ಕ.ಪ್ರ.ವಾರ್ತೆ, ಕಾರವಾರ, ಏ. 1-
ಕರಾವಳಿಯ ಸುಡು ಬಿಸಿಲು. ದಿನವಿಡೀ ಬೆವರ ಸ್ನಾನ. ಅವರ ಕೈ ಕುಲುಕಲು, ಮಾತನಾಡಲು ಅಭಿಮಾನಿಗಳು, ಪಕ್ಷದ ಕಾರ್ಯಕರ್ತರ ನೂಕು ನುಗ್ಗಲು. ಬಾಯಾರಿಕೆ ಇಂಗಿಸಲು ಆಗಾಗ ನೀರು, ಎಳನೀರು, ತಂಪು ಪಾನೀಯ. ಎಷ್ಟೇ ಒತ್ತಡ, ಆಯಾಸಗಳಿಂದ ಬಸವಳಿದರೂ ಹೆಸರಿಗೆ ತಕ್ಕಂತೆ ಅವರು ಶಾಂತಮೂರ್ತಿ. ಸಹನೆ, ತಾಳ್ಮೆಯಿಂದಲೇ ಉತ್ತರ ನೀಡಿದರು. ಸಿಡುಕು, ಮಿಡುಕು ಮೊರೆಹೋಗುತ್ತಿದ್ದರು ಪ್ರಶಾಂತ ದೇಶಪಾಂಡೆ ಅವರ ಹತ್ತಿರಕ್ಕೂ ಸುಳಿಯಲಿಲ್ಲ.
ಪ್ರಚಾರ ಭಾಷಣದಲ್ಲೂ ಆವೇಶವಿಲ್ಲದ ಶಾಂತ ಶೈಲಿ. ಹೇಳಬೇಕಾಗಿದ್ದನ್ನು ಸೌಮ್ಯ ಧಾಟಿಯಲ್ಲೇ ಹೇಳುತ್ತಾರೆ. ಎಲ್ಲೇ ಹೋಗಲಿ, 'ಕ್ರಾಂತಿಕಾರಿ ಭಾಷಣ ಮಾಡಿ ಜಾತಿ, ಧರ್ಮದ ಹೆಸರಿನಲ್ಲಿ ಓಟು ಕೇಳುವವರನ್ನು ನಂಬಬೇಡಿ. ಸ್ವಂತ ಸಾಮರ್ಥ್ಯ ಇಲ್ಲದೆ ಬೇರೆಯವರ ಹೆಸರು ಬಳಸಿ ಮತ ಕೇಳುವುದು ಎಷ್ಟರ ಮಟ್ಟಿಗೆ ಸರಿ' ಎನ್ನುವ ಪ್ರಶ್ನೆಯನ್ನು ಮತದಾರರ ಮುಂದಿಡುತ್ತಾರೆ. 'ಅಭಿವೃದ್ಧಿಯೇ ನಮ್ಮ ಧರ್ಮ. ಸಾಮಾಜಿಕ ನ್ಯಾಯವೇ ನಮ್ಮ ಜಾತಿ' ಎಂದು ಪ್ರತಿಪಾದಿಸುತ್ತಾರೆ.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಭೌಗೋಳಿಕವಾಗಿ ತುಂಬ ವಿಸ್ತಾರವಾದುದು. ಕ್ಷೇತ್ರದ ಒಂದು ಗಡಿ ಭಟ್ಕಳದಿಂದ ಮತ್ತೊಂದು ಕೊನೆ ಖಾನಾಪುರಕ್ಕೆ ಹೋಗಬೇಕೆಂದರೆ 300ಕ್ಕೂ ಹೆಚ್ಚು ಕಿ.ಮೀ. ಕ್ರಮಿಸಬೇಕು. ಹೀಗಾಗಿ ಬೆಳಗ್ಗೆ 6ಕ್ಕೆ ಎದ್ದು ನಿದ್ದೆಯಲ್ಲಿರುವ ಮಕ್ಕಳನ್ನು ಮುದ್ದಿಸಿ ಪ್ರಶಾಂತ ಹೊರಟು ಬಿಡುತ್ತಾರೆ. ಮತ್ತೆ ಮನೆ ಸೇರುವುದು ರಾತ್ರಿ 1.30 ಅಥವಾ 2 ಗಂಟೆಗೆ.
ಬೆಳಗ್ಗೆ
9.30 ಹಳಿಯಾಳದಿಂದ ಬೈಲೂರಿಗೆ ಆಗಮನ
10.00 ಸಾರದಹೊಳೆ ದೇವಾಲಯಕ್ಕೆ ಭೇಟಿ
10.30 ಅಳ್ವೆಕೋಡಿ ದೇವಾಲಯಕ್ಕೆ ಆಗಮನ
11.00 ಶಿರಾಲಿಯಲ್ಲಿ ರೋಡ್ ಶೋ
ಮಧ್ಯಾಹ್ನ
12.00 ಕಟಗಾರಕೊಪ್ಪದ ಬುಡಕಟ್ಟು ಜನಾಂಗದ ಮನೆಗೆ ಭೇಟಿ
12.30 ಮುಂಡಳ್ಳಿ ದೇವಾಲಯಕ್ಕೆ ಆಗಮನ
1.00 ಐತಿಹಾಸಿಕ ದರ್ಗಾಕ್ಕೆ ಭೇಟಿ
3.30 ರಿಂದ ರೋಡ್ ಶೋ
ಸಂಜೆ
6.00 ಆಸರಕೇರಿ ಸಭಾಭವನದಲ್ಲಿ ಬೃಹತ್ ಸಭೆ
8.000 ರಿಂದ 10.00 ಸ್ಥಳೀಯ ಮುಖಂಡ ರೊಂದಿಗೆ ಸಮಾಲೋಚನೆ, ಹಳಿಯಾಳಕ್ಕೆ ನಿರ್ಗಮನ
ದೇವಾಲಯ, ದರ್ಗಾಗಳಿಗೆ ಭೇಟಿ
ಸಭೆ, ಸಮಾರಂಭಗಳಿಗಿಂತ ಹೆಚ್ಚು ದೇವಾಲಯಗಳಿಗೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ಬೆಳಗ್ಗೆಯಿಂದ ರಾತ್ರಿ ವರೆಗೆ 10ಕ್ಕೂ ಹೆಚ್ಚು ದೇವಾಲಯ ಹಾಗೂ ದರ್ಗಾಗಳಿಗೆ ಭೇಟಿ ನೀಡಿದರು. ಚನ್ನಪಟ್ಟಣ ಮಾರುತಿ ದೇವಾಲಯ, ಆಸರಕೇರಿ ವೆಂಕಟ್ರಮಣ ದೇವಾಲಯ, ಮುಂಡಳ್ಳಿ ಸತ್ಯನಾರಾಯಣ ದೇವಾಲಯ, ಉಳ್ಮಣ ಗಣಪತಿ ದೇವಾಲಯ, ಅಳ್ವೆಕೋಡಿ ದುರ್ಗಾಪರಮೇಶ್ವರಿ ಮತ್ತಿತರ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಶತಮಾನ ಇತಿಹಾಸ ಇರುವ ಭಟ್ಕಳದ ದರ್ಗಾಕ್ಕೆ ಭೇಟಿ ನೀಡಿದರು. ಅಚ್ಚರಿ ಎಂದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜೆ.ಡಿ. ನಾಯ್ಕ ವಿರುದ್ಧ ಸೆಣಸಿ ಗೆದ್ದ ಪಕ್ಷೇತರ ಶಾಸಕ ಮಂಕಾಳ ವೈದ್ಯ ಹಾಗೂ ಜೆ.ಡಿ. ನಾಯ್ಕ ಇಬ್ಬರೂ ಪ್ರಶಾಂತ ಅವರ ಎಡ-ಬಲಗಳಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಇದ್ದರು. ಕಿಸಾನ್ ಸೆಲ್ ಉಪಾಧ್ಯಕ್ಷ ಈಶ್ವರ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಠ್ಠಲ ನಾಯ್ಕ, ಜಿಪಂ ಸದಸ್ಯರಾದ ಅಬ್ದುಲ್ ರಶೀದ್, ಜಯಶ್ರೀ ಮೊಗೇರ, ಡಿಕೋಸ್ತ, ರಾಮ ಮೊಗೇರ ಸಾಥ್ ನೀಡಿದರು.
