ನೀಡುತ್ತ ಬಂದಿದ್ದಾರೆ.
17ರಂದು ದೀಪಾರಾಧನೆ: ಸಂಸ್ಥೆ ಈ ವರ್ಷ ಸಂಯೋಜಿಸುತ್ತಿರುವ ಜಾನಪದ ದೀಪಾರಾಧನೆ 2013 ಮಾರ್ಚ್ 17ರ ಬೆಳಗ್ಗೆ 10ರಿಂದ ಸಂಜೆ 6ರ ವರೆಗೆ ಹೊನ್ನಾವರದ ಜಾನಪದ ವಿಶ್ವಪ್ರತಿಷ್ಠಾನದ ಸಭಾಂಗಣದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು ಸಂಸ್ಥೆಯ ಸಹಯೋಗದೊಂದಿಗೆ ನಡೆಯುತ್ತಿದೆ. ಶಾಸಕ ಜೆ.ಡಿ. ನಾಯ್ಕ, ಜಾನಪದ ಅಕಾಡೆಮಿ ಅಧ್ಯಕ್ಷ ಡಾ. ಬಾನಂದೂರು ಕೆಂಪಯ್ಯ, ನಾ. ಮೊಗಸಾಲೆ, ಮೂಡಬಿದ್ರೆ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ನಿಜಲಿಂಗಪ್ಪ ಮಟ್ಟಿಹಾಳ ಪಾಲ್ಗೊಳ್ಳಲಿದ್ದಾರೆ.
ಈ ಸಂದರ್ಭದಲ್ಲಿ ಜಾನಪದ ಪ್ರಕಾಶನ ಪ್ರಕಟಿಸಿದ ಡಾ. ಎನ್.ಆರ್. ನಾಯಕರ ಹಾಲುಕ್ಕಿತೋ ಹರ್ವಣ ತುಂಬಿತೋ ಹಾಗೂ ನಾಡವರ ಜನಪದ ಪುರಾಣ ಕಥನ ಕಾವ್ಯಗಳು ಎಂಬೆರಡು ಕೃತಿಗಳು ಲೋಕಾರ್ಪಣೆಗೊಳ್ಳಲಿದ್ದು ಈ ಗ್ರಂಥವನ್ನು ಪ್ರೊ. ಆರ್.ಎಸ್. ನಾಯಕ ಮತ್ತು ಅಕ್ಷತಾ ಕೃಷ್ಣಮೂರ್ತಿ ಪರಿಚಯಿಸಲಿದ್ದಾರೆ. ತರುವಾಯ ನಡೆಯಲಿರುವ ಉತ್ತರ ಕನ್ನಡದಲ್ಲಿ ಜನಪದ ಮಹಾಭಾರತ ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಡಾ. ಶ್ರೀಪಾದ ಶೆಟ್ಟಿ ವಹಿಸಿಕೊಳ್ಳಲಿದ್ದು, ಡಾ. ಸವಿತಾ ನಾಯಕ ವಿಷಯ ಪ್ರಸ್ತಾಪಿಸಲಿದ್ದಾರೆ.
ಸಂಜೆ ಸನ್ಮಾನ ಸಮಾರಂಭದಲ್ಲಿ ಶಾಸಕ ದಿನಕರ ಶೆಟ್ಟಿ, ಪತ್ರಕರ್ತ ಜಿ.ಯು. ಭಟ್ಟ ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಜಾನಪದ ವಿಶ್ವ ಪ್ರತಿಷ್ಠಾನದ ವತಿಯಿಂದ ಕುವೆಂಪು ದೀಪ ಪ್ರಶಸ್ತಿಯನ್ನು ಡಾ.ನಾ. ಮೊಗಸಾಲೆ ಮೂಡಬಿದ್ರೆ (ಸಾಹಿತ್ಯ ಮತ್ತು ಸಂಘಟನೆ), ಡಾ. ಶಿವರಾಮ ಕಾರಂತ ದೀಪ ಪ್ರಶಸ್ತಿಯನ್ನು ಸುಭ್ರಾಯ ಭಂಡಾರಿ ರಾಮನಗಿಂಡ (ಮೂರ್ತಿ ಶಿಲ್ಪ), ದೇವಮ್ಮಾ ರಾಮ ನಾಯಕ ಪೀಪ ಪ್ರಶಸ್ತಿಯನ್ನು ಜೋಸೆಫ್ ಲೋಫೆಝ್ ಗಳ್ಳಿಬೈಲ್ ಕತ್ತದ (ಕರಕುಶಲ ಕಲೆ), ಪ್ರತಿಭಾ ವಿದ್ಯಾರ್ಥಿ ದೀಪ ಪ್ರಶಸ್ತಿಯನ್ನು ಸುಷ್ಮಾ ಭಂಡಾರಿ ಮಲ್ಲಾಪುರ ಇವರಿಗೆ ಪ್ರದಾನವಾಗಲಿದೆ. ಇದೇ ವೇಳೆ ಸತ್ಯ ಹೆಗಡೆ ಹಡಿನಬಾಳ (ಯಕ್ಷಗಾನ), ಲಕ್ಷ್ಮೀ ವೆಂಕಟೇಶ ನಾಯಕ ಬಾಸಗೋಡ (ಕೃಷಿ), ಅನಂತ ತಿಮ್ಮಣ್ಣ ಗೌಡ ಸಾಲೀಕೇರಿ (ಗುಂಟೆ ಪದ), ಗಣಪಯ್ಯ ಭಟ್ಟ ಅಂಗಡಿಬೈಲ್ (ಬೆತ್ತದ ಕರಕುಶಲ ಕಲೆ) ಇವರು ಸನ್ಮಾನಿತರಾಗಲಿರುವರು. ಸಂಜೆ 4.30ರಿಂದ 6ರ ವರೆಗೆ ನಡೆಯುವ ಕಲಾಮೇಳದಲ್ಲಿ ಡಾ. ಶ್ರೀಪಾದ ಶೆಟ್ಟಿ, ಹನ್ಮಿ ಗೌಡ, ನೂಗ್ಲಿ ಗೌಡ ಹಾಗೂ ತಂಡದವರು ಜನಪದ ಗೀತೆ ಹಾಡಲಿದ್ದಾರೆ. ಅಂಗಡಿಬೈಲಿನ ನಾಗರಾಜ್ ಸಿದ್ದಿ ಮತ್ತು ತಂಡದವರು ಡಮಾಮಿ ಕುಣಿತ, ಸಾಲಿಕೇರಿಯ ರಾಮ ಗೌಡ ಮತ್ತು ತಂಡದವರಿಂದ ಕೋಲಾಟ, ಗುಮಟೆಪದ, ಅಚವೆಯ ಡಾ. ಅಂಬೇಡ್ಕರ ಸಂಘದಿಂದ ಹಳ್ಳೇರ ಸುಗ್ಗಿ ಕೋಲಾಟ ಕಾರ್ಯಕ್ರಮಗಳು ನಡೆಯಲಿವೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.