ಬೆಂಗಳೂರು: ರಾಜ್ಯದ 2018ರ ವಿಧಾನಸಭಾ ಚುನಾವಣೆಯಲ್ಲಿ ನೋಂದಾಯಿಸಿಕೊಂಡಿದ್ದ ಸೇವಾ ಮತದಾರರ ಪೈಕಿ ಶೇ.10.4ರಷ್ಟು ಮತದಾರರು ಮಾತ್ರ ಹಕ್ಕು ಚಲಾಯಿಸಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದ್ದಾರೆ.
ಚುನಾವಣಾ ಅಯೋಗ ಮಂಗಳವಾರ ನಗರದಲ್ಲಿ ಹಮ್ಮಿಕೊಂಡಿದ್ದ ಸೇವಾ ಮತದಾರರಿಗೆ ಅಂಚೆ ಮೂಲಕ ಮತ ಚಲಾವಣೆ(ಪೋಸ್ಟಲ್ ಬ್ಯಾಲೆಟ್) ಹಾಗೂ ಇತರ ಸೌಲಭ್ಯಗಳ ಕುರಿತು ಮಾಹಿತಿ ನೀಡುವ ಕಾರ್ಯಾಗಾರದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಸೇನಾ ಸಿಬ್ಬಂದಿ, ಸಿಆರ್ ಪಿಎಫ್ ಯೋಧರು, ದೇಶದಿಂದ ಹೊರಗೆ ರಾಯಭಾರಿ ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವ ಕೇಂದ್ರ ಸರ್ಕಾರದ ಉದ್ಯೋಗಿಗಳು ಹಾಗೂ ರಾಜ್ಯ ಪೊಲೀಸ್ ಪಡೆ ಸೇರಿ ರಾಜ್ಯದ ನಿಗದಿತ ಸರ್ಕಾರಿ ಉದ್ಯೋಗಿಗಳನ್ನು ಸೇವಾ ಮತದಾರರು ಎಂದು ಪರಿಗಣಿಸಲಾಗುತ್ತದೆ ಎಂದರು.
ಪ್ರಸಕ್ತ ಚುನಾವಣೆಗೆ ರಾಜ್ಯದಲ್ಲಿ ಇಲ್ಲಿಯವರೆಗೆ ಒಟ್ಟು 38, 735 ಪುರುಷ ಹಾಗೂ 804 ಮಹಿಳೆಯರು ಸೇರಿ ಒಟ್ಟು 39,539 ಸೇವಾ ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ. ದಕ್ಷಿಣ ಕನ್ನಡದ 14 ಕ್ಷೇತ್ರಗಳಲ್ಲಿ ಈಗಾಗಲೇ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದೆ. ಉತ್ತರ ಕರ್ನಾಟಕ ಜಿಲ್ಲೆಯ 14 ಕ್ಷೇತ್ರಗಳಿಗೆ ಇನ್ನೂ ನೋಂದಣಿ ಪ್ರಕ್ರಿಯೆ ಜಾರಿಯಲ್ಲಿದೆ ಎಂದರು.
ಸೇವಾ ಮತದಾರರ ಸೌಲಭ್ಯ ಕುರಿತು ಸಾಕಷ್ಟು ಅರಿವು ಮೂಡಿಸಿದ ನಂತರವೂ, ಮತದಾನದ ಪ್ರಮಾಣ ನಿರೀಕ್ಷಿತ ಮಟ್ಟಕ್ಕೆ ತಲುಪಿಲ್ಲ. 2018ರ ವಿಧಾನಸಭಾ ಚುನಾವಣೆಯಲ್ಲಿ 28,633 ಸೇವಾ ಮತದಾರರು ನೋಂದಣಿ ಮಾಡಿಕೊಂಡಿದ್ದರೂ, ಮತದಾನ ಮಾಡಿದ್ದು ಶೇ.10.4ರಷ್ಟು ಅಂದರೆ, ಕೇವಲ 3,060 ಮತದಾರರು ಮಾತ್ರ. ದೇಶದಲ್ಲಿರುವ ಒಟ್ಟು 16 ಲಕ್ಷ ಸೇನಾ ಯೋಧರ ಪೈಕಿ ರಾಜ್ಯದಲ್ಲಿ ಕನಿಷ್ಠ 80 ಸಾವಿರ ಯೋಧರಿದ್ದಾರೆ ಎಂದು ಅಂದಾಜಿಸಬಹುದಾಗಿದೆ. ಸೇವಾ ಮತದಾರರು ದಾಖಲೆಗಳನ್ನು ಬಹಿರಂಗಗೊಳಿಸಲು ಅನುಮತಿ ಇಲ್ಲ. ಆದ್ದರಿಂದ ಅವರ ನಿರ್ಧಿಷ್ಟ ಸಂಖ್ಯೆಯ ಕುರಿತು ತಮಗೆ ಮಾಹಿತಿ ದೊರೆಯುವುದಿಲ್ಲ ಎಂದರು.
