ದೇಶ

ಒಡಿಶಾದಲ್ಲಿ ಬಿಜೆಡಿ ಕಮಾಲ್, 5ನೇ ಬಾರಿಗೆ ನವೀನ್ ಪಟ್ನಾಯಕ್ ಸಿಎಂ

Srinivasamurthy VN
ಭುವನೇಶ್ವರ: ಲೋಕಸಭೆ ಚುನಾವಣೆಯೊಂದಿಗೆ ಒಡಿಶಾದಲ್ಲಿ ವಿಧಾನಸಭೆಗೂ ಚುನಾವಣೆ ನಡೆದಿದ್ದು, ಈ ಬಾರಿಯೂ ಸಿಎಂ ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾ ದಳ ಪಕ್ಷ ಅಧಿಕಾರದ ಗದ್ದುಗೆ ಏರಿದೆ.
ಒಟ್ಟು 147 ಸದಸ್ಯ ಬಲದ ಒಡಿಶಾ ವಿಧಾನಸಭೆಯಲ್ಲಿ 100 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಸಮೀಪದ ಪ್ರತಿ ಸ್ಪರ್ಧಿ ಬಿಜೆಪಿ 24 ಮತ್ತು ಕಾಂಗ್ರೆಸ್ ಪಕ್ಷ 10 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ. ಇನ್ನು ಪಟ್ಕುರಾ ಕ್ಷೇತ್ರದಲ್ಲಿ ಫನಿ ಚಂಡಮಾರುತದಲ್ಲಿ ಇಲ್ಲಿನ ಅಭ್ಯರ್ಥಿಯ ಅಕಾಲಿಕ ಮರಣದಿಂದಾಗಿ ಅಲ್ಲಿ ಚುನಾವಣೆಯನ್ನು ಮುಂದೂಡಲಾಗಿದೆ. 
ಆದರೂ ಒಡಿಶಾದಲ್ಲಿ ಸರ್ಕಾರ ರಚನೆಗೆ 74 ಸ್ಥಾನಗಳ ಅಗತ್ಯತೆ ಇದ್ದು, ಬಿಜು ಜನತಾ ದಳ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚನೆಗೆ ಸಿದ್ಧವಾಗಿದೆ.  ಇನ್ನು ಸಿಎಂ ನವೀನ್ ಪಟ್ನಾಯಕ್ ಸ್ಪರ್ದಿಸಿರುವ ಬಿಜೇಪುರ್ ಮತ್ತು ತವರು ಹಿಂಜಿಲಿ ಕ್ಷೇತ್ರಗಳೆರಡರಲ್ಲೂ ಭಾರಿ ಅಂತರದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಆ ಮೂಲಕ ಸಿಎಂ ನವೀನ್ ಪಟ್ನಾಯಕ್ ಐದನೇ ಬಾರಿಗೆ ಸಿಎಂ ಗಾದಿಯತ್ತ ದಾಪುಗಾಲಿರಿಸಿದದಾರೆ. ಕಳೆದ 19 ವರ್ಷಗಳಿಂದಲೂ ನವೀನ್ ಪಟ್ನಾಯಕ್ ಸಿಎಂ ಗಾದಿಯಿಂದ ಕೆಳಗಿಳಿದಿಲ್ಲ. ಇದೂ ಕೂಡ ನೂತನ ದಾಖಲೆಯಾಗಿದೆ.
ಪಟ್ನಾಯಕ್ ಕೈ ಹಿಡಿದ ಫನಿ ಚಂಡಮಾರುತ ರಕ್ಷಣಾ ಕಾರ್ಯ
ಇನ್ನು ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಒಡಿಶಾ ರಾಜ್ಯಕ್ಕೆ ಅಪ್ಪಳಿಸಿದ್ದ ಫನಿ ಚಂಡಮಾರುತ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಚ ಮಾಡಿತ್ತು. ಈ ವೇಳೆ ಚಂಡಮಾರುತವನ್ನು ಎದುರಿಸಲು ಒಡಿಶಾ ಸರ್ಕಾರ ಕೈಗೊಂಡ ರಕ್ಷಣಾ ಕಾರ್ಯಾಚರಣೆ ಶ್ಲಾಘನೆಗೆ ಪಾತ್ರವಾಗಿತ್ತು. ಚಂಡಮಾರುತ ಅಪ್ಪಳಿಸುವುದಕ್ಕೂ ಮುನ್ನವೇ ಪುರಿ ಮತ್ತು ಇತರೆ ಕರಾವಳಿ ಜಿಲ್ಲೆಗಳಿಂದ ಸುಮಾರು 15 ಲಕ್ಷಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ರವಾನೆ ಮಾಡಲಾಗಿತ್ತು. ಈ ಕುರಿಂತೆ ವಿಶ್ವಸಂಸ್ಥೆ ಕೂಡ ಭಾರತ ಸರ್ಕಾರ ಮತ್ತು ಒಡಿಶಾ ಸರ್ಕಾರವನ್ನು ಶ್ಲಾಘಿಸಿತ್ತು. ಚುನಾವಣಾ ಪ್ರಚಾರದ ಹೊರತಾಗಿಯೂ ಸಿಎಂ ನವೀನ್ ಪಟ್ನಾಯಕ್ ಖುದ್ಧು ತಾವೇ ರಕ್ಷಣಾ ಕಾರ್ಯಾಚರಣೆಯ ಮೇಲ್ನಿಚಾರಣೆ ನಡೆಸಿದ್ದು ಮತದಾರರ ಮನ ಸೆಳೆದಿದೆ ಎನ್ನಲಾಗುತ್ತಿದೆ.
SCROLL FOR NEXT