ಕರ್ನಾಟಕ

ಸಿಎಂ ಕುಮಾರಸ್ವಾಮಿ ದೇಶದ್ರೋಹಿ: ಬಿ ಎಸ್ ಯಡಿಯೂರಪ್ಪ

Lingaraj Badiger
ಹೊಳೆನರಸೀಪುರ: ಹತ್ತು ತಿಂಗಳ ಹಿಂದೆಯೇ ಪುಲ್ವಾಮ ದಾಳಿಯ ಬಗ್ಗೆ ಮಾಹಿತಿ ಇತ್ತು ಎಂದಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಸೂಕ್ತ ಕಾಲದಲ್ಲಿ ಕೇಂದ್ರಕ್ಕೆ ಮಾಹಿತಿ ನೀಡದೆ ದೇಶದ್ರೋಹದ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರು ವಾಗ್ದಾಳಿ ನಡೆಸಿದರು.
ಇಂದು ಪಟ್ಟಣದ ಬಯಲು ರಂಗಮಂದಿರ ಆವರಣದಲ್ಲಿ ಬಿಜೆಪಿ ಅಭ್ಯರ್ಥಿ ಎ.ಮಂಜು ಪರ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು , ರೈತರ ಪೂರ್ಣ ಸಾಲಮನ್ನಾ ಭರವಸೆ ನೀಡಿದ ಮುಖ್ಯಮಂತ್ರಿ, ಅಧಿಕಾರಕ್ಕೆ ಬಂದಾಗಿನಿಂದಲೂ ಸುಳ್ಳು ಹೇಳಿಕೊಂಡು ಕಾಲ ಕಳೆಯುತ್ತಿದ್ದಾರೆ. ಅವರಿಗೆ  ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಸಿದ್ದರಾಮಯ್ಯನವರ ಬಗ್ಗೆ ಅನುಕಂಪ ತೋರದೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅವರನ್ನು ಸೋಲಿಸಿದ್ದರು. ಒಂದು ವೇಳೆ ಬದಾಮಿಯಲ್ಲಿ ಗೆಲ್ಲದೇ ಹೋಗಿದ್ದರೆ ಅವರ ಪರಿಸ್ಥಿತಿ ಏನಾಗಬೇಕಿತ್ತು ಎಂದು ಪ್ರಶ್ನಿಸಿದ ಯಡಿಯೂರಪ್ಪ,  ಅಂಬರೀಷ್ ಬದುಕಿದ್ದಾಗ ಅವರನ್ನು ಹಾಡಿ ಹೊಗಳುತ್ತಿದ್ದವರು ಈಗ ಮಂಡ್ಯ ಜಿಲ್ಲೆಗೆ ಅಂಬರೀಷ್ ಕೊಡುಗೆ ಏನು ಎಂದು ಪ್ರಶ್ನಿಸುತ್ತಿದ್ದಾರೆ. ಸುಮಲತಾ  ಪರವಾಗಿ ಕೆಲಸ ಮಾಡುವ ಚಿತ್ರನಟರ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  
ಯಡಿಯೂರಪ್ಪ ಅವರ ಕೃಪೆಯಿಂದ ಮೊದಲ ಬಾರಿ ಮುಖ್ಯಮಂತ್ರಿಯಾದ ಕುಮಾರಸ್ವಾಮಿ ಬಳಿಕ  ಅವರಿಗೆ ಮೋಸ ಮಾಡಿದರು. ಇದೀಗ ಕಾಂಗ್ರೆಸ್  ಬೆಂಬಲ ಪಡೆದು ಮುಖ್ಯಮಂತ್ರಿ ಆಗಿದ್ದಾರೆ. ಸ್ವಂತ ಶಕ್ತಿಯಿಂದ ಗೆಲ್ಲುವ ತಾಕತ್ತಿಲ್ಲದವರು ಎಂದು ಬಿಜೆಪಿ ಅಭ್ಯರ್ಥಿ ಎ.ಮಂಜು ವಾಗ್ದಾಳಿ ನಡೆಸಿದರು.
'ಕಾರ್ಯವಾಸಿ ಕತ್ತೆ ಕಾಲು ಹಿಡಿಯುವ' ವ್ಯಕ್ತಿ ರೇವಣ್ಣ, ನಿಮ್ಮ ಕಾಲು ಹಿಡಿಯಲು ಬಂದರೆ  ಹತ್ತಿರ ಸೇರಿಸಬೇಡಿ, ರೇವಣ್ಣ ನೀನು ಓದಿರುವುದು 7ನೇ ತರಗತಿ, ನಾನು ಡಬಲ್ ಡಿಗ್ರಿ ಪಡೆದಿದ್ದೇನೆ ಎಚ್ಚರಿಕೆಯಿಂದ ಮಾತನಾಡುವುದನ್ನು ಕಲಿಯಲಿ ಎಂದು ರೇವಣ್ಣ ಅವರಿಗೆ ಮಂಜು ಎಚ್ಚರಿಕೆ ನೀಡಿದರು. 
ಬಿಜೆಪಿ ಶಾಸಕ ಪ್ರೀತಂ ಜೆ.ಗೌಡ ಮಾತನಾಡಿ, 20 ವರ್ಷಗಳ ಹಿಂದೆ ಸೂರನಹಳ್ಳಿಯ ರೈತರ ಜಮೀನನ್ನು ವಶಪಡಿಸಿಕೊಳ್ಳಲಾಗಿದೆ. ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಕಸಬಾ ಹೋಬಳಿಯಲ್ಲಿ 400 ಎಕರೆ ವಶಪಡಿಸಿಕೊಂಡಿದ್ದಾರೆ. ಇವರ ವಿರುದ್ಧ ರಾಜಕಾರಣ ಮಾಡುವವರ ಜಮೀನು ವಶಪಡಿಸಿಕೊಳ್ಳುವುದು, ಹಿಂಸೆ ನೀಡುವ ಪ್ರವೃತ್ತಿ ಸಚಿವ ರೇವಣ್ಣ ನಡೆಸಿಕೊಂಡು ಬಂದಿದ್ದಾರೆ. ಆದರೆ ಇನ್ನು  ಮುಂದೆ ಇಂತಹ ಆಟಗಳು ನಡೆಯುವುದಿಲ್ಲ. ಹಾಸನ, ಮಂಡ್ಯ, ತುಮಕೂರು ಜಿಲ್ಲೆಗಳಿಗೆ ನಿಮ್ಮ ಕುಟುಂಬಕ್ಕೆ ಸೀಮಿತವೇ ಎಂದು ಪ್ರಶ್ನಿಸಿದ ಅವರು, ರಾಜ್ಯದಲ್ಲಿ ಬೇರೆ ಯಾರೂ ಒಕ್ಕಲಿಗರು ಇಲ್ಲವೇ ಎಂದು ಟೀಕಿಸಿದರು.
SCROLL FOR NEXT