ಕರ್ನಾಟಕ

ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ; ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬೆಂಬಲ: ಹೆಚ್ ಡಿ ದೇವೇಗೌಡ

Vishwanath S
ಬೆಂಗಳೂರು: ಮೇ 19ರಂದು ನಿಗದಿಯಾಗಿರುವ ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಜೆಡಿಎಸ್‌ ಬೆಂಬಲಿಸಲಿದೆ.  
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್‌ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ವಿಧಾನಸಭೆ ಉಪಚುನಾವಣೆ ನಡೆಯುವ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ತಮ್ಮ ಪಕ್ಷ ಬೆಂಬಲಿಸಲಿದೆ ಎಂದು ಹೇಳಿದ್ದಾರೆ. 
ಈ ಕುರಿತಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ನಿರ್ಧಾರವೊಂದನ್ನು ತೆಗೆದುಕೊಳ್ಳಲಿದ್ದು, ಆಡಳಿತಾರೂಢ ಸಮ್ಮಿಶ್ರ ಸರ್ಕಾರ ಎರಡೂ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಜೆಡಿಎಸ್‌ ಕಾರ್ಯಕರ್ತರು ಕಾಂಗ್ರೆಸ್ ಗೆ ಸಹಕರಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.   
ಹಾಲಿ ಶಾಸಕರು, ಸಚಿವರಾಗಿದ್ದ ಸಿ.ಎಸ್‌.ಶಿವಳ್ಳಿ ಅವರು ಹೃದಯಾಘಾತದಿಂದ ಹಠಾತ್‌ ನಿಧನ ಹೊಂದಿದ್ದರಿಂದ ಕುಂದಗೋಳ ಕ್ಷೇತ್ರ ತೆರವಾಗಿದ್ದರೆ, ಕಾಂಗ್ರೆಸ್ ಶಾಸಕರಾಗಿದ್ದ ಉಮೇಶ್‌ ಜಾದವ್‌ ಶಾಸಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರಿದ್ದರಿಂದ ಚಿಂಚೋಳಿ ವಿಧಾನಸಭಾ ಕ್ಷೇತ್ರ ತೆರವಾಗಿತ್ತು. 
ಉಮೇಶ್ ಜಾಧವ್‌ ಅವರು ಬಿಜೆಪಿ ಸೇರಿದ ನಂತರ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಖರ್ಗೆಯವರು ಮೂರನೇ ಬಾರಿ ಆಯ್ಕೆ ಕೋರಿ ಸ್ಪರ್ಧಿಸುತ್ತಿದ್ದಾರೆ.
SCROLL FOR NEXT