ಅರುಣ್ ಜೇಟ್ಲಿ, ರಾಹುಲ್ ಗಾಂಧಿ
ನವದೆಹಲಿ: ವಿದ್ಯಾರ್ಹತೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಬೆಂಬಲಕ್ಕೆ ನಿಂತಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಾಸ್ಟರ್ ಡಿಗ್ರಿ ಮಾಡದೆ ಎಂಫಿಲ್ ಪಡೆದಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಅಮೇಥಿಯ ಬಿಜೆಪಿ ಅಭ್ಯರ್ಥಿಯ ಶೈಕ್ಷಣಿಕ ಅರ್ಹತೆಗೆ ಸಂಬಂಧಿಸಿದಂತೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಆದರೆ ರಾಹುಲ್ ಗಾಂಧಿ ಅವರು ತಮ್ಮ ಶೈಕ್ಷಣಿಕ ಅರ್ಹತೆ ಬಗ್ಗೆಯೂ ಜನರಿಗೆ ಉತ್ತರಿಸಬೇಕಾಗುತ್ತದೆ. ಅವರು ಮಾಸ್ಟರ್ ಡಿಗ್ರಿ ಪಡೆಯದೇ ಎಂಫಿಲ್ ಪದವಿ ಪಡೆದಿದ್ದಾರೆ ಎಂದು ಅರುಣ್ ಜೇಟ್ಲಿ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.
ಕಳೆದ ಗುರುವಾರ ಅಮೇಥಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸ್ಮೃತಿ ಇರಾನಿ ಅವರ ಪದವಿ ಪೂರ್ಣಗೊಂಡಿಲ್ಲ ಎಂಬ ವಿಷಯ ತೀವ್ರ ಚರ್ಚೆ ಕಾರಣವಾಗಿದ್ದು, ಈಗ ದೃಢಪಟ್ಟಿದೆ. ಈ ಕುರಿತು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಇದೇ ಮೊದಲ ಬಾರಿಗೆ ಅವರು ಸ್ಪಷ್ಟಪಡಿಸಿದ್ದಾರೆ.
ಕಳೆದ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದಾಗ ತಮ್ಮದು ಪದವಿ ಆಗಿದೆಯೆಂದು ಸ್ಮೃತಿ ಇರಾನಿ ಅವರು ನಾಮಪತ್ರದಲ್ಲಿ ನಮೂದಿಸಿದ್ದರು, ಆದರೆ ಈ ಬಾರಿ ಸಲ್ಲಿಸಿರುವ ನಾಮಪತ್ರದಲ್ಲಿ ದ್ವಿತೀಯ ಪಿಯುಸಿ ಮಾತ್ರವೇ ಪೂರ್ತಿ ಆಗಿದೆ ಎಂದು ನಮೂದಿಸಿದ್ದಾರೆ. ಇದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್, ಇದು ಗಂಭೀರ ವಿಷಯವಾಗಿದ್ದು, ಇದೊಂದು ಭ್ರಷ್ಟ ಅಭ್ಯಾಸ. ಸ್ಮೃತಿ ಅವರು ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.