ದೇಶ

ಚುನಾವಣೋತ್ತರ ಸಮೀಕ್ಷೆ ಬೆನ್ನಲ್ಲೇ ಅಮಿಶಾ ರಿಂದ ಎನ್ ಡಿಎ ನಾಯಕರಿಗೆ ಭರ್ಜರಿ ಔತಣಕೂಟ!

Srinivasamurthy VN
ನವದೆಹಲಿ: ಹಾಲಿ ಲೋಕಸಭಾ ಚುನಾವಣೆ ಕುರಿತಂತೆ ಇತ್ತೀಚೆಗೆ ಪ್ರಕಟವಾದ ಎಲ್ಲ ಚುನಾವಣೋತ್ತರ ಸಮೀಕ್ಷೆಗಳು ಎನ್ ಡಿಎ ಪರವಾಗಿದ್ದು, ಇದೇ ಖುಷಿಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಎಲ್ಲ ಎನ್ ಡಿಯ ಮೈತ್ರಿಕೂಟದ ನಾಯಕರಿಗೆ ದೆಹಲಿಯಲ್ಲಿ ಭರ್ಜರಿ ಔತಣ ಕೂಟ ಏರ್ಪಡಿಸಿದ್ದಾರೆ.
ಎನ್​ಡಿಎ ಮೈತ್ರಿಕೂಟದ ಎಲ್ಲ ಪಕ್ಷಗಳ ನಾಯಕರಿಗಾಗಿ ನವದೆಹಲಿಯ ಖಾಸಗಿ ಹೋಟೆಲ್​ನಲ್ಲಿ ಮಂಗಳವಾರ ಆಯೋಜಿಸಿದ್ದ ಭೋಜನಕೂಟದಲ್ಲಿ ಪ್ರಧಾನಿ ನರೇಂದ್ರ ಮೋದಿ, ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಸೇರಿದಂತೆ ಹಲವು ಖ್ಯಾತನಾಮ ಮುಖಂಡರು ಭಾಗಿಯಾಗಿದ್ದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾಯಕರು ಸನ್ಮಾನ ಮಾಡಿದರು. ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆಯೇ ಅವರಿಗೆ ಹೂಗುಚ್ಛ ನೀಡಿ ಸ್ವಾಗತಿಸಿದ ಅಮಿತ್ ಶಾ ಅವರು ಬಳಿಕ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು.
ಮಂಗಳವಾರದ ಈ ಭೋಜನ ಕೂಟದಲ್ಲಿ ಎನ್​ಡಿಎ ಮೈತ್ರಿಕೂಟದ 36 ಪಕ್ಷಗಳ ನಾಯಕರು ಪಾಲ್ಗೊಂಡಿದ್ದರು. ಬಳಿಕ ಮಾತನಾಡಿದ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ರಾಜನಾಥ್ ಸಿಂಗ್ ಅವರು, 'ಐದು ವರ್ಷಗಳ ಆಡಳಿತಾವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಲವು ಐತಿಹಾಸಿಕ ನಿರ್ಧಾರಗಳನ್ನು ಕೈಗೊಂಡರು ಎಂದು ಎನ್​ಡಿಎ ಮೈತ್ರಿಕೂಟದ ಎಲ್ಲ ಪಕ್ಷಗಳ ನಾಯಕರು ಒಕ್ಕೂರಲಿನಿಂದ ಹೇಳಿದ್ದಾಗಿ ಮಾಧ್ಯಮಗಳಿಗೆ ತಿಳಿಸಿದರು. ಅಂತೆಯೇ ಇನ್ನೂ ಮೂರು ಮಿತ್ರಪಕ್ಷಗಳು ಭೋಜನ ಕೂಟದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದಿದ್ದರೂ ತಮ್ಮ ಬೆಂಬಲ ಪತ್ರ ನೀಡಿರುವುದಾಗಿ ರಾಜನಾಥ್ ಸಿಂಗ್ ಹೇಳಿದರು.
ಇನ್ನು ಈ ಸಭೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳ ಕುರಿತು ಚರ್ಚಿಸಲಾಯಿತು. ಪ್ರತಿಪಕ್ಷಗಳ ನಾಯಕರು ಅವುಗಳನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸುತ್ತಿರುವುದು ಎನ್​ಡಿಎ ಮೈತ್ರಿಕೂಟದ ಪಾಲಿಗೂ ಆತಂಕವನ್ನುಂಟು ಮಾಡಿದೆ. ಈ ವಿಷಯವಾಗಿಯೂ ಸಭೆ ವಿಸ್ತೃತವಾಗಿ ಚರ್ಚಿಸಿತು ಎನ್ನಲಾಗಿದೆ.
SCROLL FOR NEXT