ಉತ್ತರ ಕನ್ನಡ

ಬಿಡದ ಮಳೆ: ಇಳಿಯದ ಪ್ರವಾಹ

ಕನ್ನಡಪ್ರಭ ವಾರ್ತೆ, ಶಿರಸಿ, ಆ. 1
ನಾಲ್ಕೈದು ದಿನಗಳಿಂದ ಅಬ್ಬರಿಸುತ್ತಿರುವ ಮಳೆ ಶುಕ್ರವಾರವೂ ಮುಂದುವರಿದಿದೆ. ವರದಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದ್ದರೆ ಅಘನಾಶಿನಿ ನದಿ ನೀರಿನ ಮಟ್ಟದಲ್ಲಿ ಕೊಂಚ ಇಳಿಕೆಯಾಗಿದೆ.
ಘಟ್ಟದ ಮೇಲಿನ ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಜೋಯಿಡಾ ಹಾಗೂ ಹಳಿಯಾಳ ತಾಲೂಕುಗಳಲ್ಲಿ ನಾಲ್ಕೈದು ದಿವಸಗಳಿಂದ ವರುಣರಾಯ ಅಬ್ಬರಿಸಿ ಮಳೆ ಸುರಿಸಲು ಆರಂಭಿಸಿದ್ದಾನೆ. ಮಳೆಯಿಂದಾಗಿ ಹಳ್ಳ, ಕೊಳ್ಳ, ನದಿಗಳು ತುಂಬಿ ಹರಿಯುತ್ತಿವೆ. ತಳಕಾಣುವಂತಿದ್ದ ಕೆರೆ, ಜಲಾಶಯಗಳೆಲ್ಲ ಭರ್ತಿಯಾಗಿ ತುಂಬಿ ತುಳುಕುತ್ತಿವೆ. ಮಳೆಯಿಂದಾಗಿ ಎಲ್ಲ ತಾಲೂಕುಗಳಲ್ಲಿ ವಿದ್ಯುತ್ ವ್ಯತ್ಯಯ ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಗ್ರಾಮೀಣ ಪ್ರದೇಶಗಳು ಮಳೆಯ ಹೊಡೆತಕ್ಕೆ ಸಿಲುಕಿದ್ದು, ಜನಸಾಮಾನ್ಯರು ಬವಣೆ ಅನುಭವಿಸುವಂತಾಗಿದೆ.
ಮಳೆ ವಿವರ: ಶಿರಸಿ ತಾಲೂಕಿನಲ್ಲಿ 24 ತಾಸುಗಳ ಅವಧಿಯಲ್ಲಿ 68.0 ಮಿಮೀ ಮಳೆ ಸುರಿದಿದ್ದರೆ ಒಟ್ಟು 1770.5 ಮಿಮೀ ಮಳೆಯಾಗಿದೆ. ಸಿದ್ದಾಪುರ ತಾಲೂಕಿನಲ್ಲಿ 104.2 ಮಿಮೀ ಮಳೆಯಾಗಿದ್ದರೆ ಒಟ್ಟು 2322 ಮಿಮೀ ಮಳೆಯಾಗಿದೆ. ಯಲ್ಲಾಪುರ ತಾಲೂಕಿನಲ್ಲಿ 59.2 ಮಿಮೀ ಮಳೆ ಸುರಿದಿದ್ದು ಒಟ್ಟು 1651.2 ಮಿಮೀ ಮಳೆಯಾಗಿದೆ. ಮುಂಡಗೋಡ ತಾಲೂಕಿನಲ್ಲಿ 15.2 ಮಿಮೀ ಮಳೆ ಸುರಿದಿದ್ದು, ಒಟ್ಟು 646.3 ಮಿಮೀ ಮಳೆ ಸುರಿದಿದೆ.
ಪ್ರವಾಹ: ಶಿರಸಿ ತಾಲೂಕಿನ ಪೂರ್ವ ಭಾಗವಾದ ಬನವಾಸಿ ಸುತ್ತಮುತ್ತ ವರದಾ ನದಿಗೆ ಮತ್ತೆ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಕೆಲ ದಿನಗಳಿಂದ ಬನವಾಸಿ, ಅಜ್ಜರಣಿ, ಮೊಗವಳ್ಳಿ, ಭಾಶಿಗಳ ಸುತ್ತಮುತ್ತ ವರದೆಯ ನೀರು ನಿಂತು ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆ ನಂತರ ಮಳೆ ಕಡಿಮೆಯಾದ ಕಾರಣ ನೆರೆ ಪರಿಸ್ಥಿತಿಯೂ ಕಡಿಮೆಯಾಗಿತ್ತು. ಈಗ ಮತ್ತೆ ಮಳೆ ಅಬ್ಬರಿಸುತ್ತಿರುವ ಕಾರಣ ಈ ಗ್ರಾಮಗಳ ಜನತೆ ಮತ್ತೊಮ್ಮೆ ಪ್ರವಾಹದ ಭೀತಿ ಎದುರಿಸುತ್ತಿದ್ದಾರೆ.
ಮೂರ್ನಾಲ್ಕು ದಿನಗಳ ಅವಿರತ ಮಳೆಗೆ ಅಜ್ಜರಣಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಜಿಲ್ಲೆಯ ಅತಿದೊಡ್ಡ ಕೆರೆ ಎಂದು ಪ್ರಖ್ಯಾತಿ ಗಳಿಸಿರುವ ಗುಡ್ನಾಪುರ ಕೆರೆ ಈಗಾಗಲೇ ಭರ್ತಿಯಾಗಿದ್ದು ಸಮುದ್ರದಂತೆ ಗೋಚರವಾಗುತ್ತಿದೆ.
ಮನೆಗೆ ಹಾನಿ: ಶಿರಸಿಯ ಗಣೇಶ ನಗರದಲ್ಲಿರುವ ಎರಡು ಮನೆಗಳ ಗೋಡೆಗಳು ಮಳೆಗೆ ಕುಸಿದು ಹಾನಿ ಸಂಭವಿಸಿದೆ. ರಾಮಪ್ಪ ಭೋವಿ ವಡ್ಡರ್ ಹಾಗೂ ಲಕ್ಷ್ಮೀ ಭೋವಿ ವಡ್ಡರ್ ಅವರ ಮನೆ ಗೋಡೆ ಕುಸಿದು ಹಾನಿ ಸಂಭವಿಸಿದೆ. ಸ್ಥಳಕ್ಕೆ ನಗರಸಭಾಧ್ಯಕ್ಷ ಶ್ರೀಕಾಂತ ತಾರೀಬಾಗಿಲು ಹಾಗೂ ಪೌರಾಯುಕ್ತ ಮಹೇಂದ್ರಕುಮಾರ ಸಿಬ್ಬಂದಿಯೊಂದಿಗೆ ಭೇಟಿ ನೀಡಿ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.
ನಗರದ ದೇವಿಕೆರೆ ಸರ್ಕಲ್ ಬಳಿ ಮಳೆ ರಭಸಕ್ಕೆ ಮಹೇಶ ನಾಯ್ಕ ಅವರ ಮನೆ ಅಡುಗೆ ಕೋಣೆಗಳು ಕುಸಿದಿವೆ. ಆದರೆ, ಅಡುಗೆ ಕೋಣೆಯಲ್ಲಿ ಮಗುವಿಗೆ ಉಟ ಮಾಡಿಸುತ್ತಿದ್ದ ಮಹೇಶ ನಾಯ್ಕ ಅವರ ಪತ್ನಿ ಹಾಗೂ ಅವರ ಮಗ ಅಪಾಯದಿಂದ ಪಾರಾಗಿದ್ದಾರೆ.
