ನವದೆಹಲಿ: ಲೋಕಸಭಾ ಚುನಾವಣೆ ನಿಮಿತ್ತ ಕರ್ನಾಟಕದ 18 ಕ್ಷೇತ್ರಗಳಿಗೆ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದೆ.
ಹುಬ್ಬಳ್ಳಿ- ಧಾರವಾಡ ಮತ್ತು ಬೆಂಗಳೂರು ದಕ್ಷಿಣ ಹೊರತುಪಡಿಸಿ ಕಾಂಗ್ರೆಸ್ ಪಾಲಿನ 18 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಅಂತಿಮವಾಗಿದೆ. ನೀರಿಕ್ಷೆಯಂತೆ ಒಂಭತ್ತು ಮಂದಿ ಹಾಲಿ ಸಂಸದರಿಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನೀಡಿದ್ದು, ಮೂರು ಹೊಸ ಮುಖಗಳಿಗೆ ಮಣೆ ಹಾಕಿದೆ. ಮೈಸೂರಿನಿಂದ ತಮ್ಮ ಬೆಂಬಲಿಗ ವಿಜಯ್ ಶಂಕರ್ ಸೇರಿದಂತೆ ತಮ್ಮ ಶಿಷ್ಯರಿಗೆ ಟಿಕೆಟ್ ಕೊಡಿಸುವಲ್ಲಿ ಮಾಜಿ ಸಿಎಂ ಸಿದ್ದರಾಯಮ್ಯ ಯಶಸ್ವಿಯಾಗಿದ್ದಾರೆ.
ಅಚ್ಚರಿಯ ಬೆಳವಣಿಗೆಯಲ್ಲಿ ದಾವಣಗೆರೆಯಿಂದ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರಿಗೆ ಟಿಕೆಟ್ ನೀಡಲಾಗಿದ್ದು ಶಿವಶಂಕರಪ್ಪ ಪುತ್ರ ಎಸ್ ಎಸ್ ಮಲ್ಲಿಕಾರ್ಜುನ ಗೆ ಟಿಕೆಟ್ ನೀಡುವ ನಿರೀಕ್ಷೆ ಇತ್ತು. ಬಾಕಿ ಉಳಿದಂತೆ ಬೆಳಗಾವಿಯಿಂದ ವಿರುಪಾಕ್ಷಿ ಸಾದಣ್ಣನವರ್, ಹಾವೇರಿಯಿಂದ ಡಿ.ಆರ್ ಪಾಟೀಲ್, ಬೀದರ್ ನಿಂದ ಈಶ್ವರ್ ಖಂಡ್ರೆ ಅವರಿಗೆ ಟಿಕೆಟ್ ನೀಡಲಾಗಿದೆ.
ಮತ್ತೊಂದೆಡೆ ಬೆಂಗಳೂರು ದಕ್ಷಿಣ ಕ್ಷೇತ್ರದ ವಿಚಾರವಾಗಿ ಬಿಜೆಪಿ ಸಸ್ಪೆನ್ಸ್ ಮುಂದುವರಿಸಿರುವಂತೆ ಇತ್ತ ಕಾಂಗ್ರೆಸ್ ಕೂಡ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ. ರಾಜ್ಯದ 18 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದರೂ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಇನ್ನೂ ಅಭ್ಯರ್ಥಿ ಘೋಷಿಸಿಲ್ಲ.
ಬೆಂಗಳೂರು ದಕ್ಷಿಣದಿಂದ ತೇಜಸ್ವಿನಿ ಅನಂತ್ ಕುಮಾರ್ ಸ್ಪರ್ಧೆ ನಿಶ್ಚಿತ ಎನ್ನಲಾಗಿತ್ತು. ಹೀಗಾಗಿ ಕಾಂಗ್ರೆಸ್ ನಿಂದ ಗೋವಿಂದರಾಜ್ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಲು ಕಾಂಗ್ರೆಸ್ ಪ್ಲಾನ್ ಮಾಡಿಕೊಂಡಿತ್ತು. ಆದರೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ತೇಜಸ್ವಿನಿ ಅನಂತ್ ಕುಮಾರ್ ಅವರ ಹೆಸರಿನ ಜೊತೆ ಜೊತೆಯಲ್ಲೇ ತೇಜಸ್ವಿ ಸೂರ್ಯ ಹೆಸರು ಸೇರಿದಂತೆ ಹಲವರ ಹೆಸರು ಕೇಳಿಬಂದಿದೆ. ಇದೇ ಕಾರಣಕ್ಕೆ ಬಿಜೆಪಿ ಅಭ್ಯರ್ಥಿ ಘೋಷಣೆ ಮಾಡದೆ ತೀವ್ರ ಕುತೂಹಲ ಮೂಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics