ತಾಯಿ ಹೀರಾಬೆನ್ ಆಶೀರ್ವಾದ ಪಡೆದ ಪ್ರಧಾನಿ ನರೇಂದ್ರ ಮೋದಿ
ಅಹ್ಮದಾಬಾದ್: ಗುಜರಾತ್ ರಾಜ್ಯದಲ್ಲಿ ಮಂಗಳವಾರ ಮತದಾನ. ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಮತಗಟ್ಟೆಗೆ ತೆರಳಿ ಮತದಾನ ಮಾಡುವ ಮುನ್ನ ತಮ್ಮ ತಾಯಿ ಹೀರಾಬೆನ್ ಮೋದಿಯವರ ಬಳಿ ತೆರಳಿ ಆಶೀರ್ವಾದ ಪಡೆದರು.
ಅಹಮದಾಬಾದ್ ಸಮೀಪ ರೈಸನ್ ಎಂಬ ಗ್ರಾಮದಲ್ಲಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಮೋದಿ ತಮ್ಮ ಕಿರಿ ಪುತ್ರ ಪಂಕಜ್ ಮೋದಿ ಜೊತೆ ವಾಸಿಸುತ್ತಿದ್ದು ಅಲ್ಲಿಗೆ ತೆರಳಿದ್ದ ಮೋದಿ ತಾಯಿಯ ಆಶೀರ್ವಾದ ಪಡೆದರು.
ಗಾಂಧಿನಗರದ ರಾಜಭವನದಲ್ಲಿ ಕಳೆದ ರಾತ್ರಿ ತಂಗಿದ್ದ ನರೇಂದ್ರ ಮೋದಿ ಇಂದು ಬೆಳಗ್ಗೆ ಕೇವಲ ಒಂದು ಭದ್ರತಾ ವಾಹನದೊಂದಿಗೆ ನೇರವಾಗಿ ತಮ್ಮ ತಾಯಿ ಮನೆಗೆ ಹೋದರು. ಅಲ್ಲಿ ತಮ್ಮ ತಾಯಿಯ ಆಶೀರ್ವಾದ ಪಡೆದು ಪಕ್ಕದಲ್ಲಿ ಕುಳಿತು ಒಬ್ಬರಿಗೊಬ್ಬರು ಸಿಹಿ ತಿನ್ನಿಸಿದರು. ಮಗನಿಗೆ ತಾಯಿಯಿಂದ ಶಾಲು, ತೆಂಗಿನಕಾಯಿಯ ಉಡುಗೊರೆ ಸಿಕ್ಕಿತು. ಸುಮಾರು 20 ನಿಮಿಷಗಳ ಕಾಲ ತಾಯಿಯೊಂದಿಗೆ ಮಾತನಾಡುತ್ತಾ ಮೋದಿ ಕಾಲ ಕಳೆದರು.