ಕರ್ನಾಟಕ

ಸುಮಲತಾ- ಕಾಂಗ್ರೆಸ್ ನಾಯಕರ ಸಭೆ: ಶಿಸ್ತುಕ್ರಮಕ್ಕೆ ಜೆಡಿಎಸ್ ಆಗ್ರಹ; 'ಕೈ' ಮುಖಂಡರ ಜಾಣ ಕುರುಡು!

Shilpa D
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ದಿನಕ್ಕೊಂದು ಬೆಳವಣಿಗೆಗಳಾಗುತ್ತಿವೆ, ಬುಧವಾರ ಸಚಿವ ಜಿ.ಟಿ ದೇವೇಗೌಡ ನೀಡಿಗದ ಹೇಳಿಕೆ ಕಾಂಗ್ರೆಸ್ ನಲ್ಲಿ ಭಾರೀ ತಳಮಳ ಸೃಷ್ಟಿಸಿತ್ತು, ಇದೇ ವಿಚಾರವಾಗಿ ಕಾಂಗ್ರೆಸ್ ನಾಯಕರು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಇನ್ನೂ ಗುರುವಾರ ಹರಿದಾಡಿದ ವಿಡಿಯೋ ಕಾಂಗ್ರೆಸ್ ನಾಯಕರಿಗೆ ತಿರುಗು ಬಾಣವಾಗಿತ್ತು. ಮಂಡ್ಯ ಲೋಕಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಜೊತೆ ಕಾಂಗ್ರೆಸ್ ನಾಯಕರು ಪಾಲ್ಗೋಂಡಿದ್ದ ಸಭೆ ವಿಡಿಯೋ ಜೆಡಿಎಸ್ ನಾಯಕರ ಬಾಯಿಗೆ ಆಹಾರವಾಗಿದೆ.
ಏಪ್ರಿಲ್ 30ರಂದು ಸುಮಲತಾ ಅಂಬರೀಷ್ ಆಯೋಜಿಸಿದ್ದ ಡಿನ್ನರ್ ಪಾರ್ಟಿಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜೆಡಿಎಸ್ ಮುಖಂಡರು ಒತ್ತಾಯಿಸುತ್ತಿದ್ದಾರೆ, ಆದರೆ ಕಾಂಗ್ರೆಸ್ ನಾಯಕರು ಎಲ್ಲವನ್ನು ನೋಡಿ ಏನು ಗೊತ್ತಿಲ್ಲದವರಂತೆ ಸುಮ್ಮನಾಗಿದ್ದಾರೆ. ಹೀಗಾಗಿ ಜೆಡಿಎಸ್ ನಾಯಕರು ಕಾಂಗ್ರೆಸ್ ಹೈ ಕಮಾಂಡ್ ಕಿವಿಯೂದುವ ಸಾಧ್ಯತೆಗಳಿವೆ.
ಊಟಕ್ಕೆ ಹೋದದ್ದು ಯಾವುದೇ ದೊಡ್ಡ ಡೀಲ್ ಅಲ್ಲ, ಅದು ಪಕ್ಷ ವಿರೋಧಿ ಚಟುವಟಿಕೆಯೂ ಅಲ್ಲ, ಈ ಸಂಬಂಧ ಇನ್ನೂ ಹೆಚ್ಚಿನ ಮಾಹಿತಿ ಪಡೆಯುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮೇ 23 ರಂದು ಫಲಿತಾಂಶ ಹೊರಬೀಳಲಿದೆ, ಒಂದು ವೇಳೆ ನಿಖಿಲ್ ಗೆದ್ದರೆ ಈ ನಾಯಕರು ಯಾವುದೇ ಪಾತ್ರವಹಿಸಿಲ್ಲ ಎಂದು ನಂಬುತ್ತೇವೆ, ಒಂದು ವೇಳೆ ನಿಖಿಲ್ ಸೋತರೇ,ಈ ನಾಯಕರ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಕಾಂಗ್ರೆಸ್ ಗೆ ಒತ್ತಾಯಿಸುತ್ತೇವೆ ಎಂದು ಜೆಡಿಎಸ್ ಎಂಎಲ್ ಸಿ ಟಿ.ಎ ಶರವಣ ಹೇಳಿದ್ದಾರೆ.
ಮೇ 23ರ ವರೆಗೆ ಕಾಯಲು ಕಾಂಗ್ರೆಸ್ ನಿರ್ಧರಿಸಿದೆ,  ಒಂದು ವೇಳೆ ಪಕ್ಷ ವಿರೋಧಿ ಚಟುವಟಿಕೆ ಸಾಬೀತಾದರೇ  ದೆಹಲಿಯಿಂದಲೇ ಮುಂದಿನ ನಿರ್ಧಾರ ಹೊರಬೀಳುತ್ತದೆ ಎಂದು ಶರವಣ ತಿಳಿಸಿದ್ದಾರೆ.ಸಮ್ಮಿಶ್ರ ಸರ್ಕಾರದ ಮೈತ್ರಿ ಪಕ್ಷಗಳ ಕಚ್ಚಾಟ ಬಿಜೆಪಿಗೆ ಮನರಂಜನೆಯಾಗಿದೆ,
ಮಂಡ್ಯದಲ್ಲಿ ಸುಮಲತಾ ಗೆಲುವು ಖಚಿತವಾಗಿದೆ, ಹೀಗಾಗಿ ಈ ನಾಯಕರು ಸುಮಲತಾ ಜೊತೆ ಡಿನ್ನರ್ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ,  ಮೇ 23 ರ ನಂತರ ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆಯಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ,ಎಸ್ ಯಡಿಯೂರಪ್ಪ ಹೇಳಿದ್ದಾರೆ.
SCROLL FOR NEXT