ಬೆಳೆ ನಷ್ಟ: ತಾಲೂಕಿನ ಬಂಡಲ ಗ್ರಾಪಂ ವ್ಯಾಪ್ತಿಯ ದೇವಿಮನೆಯಿಂದ ಎಮ್ಮೆಗುಂಡಿಗೆ ಹೋಗುವ ರಸ್ತೆಯ ಮಧ್ಯದ ಸಿಡಿಗಳ ಮೇಲೆ ಭಾರಿ ಪ್ರಮಾಣದ ನೀರು ಹರಿದಿದ್ದರಿಂದ ಸಿಡಿಯ ಮೇಲಿನ ಮಣ್ಣು ಕೊಚ್ಚಿ ಹೋಗಿದೆ. ಇದರಿಂದ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಇದೇ ಊರಿನಲ್ಲಿ ಅಡಕೆ ತೋಟ ಹಾಗೂ ಬತ್ತದ ಗದ್ದೆಗೆ ಮಳೆ ನೀರು ನುಗ್ಗಿ ಭಾರಿ ಹಾನಿ ಸಂಭವಿಸಿದೆ. ಎಮ್ಮೆಗುಂಡಿಯ ಮಧುಕೇಶ್ವರ ಮಂಜುನಾಥ ಹೆಗಡೆ, ಲಲಿತಾ ರಾಮಚಂದ್ರ ಹೆಗಡೆ ಹಾಗೂ ಇತರರಿಗೆ ಸೇರಿದ ನಾಲ್ಕು ಎಕರೆ ಅಡಕೆ ತೋಟಕ್ಕೆ ಇದರಿಂದ ಹಾನಿಯುಂಟಾಗಿದೆ. ತೋಟದಲ್ಲಿನ ಅಡಕೆ ಗಿಡಗಳು ಹಾಗೂ ಬಾಳೆ ಮರಗಳ ಬುಡದ ಮಣ್ಣು ಕೊಚ್ಚಿ ಹೋಗಿದೆ. ಅಡಕೆ ಗಿಡದ ಬೇರುಗಳು ಕಾಣಿಸಿಕೊಳ್ಳುತ್ತಿದ್ದರೆ, ಬಾಳೆ ಮರಗಳು ಉರುಳಿ ಬೀಳುತ್ತಿವೆ. ಬತ್ತದ ಗದ್ದೆಯಲ್ಲಿ ನಾಟಿ ಮಾಡಿದ್ದ ಸಸಿಗಳು ಮಳೆ ನೀರಿಗೆ ಕೊಚ್ಚಿಕೊಂಡು ಹೋಗಿವೆ.
ವಿದ್ಯುತ್, ದೂರವಾಣಿ ಸಂಪರ್ಕ ಕಡಿತ: ಸಿದ್ದಾಪುರ ತಾಲೂಕಿನಲ್ಲಿ ಮಳೆ ಅಬ್ಬರ ಮುಂದುವರಿದಿದ್ದರೂ ಅಘನಾಶಿನಿ ನದಿಯಲ್ಲಿ ನೀರಿನ ಮಟ್ಟದಲ್ಲಿ ಇಳಿಕೆಯಾಗಿದೆ. ಗುರುವಾರ ಬೆಳಗ್ಗೆ ಮಾನಿ ಹೊಳೆ ಸೇತುವೆ ಮೇಲೆ 5 ಅಡಿಗಳಷ್ಟು ನೀರು ಹರಿದಿದೆ. ಆದರೆ, ಶುಕ್ರವಾರ ನದಿಯಲ್ಲಿ ನೀರಿನ ಮಟ್ಟ ಇಳಿಕೆಯಾಗಿದೆ. ಸರಕುಳಿ ಗ್ರಾಮದ ನೇರಲಮನೆ ಗದ್ದೆಯಲ್ಲಿ ಮನೆ ಕುಸಿದಿದೆ. ಜನಾರ್ದನ ಗಂಗಾಧರ ಗೌಡಗೆ ಸೇರಿದ್ದ ಮನೆ ಇದಾಗಿದ್ದು, ಮನೆ ಕುಸಿತದಿಂದ ಸುಮಾರು # 80 ಸಾವಿರ ಮೌಲ್ಯದ ಹಾನಿ ಸಂಭವಿಸಿದೆ. ಮಳೆಯ ಕಾರಣದಿಂದಾಗಿ ವಿದ್ಯುತ್ ವ್ಯತ್ಯಯ ಸಂಭವಿಸಿದೆ. ದೂರವಾಣಿ ಸಂಪರ್ಕ ಕೂಡ ಕಡಿತಗೊಂಡಿದೆ. ಜನಸಾಮಾನ್ಯರು ಇದರಿಂದ ರೋಸಿ ಹೋಗಿದ್ದು ಹೆಸ್ಕಾಂ ಹಾಗೂ ದೂರವಾಣಿ ಇಲಾಖೆಗೆ ಶಾಪ ಹಾಕುತ್ತಿದ್ದಾರೆ.
