ಬೆಳಗಾವಿಯ ಶನೀಶ್ವರ ದೇವಸ್ಥಾನ
ಬೆಳಗಾವಿ: ಇಲ್ಲಿನ ಶನೀಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಕಾರಣ ಲೋಕಸಭೆ ಚುನಾವಣೆ. ಚುನಾವಣೆಯಲ್ಲಿ ಗೆದ್ದುಬರಲು ರಾಜಕೀಯ ನಾಯಕರು ಇಲ್ಲಿನ ಶನೀಶ್ವರನನ್ನು ಮೊರೆ ಹೋಗುತ್ತಾರೆ. ಶನೀಶ್ವರ ದೇವಸ್ಥಾನಕ್ಕೆ ಹೋಗಿ ದೇವರಿಗೆ ಕೈಮುಗಿದರೆ ದೇವರು ವರ ಕೊಡುತ್ತಾನೆ ಎಂಬ ನಂಬಿಕೆ ಹಿಂದಿನಿಂದಲೂ ಇದೆ.
ಬೆಳಗಾವಿ ನಗರದ ಹೃದಯಭಾಗದಲ್ಲಿರುವ ಪಾಟೀಲ್ ಗಲ್ಲಿಯಲ್ಲಿ ಶನೀಶ್ವರ ದೇವಸ್ಥಾನವಿದೆ. ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ಚುನಾವಣೆ ಸಮಯದಲ್ಲಿ ಅಭ್ಯರ್ಥಿಗಳು ಬಂದು ಹೋಗುತ್ತಾರೆ. ಪ್ರತಿ ಶನಿವಾರ ಈ ದೇವಸ್ಥಾನಕ್ಕೆ ಹೋಗುವ ಮಾರ್ಗ ದೊಡ್ಡ ದೊಡ್ಡ ಕಾರು, ವಾಹನಗಳಿಂದ ತುಂಬಿ ತುಳುಕುತ್ತಿರುತ್ತದೆ. ಪೊಲೀಸರು ಭದ್ರತೆ ಕೊಡಬೇಕಾಗುತ್ತದೆ.
ಕೇವಲ ಬೆಳಗಾವಿ ಜಿಲ್ಲೆಯ ಮತ್ತು ಕರ್ನಾಟಕದ ಬೇರೆ ಜಿಲ್ಲೆಗಳ ರಾಜಕೀಯ ಮುಖಂಡರು ಮಾತ್ರವಲ್ಲದೆ ಮಹಾರಾಷ್ಟ್ರ, ಆಂಧ್ರ ಪ್ರದೇಶಗಳಿಂದಲೂ ರಾಜಕೀಯ ನಾಯಕರು ಬರುತ್ತಾರೆ. 125 ವರ್ಷಗಳ ಹಳೆಯ ಈ ದೇವಸ್ಥಾನದಲ್ಲಿ ಇತ್ತೀಚೆಗೆ ವಿಶೇಷ ಪೂಜೆ ನಡೆಸುತ್ತಾರೆ. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ದಿವಂಗತ ಜೆ ಹೆಚ್ ಪಟೇಲ್ ಅವರ ಪತ್ನಿ, ಮಾಜಿ ರಾಜ್ಯಪಾಲರುಗಳಾದ ವಿ ಎಸ್ ರಮಾದೇವಿ, ತ್ರಿಲೋಕಿ ನಾಥ್ ಚತುರ್ವೇದಿ ಮೊದಲಾದವರು ಈ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ.
ಈ ಬಾರಿ ನಮ್ಮ ರಾಜ್ಯ ಸೇರಿದಂತೆ ಆಂಧ್ರ ಪ್ರದೇಶ, ತಮಿಳು ನಾಡು, ಗೋವಾ ಮತ್ತು ಮಹಾರಾಷ್ಟ್ರಗಳ ರಾಜಕೀಯ ಅಭ್ಯರ್ಥಿಗಳು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಕಳೆದೊಂದು ವಾರದಲ್ಲಿ ಕನಿಷ್ಠ ಏಳು ಅಭ್ಯರ್ಥಿಗಳು ಇಲ್ಲಿ ತಮ್ಮ ಗೆಲುವಿಗಾಗಿ ಪೂಜೆ ಸಲ್ಲಿಸಿದ್ದಾರೆ.