ಗಾವಳಿ ಗ್ರಾಮದ ಒಂದು ಮತಗಟ್ಟೆ
ಬೆಳಗಾವಿ: ಬೆಳಗಾವಿಯ ಖಾನಪುರದ ತಾಲ್ಲೂಕಿನ 12 ಗ್ರಾಮಗಳ ನಿವಾಸಿಗಳು ಮಂಗಳವಾರ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ.
"ನಾವು ನಮ್ಮ ಕುಟುಂಬ ಈ ಗ್ರಾಮಗಳಲ್ಲಿದ್ದೇವೆ ಎನ್ನುವುದನ್ನು ಕಳೆದ 60 ವರ್ಷಗಳಿಂದಲೂ ನಮ್ಮ ಜನಪ್ರತಿನಿಧಿಗಳು ಮರೆತಿದ್ದಾರೆ. ಅವರಿಗೆ ನಮ್ಮ ಅಸ್ತಿತ್ವದ ಅರಿವು ಇಲ್ಲ, ಅಲ್ಲದೆ ಅವರಿಗೆ ನಮ್ಮ ಅಮೂಲ್ಯವಾದ ಮತಗಳ ಅಗತ್ಯವಿಲ್ಲ" ಅಲ್ಲಿನ ನಿವಾಸಿಗಳು ಹೇಳುತ್ತಾರೆ.
ಖಾನಾಪುರ ತಾಲೂಕಿನ ಗಾವಳಿ, ಕೃಷ್ನಾಪುರ, ಪಸ್ತೋಲಿ, ಕೊಂಗಲ, ತಳೆವಾಡಿ, ಜೋರ್ಡಾನ, ಸಯಾಚೆ ಮಾಲ, ಚಾಪೋಲಿ, ಕಾಪೋಲಿ, ಮುದಗೈ, ಚಿಲೆಖಾನೆ ಹಾಗೂ ಆಂಗಾನ್ ಗ್ರಾಮಗಳ ಯಾವೊಬ್ಬ ಮತದಾರರೂ ಈ ಬಾರಿ ಮತ ಚಲಾವಣೆ ಮಾಡಿಲ್ಲ. ತಮ್ಮನ್ನು ನಿರ್ಲಕ್ಷಿಸಿದ್ದಕ್ಕಾಗಿ ಅವರು ಈ ರೀತಿಯಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
"ನಾವು ಕಳೆದ ಆರು ದಶಕಗಳಿಂದ ಈ ಹಳ್ಳಿಗಳಲ್ಲಿ ವಾಸವಿದ್ದೇವೆ. ಆದರೆ ಈ ಗ್ರಾಮಗಳಿಗೆ ಸರಿಯಾದ ರಸ್ತೆ ಸಂಪರ್ಕವಿಲ್ಲ, ವಿದ್ಯುತ್ ಸಂಪರ್ಕವಿಲ್ಲ, ಶಾಲೆಗಳಿಲ್ಲ, ವೈದ್ಯಕೀಯ ಸೌಲಭ್ಯಗಳಿಲ್ಲ. ಇಂತಹಾ ಮೂಲಭೂತ ಸೌಕರ್ಯವನ್ನೂ ಕಲ್ಪಿಸದ ನಮ್ಮ ಜನನಾಯಕರಿಗೆ ನಾವೇಕೆ ಮತ ಹಾಕಬೇಕು" ಅವರು ಪ್ರಶ್ನಿಸುತ್ತಾರೆ.
ಹಳ್ಳಿಗರನ್ನು ಮನವೊಲಿಸಲು ಚುನಾವಣಾ ಆಯೋಗದ ಅಧಿಕಾರಿಗಳು ಗ್ರಾಮಗಳಿಗೆ ಬಂದಿದ್ದರು, ಆದರೆ ಹಳ್ಳಿಗರು ಚುನಾವಣೆ ಬಹಿಷ್ಕರಿಸುವ ನಿರ್ಧಾರದಿಂಡ ಹಿಂದೆ ಸರಿಯಲಿಲ್ಲ.