ಮಲ್ಲಿಗೆ ಘಮ
ತಮ್ಮ ಊರು ಹಳಿಯಾಳದಿಂದ ಭಟ್ಕಳಕ್ಕೆ ಬರುವಾಗ ಬೆಳಗ್ಗೆ 9 ಗಂಟೆ. ಬೈಲೂರಿಗೆ ಬರುತ್ತಿದ್ದಂತೆ ಪ್ರಶಾಂತ ದೇಶಪಾಂಡೆ ಅವರನ್ನು ಸ್ವಾಗತಿಸಿದ್ದು ಭಟ್ಕಳ ಮಲ್ಲಿಗೆಯ ಹಾರ. ರಾತ್ರಿ 10ರವರೆಗೂ ಭಟ್ಕಳ ಮಲ್ಲಿಗೆ ಹಾರದ್ದೇ ಘಮಘಮ. ಮಲ್ಲಿಗೆ ಬಗ್ಗೆ ಕುತೂಹಲಗೊಂಡ ಪ್ರಶಾಂತ ಮಲ್ಲಿಗೆ ತೋಟ ವೀಕ್ಷಿಸಿದರು. ಹಾರ ತಯಾರಿಸುವವರ ಮನೆಗೆ ಭೇಟಿ ನೀಡಿದರು. 'ನಾನೇ ಅಮ್ಮಾ ಪ್ರಶಾಂತ ದೇಶಪಾಂಡೆ. ನಿಮ್ಮ ದುಡಿಮೆ ನೋಡಿ ಆಶ್ಚರ್ಯ ಆಯ್ತು. ಎಷ್ಟೊಂದು ಕಷ್ಟಪಡ್ತೀರಾ!' ಎನ್ನುತ್ತ, ಅವರ ದುಡಿಮೆ, ಕಷ್ಟ-ಸುಖದ ಕುರಿತು ಮಾಹಿತಿ ಪಡೆದು ಭಟ್ಕಳ ಮಲ್ಲಿಗೆಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ದೊರಕಿಸಿಕೊಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಸರ್ವಧರ್ಮದ ಮೆರವಣಿಗೆ
ಭಟ್ಕಳದಲ್ಲಿ ಮೆರವಣಿಗೆ ಬಂತೆಂದರೆ ಅದೇನೋ ಆತಂಕ. ಆದರೆ, ಪ್ರಶಾಂತ ದೇಶಪಾಂಡೆ ಮಧ್ಯಾಹ್ನ 3.30ರಿಂದ ನಡೆಸಿದ ರೋಡ್ ಶೋನಲ್ಲಿ ಸಾವಿರಾರು ಜನರು ಹೆಜ್ಜೆ ಹಾಕಿದರು. ಹಿಂದು, ಮುಸ್ಲಿಂ, ಕ್ರಿಶ್ಚಿಯನ್ನರು ಜತೆ ಹೆಜ್ಜೆ ಹಾಕಿದರು. ಸಂಜೆ 6ಕ್ಕೆ ಆಸರಕೇರಿ ಸಭಾಭವನದಲ್ಲಿ ಬೃಹತ್ ಸಭೆ ಏರ್ಪಾಡಾಗಿತ್ತು. ಸುಮಾರು ಎರಡು ತಾಸಿನ ಸಭೆಯಲ್ಲಿ ಅನಂತಕುಮಾರ ಹೆಗಡೆ ಅವರ ವಿರುದ್ಧ ವಾಗ್ದಾಳಿ ನಡೆಸಿದರು. 'ನಾಲ್ಕು ಬಾರಿ ಸಂಸದರಾಗಿ ಶೂನ್ಯ ಸಾಧನೆ ಮಾಡಿದ ಅವರು, ಈಗ ಮತ್ತೆ ಜಾತಿ, ಧರ್ಮದ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ನಾವು ಅಭಿವೃದ್ಧಿ ಹೆಸರಿನಲ್ಲಿ ಮತ ಕೇಳುತ್ತಿದ್ದೇವೆ' ಎಂದು ಹೇಳಿದರು. ಇದಾದ ತರುವಾಯ ಹಲವು ಮುಖಂಡರನ್ನು ಅವರ ಮನೆಗಳಿಗೆ ತೆರಳಿ ಭೇಟಿ ಮಾಡಿ ಮಾತುಕತೆ ನಡೆಸುವಾಗ ರಾತ್ರಿ 10.30 ಮೀರಿತ್ತು.
ವಸಂತಕುಮಾರ್ ಕತಗಾಲ