ಕ್ಷೇತ್ರಗಳು

ರಾಮನಗರ ಬಿಜೆಪಿ ಪಾಳಯದಲ್ಲಿ ಮೋದಿ ಜಪ

ರಾಮನಗರ: ಬಿಜೆಪಿ ಪಾಳಯದಲ್ಲಿ ನರೇಂದ್ರ ಮೋದಿ ಜಪ. ಜೆಡಿಎಸ್ ಪಕ್ಷದಲ್ಲಿ ದೇವೇಗೌಡರಿಗೆ ಮತ್ತೊಮ್ಮೆ ಪ್ರಧಾನಿ ಪಟ್ಟದ ಕನಸು. ಕಾಂಗ್ರೆಸ್ ಅಭ್ಯರ್ಥಿ ಮತ್ತು ಪಕ್ಷದಿಂದ ನೀರಾವರಿ ಯೋಜನೆಗಳ ಜಾರಿ ಸಹಿತ ಭರಪೂರ ಭರವಸೆಗಳು, ಆಮ್ ಆದ್ಮಿಯಿಂದ ಗುಡಿ ಕೈಗಾರಿಕೆಗಳ ಸ್ಥಾಪನೆ ಘೋಷಣೆ...

ಇವಿಷ್ಟು, ಸಿಲಿಕಾನ್ ಸಿಟಿಯ 3 ಕ್ಷೇತ್ರಗಳು, ಕಲ್ಪತರುನಾಡು ತುಮಕೂರು ಜಿಲ್ಲೆಯ ಕುಣಿಗಲ್ ಜತೆ ರೇಷ್ಮೆನಾಡು ರಾಮನಗರ ಜಿಲ್ಲೆಯು ಕೊಂಡಿಯಾಗಿರುವ ಜಿದ್ದಾಜಿದ್ದಿನ ಅಖಾಡವಾದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಪ್ರಮುಖ ಪಕ್ಷ, ಅಭ್ಯರ್ಥಿಗಳ ಪ್ರಚಾರದ ಪ್ರಮುಖ ಅಸ್ತ್ರಗಳು.

ಒಕ್ಕಲಿಗರ ಭದ್ರಕೋಟೆಯಾದ ಈ ಕ್ಷೇತ್ರ ನಾನಾ ಕಾರಣಕ್ಕೆ ರಾಜ್ಯ, ರಾಷ್ಟ್ರದ ಗಮನ ಸೆಳೆಯುತ್ತಲೇ ಬಂದಿದೆ.  ಈ ಬಾರಿ ಘಟಾನುಘಟಿಗಳು ಕಣದಲ್ಲಿ ಇಲ್ಲದಿದ್ದರೂ ಪಕ್ಷಗಳ ಪಾಲಿಗೆ ಈ ಕ್ಷೇತ್ರ ಅಗ್ನಿ ಪರೀಕ್ಷೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.
ಗೆಲವಿಗೆ ಹಪಾಹಪಿ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಒಮ್ಮೆ ಮತ್ತು ಅವರ ಪುತ್ರ ಕುಮಾರಸ್ವಾಮಿ ಎರಡು
ಬಾರಿ ಪ್ರತಿನಿಧಿಸಿದ್ದಾರೆ. ಉಪ ಚುನಾವಣೆ ಸೋಲಿನ ಸೇಡಿಗಾಗಿ ಜೆಡಿಎಸ್ ಹಪಹಪಿಸುತ್ತಿದೆ. ಒಮ್ಮೆ ಇಲ್ಲಿ ಗೆದ್ದು ಅಚ್ಚರಿ ಮೂಡಿಸಿರುವ ಬಿಜೆಪಿ ಮತ್ತೊಂದು ಗೆಲವಿಗಾಗಿ ಹವಣಿಸಿದೆ.
ಉಪ ಚುನಾವಣೆಯಲ್ಲಿ ಸಹೋದರ ಡಿ.ಕೆ.ಸುರೇಶ್ ಅವರನ್ನು ಗೆಲ್ಲಿಸಿಕೊಂಡು, ಜೆಡಿಎಸ್ ಭದ್ರಕೋಟೆಯನ್ನು ಛಿದ್ರಗೊಳಿಸಿದ ಸಾಧನೆಯೇ ಡಿ.ಕೆ.ಶಿವಕುಮಾರ್ ಅವರಿಗೆ ಸಂಪುಟದ ಬಾಗಿಲು ತೆರೆಯಿತು. ಈಗಲೂ ಅವರ ಪಾಲಿಗೆ ಕ್ಷೇತ್ರದ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆಯಾಗಿದೆ.

ಪ್ರಚಾರಕ್ಕಿಳಿದ ಪಡೆ: ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಈ ಮೂರೂ ಪ್ರಮುಖ ಪಕ್ಷಗಳಲ್ಲಿ ವಿಧಾನಸಭಾ ಕ್ಷೇತ್ರವಾರು ಮುಖಂಡರು, ವಾರ್ಡ್, ಗ್ರಾಮ ಮಟ್ಟದ ಕಾರ್ಯಕರ್ತರ ಹೋರಾಟವೂ ಬಿರುಸುಗೊಂಡಿದೆ. ರೋಡ್ ಶೋ, ಮನೆ ಮನೆಗೆ ತೆರಳಿ ಮತಯಾಚನೆ ಪ್ರಕ್ರಿಯೆ ಚುರುಕಾಗಿದೆ.

ಈ ಬಾರಿಯ ಲೋಕಸಭೆ ಚುನಾವಣೆ ಹಿಂದೆಂದೂ ಕಾಣದಷ್ಟು ಭರಾಟೆಯಿಂದ ಸಾಗಿದೆ.
ಹಿಂದೆಲ್ಲಾ ಮತದಾನದ ಮುನ್ನಾ ದಿನವಷ್ಟೇ ಚಟುವಟಿಕೆಗಳು ಜೋರಾಗುತ್ತಿದ್ದವು. ಆದರೆ, ಈ ಬಾರಿ ಹಂತ ಹಂತವಾಗಿ ಕಾರ್ಯಕರ್ತರು, ಮುಖಂಡರಿಗೆ ಸಂಪನ್ಮೂಲ ಒದಗಿಸುವುದು ಸಹಿತ ಎಲ್ಲವೂ ಸಾಗಿದೆ.

ಮತಬೇಟೆಯ ಅಸ್ತ್ರ
ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಸಿಕ್ಕ 7 ತಿಂಗಳ ಅಧಿಕಾರಾವಧಿಯಲ್ಲಿ ಮಂಜೂರು ಮಾಡಿಸಿದ ಎರಡು ಪ್ರಮುಖ ನೀರಾವರಿ ಯೋಜನೆಗಳು, ಜನಪರ ಸ್ಪಂದನೆಯನ್ನು ಬಿಂಬಿಸಿಕೊಳ್ಳುವ ಜತೆಗೆ ಭವಿಷ್ಯದಲ್ಲಿ ಜಾರಿಗೆ ತರಬೇಕೆಂದಿರುವ ಯೋಜನೆಗಳನ್ನು ವಿವರಿಸಿಯೇ ಮತಯಾಚಿಸುತ್ತಿದ್ದಾರೆ. ಬಿಜೆಪಿಯ ಮುನಿರಾಜುಗೌಡ ಮತ್ತು ನಾಯಕರು ನಮೋ ಮಂತ್ರ ಜಪಿಸುವ ಜತೆಗೆ ಶಿವಕುಮಾರ್, ಕುಮಾರಸ್ವಾಮಿ ವಿರುದ್ಧ ಟೀಕಾಸ್ತ್ರ ಹೂಡುತ್ತಿದ್ದಾರೆ. ಜೆಡಿಎಸ್ ಅಭ್ಯರ್ಥಿ ಪ್ರಭಾಕರರೆಡ್ಡಿ ಟೀಕಾರೋಪ ಬಿಟ್ಟು, ದೇವೇಗೌಡ ಮತ್ತು ಕುಮಾರಸ್ವಾಮಿ ಸ್ತುತಿಯೊಂದಿಗೆ ಮತ ಬೇಡುತ್ತಿದ್ದಾರೆ.

ಪ್ರಚಾರದ ಅಬ್ಬರ
ಕ್ಷೇತ್ರಾದ್ಯಂತ ಪ್ರಚಾರದಲ್ಲಿ ಕಾಂಗ್ರೆಸ್ ಅಬ್ಬರ ಪ್ರಾರಂಭದಿಂದಲೇ ಜೋರಾಗಿದೆ. ಉಪ ಚುನಾವಣೆ ಗೆದ್ದಾದ ಮರು ಗಳಿಗೆಯಿಂದಲೇ ಆ ಪಕ್ಷ ಲೋಕಸಭೆ ಮಹಾಯುದ್ಧಕ್ಕೆ ತಾಲೀಮು ನಡೆಸಿತ್ತು. ಬಿಜೆಪಿ ಮತ್ತು ಜೆಡಿಎಸ್ ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸಕ್ಕೆ ಇಳಿದಂತೆ ಕಾಣುತ್ತಿವೆ.  ಅಭ್ಯರ್ಥಿ ಎಂದು ಘೋಷಣೆ ಆದ ನಂತರವಷ್ಟೇ ಬಿಜೆಪಿ ಮತ್ತು ಜೆಡಿಎಸ್ ಹುರಿಯಾಳುಗಳು ರಾಮನಗರ ಜಿಲ್ಲೆ ಮತ್ತು ಕುಣಿಗಲ್  ಕ್ಷೇತ್ರದತ್ತ ಸುಳಿದಿದ್ದಾರೆ. ಅವರಿಬ್ಬರೂ ಬೆಂಗಳೂರು ನಗರದಲ್ಲೇ ಗಮನ ಕೇಂದ್ರೀಕರಿಸಿದ್ದರು.

ಇನ್ನೂ ಬಂದಿಲ್ಲ ಅಗ್ರಗಣ್ಯರು
ಜೆಡಿಎಸ್ ಅಭ್ಯರ್ಥಿ ಪರ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ವಿಧಾನಸಭಾ ಕ್ಷೇತ್ರವಾರು ಕಾರ್ಯಕರ್ತರ ಸಭೆ ನಡೆಸಿ, ಪಕ್ಷವನ್ನು ಹೋರಾಟಕ್ಕೆ ಅಣಿಗೊಳಿಸಿ ಹೋದವರು ಮತ್ತೆ ಪ್ರಚಾರಕ್ಕೆ ಬಂದಿಲ್ಲ. ಇನ್ನು, ಬಿಜೆಪಿಯಲ್ಲಿ ಮಾಜಿ ಡಿಸಿಎಂ ಆರ್. ಅಶೋಕ್ ತಮ್ಮ ಅಭ್ಯರ್ಥಿ ನಾಮಪತ್ರಕ್ಕಷ್ಟೇ ಬಂದು ಹೋದರು. ಕೆ.ಎಸ್.ಈಶ್ವರಪ್ಪ ಮತ್ತು ತೇಜಸ್ವಿನಿಗೌಡ ಅಲ್ಲಲ್ಲಿ ಪ್ರಚಾರ ನಡೆಸಿದ್ದಾರೆ.

ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ರಾಜ್ಯ ಸರ್ಕಾರದ ಡಜನ್‌ಗೂ ಹೆಚ್ಚು ಸಚಿವರ ದಂಡು ಇಲ್ಲಿ ಬೀಡು ಬಿಟ್ಟಿತ್ತು. ಈಗ ಕೇಂದ್ರ ಸಚಿವ ಕೆ.ರೆಹಮಾನ್ ಖಾನ್ ಭೇಟಿ ರಾಮನಗರದ ಒಂದು ವಾರ್ಡ್‌ಗೆ ಮಾತ್ರ ಸೀಮಿತ. ಡಿ.ಕೆ.ಶಿವಕುಮಾರ್ ಸ್ವಕ್ಷೇತ್ರ ಕನಕಪುರದಲ್ಲಿ ಬಿರುಸಿನ ಪ್ರಚಾರ ನಡೆಸಿ, ಬೇರೆ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರನೇಕರನ್ನು ಕಾಂಗ್ರೆಸ್ ಬಸ್ಸಿಗೆ ಹತ್ತಿಸಿಕೊಂಡಿದ್ದಾರೆ. ಈ ಪಕ್ಷದಲ್ಲೂ ಉಳಿದ ನಾಯಕರ ಸುಳಿವಿಲ್ಲ.
- ಮತ್ತೀಕೆರೆ ಜಯರಾಮ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಯುದ್ಧನೌಕೆಗಳ ಕಳುಹಿಸಿ': ಇರಾನ್ ಹೆಡೆಮುರಿ ಕಟ್ಟಲು ಜಗತ್ತಿಗೆ Donald Trump ಸಂದೇಶ!

ನೌಕಾಪಡೆ ಭದ್ರತೆಯಲ್ಲಿ Hormuz ಜಲಸಂಧಿ ದಾಟಿದ ಭಾರತ ಮೂಲದ LPG tanker!

ರಷ್ಯಾ ಮೇಲೂ ಡ್ರೋನ್ ದಾಳಿ: 16 ಮಾನವರಹಿತ ಡ್ರೋನ್ ಗಳ ಹೊಡೆದುರುಳಿಸಿದ Moscow!

'ನಾನು ಕೂಡ ಪರಪುರುಷನ ಜತೆ ಹೋದರೆ ಒಪ್ಪಿಕೊಳ್ಳುತ್ತಾರೆಯೇ?': ನಟ ಜಯಂ ರವಿ ವಿರುದ್ಧ ಮಾಜಿ ಪತ್ನಿ ಆರತಿ ಕಿಡಿ!

Cricket Wedding: ಬಾಲ್ಯದ ಗೆಳತಿ ವಂಶಿಕಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ Kuldeep Yadav!

SCROLL FOR NEXT