ಕರ್ನಾಟಕ

ಬೆಂಗಳೂರು ಉತ್ತರ ಕ್ಷೇತ್ರ 'ಕೈ'ವಶ; ಸ್ಪರ್ಧೆಯಿಂದ ಹಿಂದೆ ಸರಿದ ಜೆಡಿಎಸ್!

Sumana Upadhyaya
ಬೆಂಗಳೂರು: ಕೊನೆಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಗ್ಗೆ ಇದ್ದ ಗೊಂದಲ, ಕುತೂಹಲಗಳಿಗೆ ತೆರೆ ಬಿದ್ದಿದೆ. ಕಳೆದ ರಾತ್ರಿ ಕಾಂಗ್ರೆಸ್-ಜೆಡಿಎಸ್ ಪಾಳೆಯದಲ್ಲಿ ನಡೆದ ಮಹತ್ವದ ಬೆಳವಣಿಗೆಯಲ್ಲಿ ಸೀಟು ಹಂಚಿಕೆ ವೇಳೆ ತನಗೆ ಸಿಕ್ಕಿದ್ದ ಬೆಂಗಳೂರು ಉತ್ತರ ಕ್ಷೇತ್ರವನ್ನು ಜೆಡಿಎಸ್ ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದೆ.
ಬೆಂಗಳೂರು ಉತ್ತರದಿಂದ ಕಣಕ್ಕಿಳಿಸಲು ಸಮರ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡುವಲ್ಲಿ ಜೆಡಿಎಸ್‌ ಪಾಳಯ ವಿಫಲಗೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್‌ಗೆ ಕ್ಷೇತ್ರವನ್ನು ಬಿಟ್ಟುಕೊಟ್ಟಿದೆ ಎನ್ನಲಾಗಿದೆ. ಈ ಬಗ್ಗೆ ಸಾಮಾಜಿಕ ತಾಣದಲ್ಲಿ ಎಚ್‌ಡಿ ದೇವೇಗೌಡ ಅವರಿಗೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆಸಿ ವೇಣುಗೋಪಾಲ್‌ ಧನ್ಯವಾದ ಹೇಳಿದ್ದಾರೆ.
ಹಾಸನ ಲೋಕಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಲು ತಮ್ಮ ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಬಿಟ್ಟು ಕೊಟ್ಟ ನಂತರ ದೇವೇಗೌಡರು ಯಾವ ಕ್ಷೇತ್ರವನ್ನು ಆಯ್ಕೆ ಮಾಡುವುದು ಎಂಬ ಗೊಂದಲದಲ್ಲಿಯೇ ಇದ್ದರು.
ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಜೆಡಿಎಸ್ ನಾಯಕರು ದೇವೇಗೌಡರಿಗೆ ಒತ್ತಾಯಿಸುತ್ತಿದ್ದರು. ಆದರೆ ನಗರ ಮತದಾರರ ಬಗ್ಗೆ ಖಾತ್ರಿಯಿಲ್ಲದ ಕಾರಣ ದೇವೇಗೌಡರು ಬೆಂಗಳೂರು ಉತ್ತರದಿಂದ ಸ್ಪರ್ಧಿಸುವ ನಿರ್ಧಾರವನ್ನು ಕೈಬಿಟ್ಟು ತುಮಕೂರು ಕ್ಷೇತ್ರವನ್ನು ಆಯ್ಕೆಮಾಡಿಕೊಂಡಿದ್ದಾರೆ.
ಚುನಾವಣೆ ಪೂರ್ವ ಕಾಂಗ್ರೆಸ್‌ ಜತೆಗೆ ಮೈತ್ರಿ ಮಾಡಿಕೊಂಡ ಜೆಡಿಎಸ್‌ ಹೆಚ್ಚಿನ ಕ್ಷೇತ್ರಗಳಿಗೆ ಚೌಕಾಸಿ ನಡೆಸಿತ್ತು. ಕೊನೆಗೆ 8 ಕ್ಷೇತ್ರಗಳನ್ನು ಪಡೆಯುವಲ್ಲಿ ಯಶಸ್ವಿಯಾದ ಜೆಡಿಎಸ್‌ ಕೊನೆಗೆ ತಾನಾಗೇ ಒಂದು ಕ್ಷೇತ್ರವನ್ನು ಚುನಾವಣೆಗೆ ಕೆಲವೇ ದಿನಗಳಿರುವಂತೆ ಬಿಟ್ಟುಕೊಟ್ಟಿದೆ.
SCROLL FOR NEXT