ನವದೆಹಲಿ: ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಚಾರ್ಜ್ ಶೀಟ್ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಮೌನವನ್ನು ಪ್ರಶ್ನಿಸಿರುವ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು, 'RG', 'AP', 'FAM' ಯಾರು ಅಂತ ರಾಹುಲ್ ಉತ್ತರಿಸಬೇಕು ಎಂದು ಶುಕ್ರವಾರ ಒತ್ತಾಯಿಸಿದ್ದಾರೆ.
ಇಂದು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಜೇಟ್ಲಿ, ಇಡಿ ದಾಖಲೆಗಳಲ್ಲಿ ಪ್ರಸ್ತಾಪಿಸಿರುವ ಆರ್ ಜಿ, ಎಪಿ ಮತ್ತು ಎಫ್ಎಎಂ ಯಾರು ಅಂತ ಕಾಂಗ್ರೆಸ್ ಉತ್ತರಿಸಬೇಕು ಎಂದರು.
ಬಹುಕೋಟಿ ಹಗರಣದಲ್ಲಿ ಆರೋಪಿಯಾಗಿರುವ ವ್ಯಕ್ತಿ ಸಾಮಾನ್ಯ ವ್ಯಕ್ತಿಯಲ್ಲ. ದೇಶದ ಪ್ರಧಾನಿಯಾಗುವ ಕನಸು ಕಾಣುತ್ತಿರುವ ವ್ಯಕ್ತಿ. ಹೀಗಾಗಿ ಅವರು(ರಾಹುಲ್ ಗಾಂಧಿ) ತಮ್ಮ ವಿರುದ್ಧದ ಗಂಭೀರ ಆರೋಪಗಳಿಗೆ ಉತ್ತರಿಸಬೇಕು ಎಂದು ಜೇಟ್ಲಿ ಒತ್ತಾಯಿಸಿದ್ದಾರೆ.
ನೀವು ಸತ್ಯವನ್ನು ಮರೆಮಾಚಲು ಯತ್ನಿಸಿದರೆ ಅದು ಮತ್ತಷ್ಟು ಹೆಚ್ಚು ಹರಡುತ್ತದೆ. ಆದ್ದರಿಂದ ಕಾಂಗ್ರೆಸ್ ಇದಕ್ಕೆ ಉತ್ತರವನ್ನು ನೀಡಬೇಕು ಎಂದು ಹಣಕಾಸು ಸಚಿವರು ಆಗ್ರಹಿಸಿದ್ದಾರೆ.
ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣಕ್ಕೆ ಸಂಬಂಧಿಸಿದಂತೆ ನಿನ್ನೆ ಜಾರಿ ನಿರ್ದೇಶನಾಲಯ ಸಿಬಿಐ ವಿಶೇಷ ನ್ಯಾಯಾಲಯಕ್ಕೆ 52 ಪುಟಗಳ ಹೆಚ್ಚುವರಿ ಚಾರ್ಜ್‍ಶೀಟ್ ಸಲ್ಲಿಸಿದ್ದು, ಪ್ರಮುಖವಾಗಿ ಡೈರಿಯಲ್ಲಿ ಉಲ್ಲೇಖ ಮಾಡಿದ್ದ ‘AP’ ಕೋಡ್ ಅಂದರೆ ಅಹಮದ್ ಪಟೇಲ್ ಎಂದು ತಿಳಿಸಿದ್ದು, ಉಳಿದಂತೆ ‘FAM’ ಹೆಸರು ಉಲ್ಲೇಖವಾಗಿದೆ. ಆರ್ ಜಿ ಯಾರು ಎನ್ನುವುದನ್ನು ಪತ್ತೆ ಹಚ್ಚುತ್ತೇವೆ ಎಂದು ತಿಳಿಸಿದೆ. ಈ ವ್ಯಕ್ತಿಗೆ 50 ಕೋಟಿ ರೂ. ಗಳನ್ನು ಸಂದಾಯ ಮಾಡಲಾಗಿರುವ ಮಾಹಿತಿ ಡೈರಿಯಲ್ಲಿ ಸಿಕ್ಕಿದೆ ಎಂದು ಇಡಿ ಚಾರ್ಜ್‍ಶೀಟ್ ನಲ್ಲಿ ತಿಳಿಸಿದೆ.
AP’ ಎಂದರೆ ಅಹ್ಮದ್ ಪಟೇಲ್, ‘FAM’ ಅಂದರೆ ಫ್ಯಾಮಿಲಿ ಎಂದು ವಿಚಾರಣೆಯ ವೇಳೆ ಮೈಕಲ್ ಹೇಳಿರುವುದಾಗಿ ಇಡಿ ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಿದೆ. ಒಪ್ಪಂದ ಜಾರಿ ಮಾಡುವ ವೇಳೆ ರಕ್ಷಣಾ ಅಧಿಕಾರಿಗಳು, ಮಧ್ಯವರ್ತಿಗಳು, ಆಡಳಿತಾಧಿಕಾರಿಗಳು, ಆಡಳಿತ ಪಕ್ಷದ ಪ್ರಮುಖ ನಾಯಕರಿಗೆ ಕಿಕ್ ಬ್ಯಾಕ್ ಹಣವನ್ನು ನೀಡಲಾಗಿದೆ. ಈ ಹಣ ಹವಾಲ ರೂಪದಲ್ಲಿ ಸಲ್ಲಿಕೆಯಾಗಿದೆ ಎಂದು ಅಕ್ರಮ ಹಣ ವರ್ಗಾವಣೆ ನಿಷೇಧ ಕಾಯ್ದೆ (ಪಿಎಂಎಲ್ ಎ) ಅಡಿಯಲ್ಲಿ ಇಡಿ ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ವಿವರಿಸಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos