ಮಂಡ್ಯ:ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆಗೆ ಇನ್ನು ಕೇವಲ 10 ದಿನ ಬಾಕಿ ಉಳಿದಿದೆ.
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಈ ಹಿನ್ನಲೆಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಕೂಡ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡು ಸೀಟು ಹಂಚಿಕೆ ಮಾಡಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ, ಆದರೆ ಕೆಲವು ಕ್ಷೇತ್ರಗಳಲ್ಲಿ ಬಂಡಾಯ, ಅಸಮಾಧಾನ ಉಂಟಾಗಿದ್ದು ಅದಿನ್ನೂ ಶಮನವಾಗಿಲ್ಲ, ಮುಖ್ಯವಾಗಿ ಮಂಡ್ಯ, ಹಳೆ ಮೈಸೂರು ಭಾಗದಲ್ಲಿ ಅಸಮಾಧಾನ ಇನ್ನೂ ಹೊಗೆಯಾಡುತ್ತಲೇ ಇದ್ದಾರೆ.
ಎಷ್ಟರ ಮಟ್ಟಿಗೆ ಇದೆ ಎಂದರೆ ಕಾಂಗ್ರೆಸ್ ನ ರಾಜ್ಯ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಸ್ವತಃ ಅಖಾಡಕ್ಕೆ ಇಳಿದು ಬಂಡಾಯ ನಾಯಕರನ್ನು ಕರೆದು ಸಮಾಧಾನ ಮಾಡಬೇಕಾದ ಪರಿಸ್ಥಿತಿ ಇದೆ.
ನಿನ್ನೆ ಕೆ ಸಿ ವೇಣುಗೋಪಾಲ್ ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ರಾಜ್ಯದ 10 ಉನ್ನತ ನಾಯಕರನ್ನು ಕರೆದು ಪ್ರಚಾರ ಪರಾನರ್ಶೆ ಸಭೆ ನಡೆಸಿದರು. ಪ್ರತಿಯೊಬ್ಬರೂ ಮೈತ್ರಿ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಿ ಅವರ ಗೆಲುವಿಗೆ ಶ್ರಮಿಸಬೇಕು. ಭಿನ್ನಾಭಿಪ್ರಾಯಕ್ಕೆ ಆಸ್ಪದ ಕೊಡಬೇಡಿ, ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಧಕ್ಕೆಯುಂಟಾಗಿದೆ ಎಂಬ ಗೊಂದಲ ಬೇಡ ಎಂದು ಕೆ ಸಿ ವೇಣುಗೋಪಾಲ್ ಸ್ಪಷ್ಟವಾಗಿ ಹೇಳಿದ್ದಾರೆ.