ರಾಯ್ ಬರೇಲಿ: ಅಮೇಥಿಯಲ್ಲಿ ರಾಹುಲ್ ಗಾಂಧಿ ಸೋತದ್ದಾದರೆ ತಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಕ್ರಿಕೆಟಿಗ, ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.
ರಾಷ್ಟ್ರೀಯತೆ ಎಂದರೇನೆಂದು ಜನರು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ನೋಡಿ ಕಲಿಯಬೇಕು ಎಂದಿರುವ ಸಿಧು ಒಂದೊಮ್ಮೆ ಅಮೇಥಿಯಲ್ಲಿ ರಾಹುಲ್ ಗಾಂಧಿ ಪರಾಭವಗೊಂಡರೆ ತಾನು ರಾಜಕೀಯದಿಂದ ದೂರ ಸರಿಯುವುದಾಗಿ ಅವರು ಹೇಳಿದರು.
ಈ ಹಿಂದೆ ಬಿಜೆಪಿ ಸದಸ್ಯರಾಗಿದ್ದ ಸಿಧು ಕಳೆದ ಕೆಲ ತಿಂಗಳಿನಿಂದ ಕಾಂಗ್ರೆಸ್ ಗೆ ಸೇರಿ ಪಂಜಾಬ್ ಸರ್ಕಾರದಲ್ಲಿ ಸಚಿವರಾಗಿದ್ದಾರೆ.
ಕಳೆದ 70 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಯಾವುದೇ ಅಭಿವೃದ್ದಿಯಾಗಿಲ್ಲ ಎಂಬ ಬಿಜೆಪಿ ಆರೋಪವನ್ನು ಅಲ್ಲಗೆಳೆದ ಸಿಧು ದೇಶದಲ್ಲಿ ಸೂಜಿಯಿಂದ ವಿಮಾನದವರೆಗೆ ಎಲ್ಲವೂ ಅಭಿವೃದ್ದಿಯಾಗಿದೆ ಎಂದಿದ್ದಾರೆ.
ರಾಯ್ ಬರೇಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸೋನಿಯಾ ಗಾಂಧಿಯವರನ್ನು ಹಾಡಿ ಹೊಗಳಿರುವ ಸಿಧು ರಾಜೀವ್ ಗಾಂಧಿ ಮೃತಪಟ್ಟ ಬಳಿಕ ಸೋನಿಯಾ ಕಾಂಗ್ರೆಸ್ ನಾಯಕತ್ವ ವಹಿಸಿಕೊಂಡಿದ್ದು ಅವರು ಉತ್ತಮ ನಾಯಕಿಯಾಗಿದ್ದಾರೆ, ಕೇಂದ್ರದಲ್ಲಿ ಯುಪಿಎ ಹತ್ತು ವರ್ಷಗಳ ಕಾಲ ಅಧಿಕಾರದಲ್ಲಿತ್ತೆಂದರೆ ಅದಕ್ಕೆ ಸೋನಿಯಾ ಅವರ ನಾಯಕತ್ವವೇ ಕಾರಣ ಎಂದಿದ್ದಾರೆ.
ರಾಷ್ಟ್ರೀಯತೆ ವಿಚಾರವಾಗಿ ಮಾತನಾಡಿದ ಸಿಧು ಬಿಜೆಪಿ ಪರವಾಗಿ ಮಾತನಾಡುವವರನ್ನು ಇಂದು ರಾಷ್ಟ್ರಭಕ್ತರೆನ್ನಲಾಗುತ್ತಿದೆ, ಉಳಿದವರೆಲ್ಲರನ್ನೂ ರಾಷ್ಟ್ರ ವಿರೋಧಿಗಳೆಂದು ಬಿಂಬಿಸಲಾಗುತ್ತಿದೆ, ಇದು ಸರಿಯಲ್ಲ ಎಂದು ಹೇಳಿದ್ದಾರೆ. ಅಲ್ಲದೆ ರಾಫೆಲ್ ವಿವಾದವು ಈ ಸಾರ್ವತ್ರಿಕ ಚುನಾವಣೆಯಲ್ಲಿ ನರೇಂದ್ರ ಮೋದಿ ಸೋಲಲಿದ್ದಾರೆ ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos