ಕರ್ನಾಟಕ

ಜಾತಿ ಹೇಳಿಕೆ: ಮಂಡ್ಯ ಸಂಸದ ಶಿವರಾಮೇಗೌಡ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾದ ಜೆಡಿಎಸ್

Lingaraj Badiger
ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಜಾತಿ ಪ್ರಸ್ತಾಪಿಸಿದ ಮಂಡ್ಯ ಸಂಸದ ಎಲ್ ಆರ್ ಶಿವರಾಮೇಗೌಡ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರು ಗುರುವಾರ ಹೇಳಿದ್ದಾರೆ.
ಇಂದು ಪ್ರೆಸ್‍ಕ್ಲಬ್‍ನಲ್ಲಿ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ವಿಶ್ವನಾಥ್ ಅವರು, ಮಂಡ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಒಕ್ಕಲಿಗರು ಇದ್ದಾರೆ. ಆದರೂ ಅವರು ಯಾವತ್ತೂ ಜಾತಿವಾದ ಮಾಡಿಲ್ಲ. ಸಂಸದರ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಪಕ್ಷದ ಅಧ್ಯಕ್ಷನಾಗಿ ನಾನು ಅವರ ವಿರುದ್ಧ ಕ್ರಮಕೈಗೊಳ್ಳುತ್ತೇನೆ. ಸುಮಲತಾ ಅಂಬರೀಶ್ ಮಂಡ್ಯದ ಸೊಸೆ. ಅಂಬರೀಶ್ ಹೆಂಡತಿ. ಅವರ ಜಾತಿ ಬಗ್ಗೆ ಯಾರು ಮಾತನಾಡಬಾರದು ಎಂದರು.
ನಾನು ಜೆಡಿಎಸ್ ರಾಜ್ಯಾಧ್ಯಕ್ಷನಾದ ಬಳಿಕ ಸಂಭ್ರಮಕ್ಕಿಂತ ಸಂಘರ್ಷವೇ ಹೆಚ್ಚಾಗಿದೆ. ಆರೋಗ್ಯ ಸರಿಯಿಲ್ಲದ ಕಾರಣ ನನಗೆ ಬಿಡುಗಡೆ ಕೊಡಿ ಅಂತ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರ ಬಳಿ ಕೇಳಿಕೊಂಡೆ. ಆದರೆ ಅವರು ಒಪ್ಪಲಿಲ್ಲ. ನೀವೇ ಮುಂದುವರಿಯಬೇಕು ಎಂದು ಹೇಳಿದರು. ಹೀಗಾಗಿ ನಾನೇ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರಿದಿರುವೆ ಎಂದರು.
ಈ ಚುನಾವಣೆ ನಕಲಿ ರಾಷ್ಟ್ರೀಯವಾದಿ ಮತ್ತು ಭಾರತದ ಬಹುತ್ವದ ಬಗೆಗಿನ ನಡುವಿನ ಸಂಘರ್ಷವಾಗಿದೆ. ನಕಲಿ ರಾಷ್ಟ್ರವಾದಿ ಬಿಜೆಪಿಯನ್ನು ಹೊಗಳಿದವರು ದೇಶಪ್ರೇಮಿಗಳು. ಇಲ್ಲ ಅಂದ್ರೆ ಅವರು ದೇಶ ವಿರೋಧಿಗಳು. ಇಂತಹ ಸ್ಥಿತಿಯನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ತಂದಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
SCROLL FOR NEXT