ಯಲ್ಲಾಪುರ ತಾಲೂಕಿನಲ್ಲಿ ಮಳೆಯ ಅಬ್ಬರದಿಂದ ಬೇಡ್ತಿ, ಕಾಳಿ ನದಿಗಳಲ್ಲಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಜೋಯಿಡಾ ತಾಲೂಕಿನಲ್ಲಿಯೂ ಮಳೆ ಅಬ್ಬರಿಸುತ್ತಿದ್ದು, ಕಾಳಿ ನದಿಯ ಉಪನದಿಗಳಲ್ಲಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಮಳೆಯಿಂದಾಗಿ ಹಲವಾರು ಗ್ರಾಮಗಳು ಹೊರ ಜಗತ್ತಿನ ಸಂಪರ್ಕ ಕಡಿದುಕೊಂಡಿವೆ. ದಾಂಡೇಲಿಯಲ್ಲಿ ಮಳೆ ಉತ್ತಮವಾಗಿದೆ. ಹಳಿಯಾಳ ತಾಲೂಕಿನಲ್ಲಿಯೂ ಮಳೆ ಚೆನ್ನಾಗಿ ಸುರಿಯುತ್ತಿದೆ. ಮುಂಡಗೋಡ ತಾಲೂಕಿನಲ್ಲಿ ಮಳೆಯ ಅಬ್ಬರಕ್ಕೆ ಜಲಾಶಯಗಳು ಭರ್ತಿಯಾಗಿವೆ. ಬಾಚಣಕಿ, ಸನವಳ್ಳಿ, ಮಳಗಿ ಈ ಮುಂತಾದ ಪ್ರಮುಖ ಜಲಾಶಯಗಳು ಭರ್ತಿಯಾಗಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಬಲಿತ ದಲಿತ'ನೇ, ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು?: ಖರ್ಗೆ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ

ಪೊಲೀಸ್ ಕಮಿಷನರ್ ಕಚೇರಿ ಮುಂದೆ HDK ಧರಣಿ: ಸ್ಟಿಂಗ್‌ ರೂವಾರಿಯ ಬಂಧನಕ್ಕೆ ಆಗ್ರಹ; ಎರಡು ದಿನಗಳ ಡೆಡ್‌ಲೈನ್‌!

Indian Stock Market: ಕೊನೆಗೂ ಪುಟಿದಿದ್ದ ಭಾರತೀಯ ಷೇರು ಮಾರುಕಟ್ಟೆ, ಸೆನ್ಸೆಕ್ಸ್ ದಾಖಲೆಯ ಏರಿಕೆ

T20 ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಮಾಡದ ಅಪರೂಪದ ವಿಶ್ವ ದಾಖಲೆ ಬರೆದ ಪಾಕ್ ಕ್ಯಾಪ್ಟನ್!

ಆಯ್ಕೆ ಸಮಿತಿ ಅಧ್ಯಕ್ಷರ ಆಯ್ಕೆ ಕಸರತ್ತು; BCCI ಆಫರ್ ತಿರಸ್ಕರಿಸಿದ ಸ್ಟಾರ್‌ ಗಳು, 100 ಟೆಸ್ಟ್‌ ಅನುಭವಿ ಆಟಗಾರರಿಂದಲೇ ನಕಾರ?