ಬೆಳಗಾವಿ ಗರಿಷ್ಠ, ಬೆಂಗಳೂರು ಕನಿಷ್ಠ
ಇಲ್ಲಿಯವರೆಗೆ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ 1991, ಯಮಕನಮರಡಿಯಲ್ಲಿ 1757, ಗೋಕಾಕ್ ನಲ್ಲಿ 1573, ಖಾನ್ ಪುರದಲ್ಲಿ 1501, ಕಿತ್ತೂರಿನಲ್ಲಿ 1408, ಹುಕ್ಕೇರಿಯಲ್ಲಿ 1353 ಹಾಗೂ ಬೆಂಗಳೂರಿನ ಶಿವಾಜಿನಗರದಲ್ಲಿ 1, ಬೊಮ್ಮನಹಳ್ಳಿಯಲ್ಲಿ 2, ಜಯನಗರದಲ್ಲಿ 3, ಯಾದಗಿರಿಯಲ್ಲಿ 4, ಗೋವಿಂದರಾಜನಗರದಲ್ಲಿ 4, ಚಾಮರಾಜಪೇಟೆಯಲ್ಲಿ 4, ಚಿಕ್ಕಪೇಟೆಯಲ್ಲಿ 4, ಬಸವನಗುಡಿಯಲ್ಲಿ 4, ವಿಜಯನಗರದಲ್ಲಿ 6 ಹಾಗೂ ಆನೇಕಲ್ ನಲ್ಲಿ 6 ಸೇರಿ 38 ಮತದಾರರು ಮಾತ್ರ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದರು.
ಸೇವಾ ಮತದಾರರಾದ ಸೇನಾ ಯೋಧರು ಫಾರ್ಮ್ 2, ಸೇನಾ ಪೊಲೀಸ್ ಪಡೆ ಫಾರ್ಮ್ 2ಎ, ವಿದೇಶಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸರ್ಕಾರಿ ಅಧಿಕಾರಿಗಳು ಫಾರ್ಮ್ 3 ಭರ್ತಿ ಮಾಡಿ, ತಮ್ಮ ಕ್ಷೇತ್ರಗಳನ್ನು ಉಲ್ಲೇಖಿಸಿ, ರೆಕಾರ್ಡ್ ಅಧಿಕಾರಿ ಇಲ್ಲವೇ ನೋಡಲ್ ಅಧಿಕಾರಿಗೆ ಸಲ್ಲಿಸಬೇಕು. ಇದರ ಜೊತೆಗೆ, ಸೇವಾ ಮತದಾರರು ತಮ್ಮ ಪರವಾಗಿ ಇತರರಿಗೆ ಮತ ಚಲಾಯಿಸುವ ಅಧಿಕಾರ (ಪ್ರಾಕ್ಸಿ) ನೀಡುವ ಅವಕಾಶವಿದೆ. ತಮ್ಮ ಕ್ಷೇತ್ರದಿಂದ ಹೊರಗಿರುವರು, ತಮ್ಮ ಪತ್ನಿ, ತಂದೆ ತಾಯಿ ಇಲ್ಲವೇ ಇತರರನ್ನು ಪ್ರಾಕ್ಸಿಯಾಗಿ ನೇಮಿಸಬಹುದು. ಪ್ರಾಕ್ಸಿಯಾದವರು ಈ ಸಂಬಂಧ ನೋಟರಿ ದಾಖಲೆ ಪಡೆಯುವುದು ಕಡ್ಡಾಯ ಎಂದು ಅವರು ಮಾಹಿತಿ ನೀಡಿದರು.
ಅಂಚೆ ಮೂಲಕ ಸೇವಾ ಮತದಾರರು ಮತಗಳನ್ನು ಕಳುಹಿಸಿದ ಮೇಲೆ ಒಟಿಪಿ (ಒಂದು ಬಾರಿಯ ಪಾಸ್‍ವರ್ಡ್ )ಮೂಲಕ ಮತದಾರರ ಖಾತರಿ ಪಡೆಯಲಾಗುವುದು ಎಂದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos