ಕ್ಷೇತ್ರಗಳು

ಬಿಜ್ನೋರ್‌ಲ್ಲಿ ಬೀಳುತ್ತಾ 'ಜಯ'ಪ್ರದಾಗೆ 'ಮಾಲೆ'?

ಬಿಜ್ನೋರ್. ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿರುವ ಶ್ರೀಮಂತ ನಾಡು. ಫಲವತ್ತಾದ ಮಣ್ಣು, ಗಂಗೆಯ ನೀರು ಈ ಭೂಮಿಯನ್ನು ಅತ್ಯಂತ ಫಲಭರಿತಗೊಳಿಸಿದೆ.

ಬಿಜ್ನೋರ್. ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿರುವ ಶ್ರೀಮಂತ ನಾಡು. ಫಲವತ್ತಾದ ಮಣ್ಣು, ಗಂಗೆಯ ನೀರು ಈ ಭೂಮಿಯನ್ನು ಅತ್ಯಂತ ಫಲಭರಿತಗೊಳಿಸಿದೆ. ಕಣ್ಣು ಹಾಯಿಸಿದಲ್ಲೆಲ್ಲಾ ಕಬ್ಬಿನ ತೋಟ, ಗೋದಿಯ ಫಸಲು ಕಾಣಸಿಗುತ್ತೆ. ಸಕ್ಕರೆಯ ಕಣಜ. ಬೆಲ್ಲದ ಗಣಿಯೇ ಇಲ್ಲಿದೆ. 
ಪ್ರಕೃತಿ ಮಾತೆ ಮೈದುಂಬಿ ನಿಂತರೂ ಜನರು ಮಾತ್ರ ಭಿಕ್ಷುಕರಾಗಿದ್ದಾರೆ. ನಾಯಕರ ಕೆಟ್ಟ ರಾಜಕಾರಣದಿಂದ ಇಲ್ಲಿ ಬಡತನ ತಾಂಡವವಾಡುತ್ತಿದೆ. ಜನರು ಇಲ್ಲಿ ಅನಿವಾರ್ಯವಾಗಿ ಪ್ರಜಾಪ್ರಭುತ್ವದ ಪವಿತ್ರ ಪ್ರಕ್ರಿಯೆ ಚುನಾವಣೆಯಲ್ಲಿ ಪಾಲ್ಗೊಳ್ಳಬೇಕಾಗಿದೆ.
ಬಿಜ್ನೋರ್ ಚುನಾವಣಾ ಇತಿಹಾಸವನ್ನು ಗಮನಿಸಿದಾಗ ಇಲ್ಲಿ ರೈತನ ಮನಗೆದ್ದವ ಕ್ಷೇತ್ರದ ಗದ್ದುಗೆ ಏರ್ತಾನೆ. 2004 ಹಾಗೂ 2009ರ ಚುನಾವಣೆಯಲ್ಲಿ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ರಾಷ್ಟ್ರೀಯ ಲೋಕದಳ ಪಕ್ಷ ಜಯಭೇರಿ ಬಾರಿಸಿತ್ತು. ಇನ್ನು 1999 ರಾಮಜನ್ಮಭೂಮಿ ಧ್ವಂಸ ಪ್ರಕರಣದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ ಗೆದ್ದಿತ್ತು. 1998ರಲ್ಲಿ ಸಮಾಜವಾದಿ ಪಕ್ಷ ಗೆಲವಿನ ನಗು ಬೀರಿತ್ತು. ಬಿಜ್ನೋರ್ ಲೋಕಸಭಾ ಕ್ಷೇತ್ರ ಒಟ್ಟು 5 ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡಿದೆ. ಒಟ್ಟು 13 ಲಕ್ಷ ಮತದಾರರನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲಿ ಮುಸ್ಲಿಂ ಹಾಗೂ ಪರಿಶಿಷ್ಟ ಜಾತಿಯ ಮತಗಳು ನಿರ್ಣಾಯಕ. ಈ ಕ್ಷೇತ್ರದ ಗದ್ದುಗೆಗಾಗಿ ಒಟ್ಟು ಐದು ಪ್ರಮುಖ ಪಕ್ಷಗಳು ಗುದ್ದಾಟ ನಡೆಸುತ್ತಿವೆ. ಈ ಪ್ರಮುಖ ಪಕ್ಷಗಳ ಪೈಕಿ ಕಳೆದೆರಡು ಬಾರಿ ಜನಮನ ಗೆದ್ದಿರುವ ರಾಷ್ಟ್ರೀಯ ಲೋಕದಳ ಪಕ್ಷ ಈ ಬಾರಿ ಜಯಪ್ರದಾ ಅವರನ್ನು ಕಣಕ್ಕಿಳಿಸಿದೆ. ಜಯಪ್ರದಾ ಈ ಹಿಂದೆ ಸಮಾಜವಾದಿ ಪಕ್ಷದ ಸಂಸದೆಯಾಗಿದ್ದರು. ಆದ್ರೆ ಈ ಪಕ್ಷ ತೊರೆದ ಜಯಪ್ರದಾ ತಮ್ಮ ಸ್ವಕ್ಷೇತ್ರವಾದ ರಾಂಪುರವನ್ನೂ ಬಿಟ್ಟು ಈಗ ಬಿಜ್ನೋರ್‌ನಲ್ಲಿ ತಮ್ಮ ರಾಜಕೀಯ ಭವಿಷ್ಯ ಪಣಕ್ಕಿಟ್ಟಿದ್ದಾರೆ. ಬಿಜ್ನೋರ್ ಕ್ಷೇತ್ರಕ್ಕೆ ಹೊಸಬರಾಗಿರೋ ಜಯಪ್ರದಾ ಜನಮನ ಗೆಲ್ಲಲು ಶಕ್ತಿ ಮೀರಿ ಯತ್ನಿಸುತ್ತಿದ್ದಾರೆ.  ಇನ್ನು ಇವರಿಗೆ ಸ್ಪರ್ಧೆ ಒಡ್ಡಲು ಸಮಾಜವಾದಿ ಪಕ್ಷ ಷಹನವಾಜ್ ರಾಣಾ ಅವರನ್ನು ಕಣಕ್ಕಿಳಿಸಿದೆ. ಯುವ ನಾಯಕರಾಗಿರೋ ರಾಣಾ ಬಹಳ ಉತ್ಸಾಹದಿಂದಲೇ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಮುಸ್ಲಿಂ ಮತ ಬ್ಯಾಂಕಿನ ಮೇಲೆ ಕಣ್ಣಿಟ್ಟಿರೋ ರಾಣಾ ಯುವಕರನ್ನೂ ತಮ್ಮತ್ತ ಸೆಳೆಯುತ್ತಿದ್ದಾರೆ. ಮೋದಿ ಅಲೆಯ ಗುಂಗಿನಲ್ಲಿರೋ ಬಿಜೆಪಿಯಿಂದ ಕುಮಾರ್ ಭರತೇಂದ್ರ ಸಿಂಗ್ ಅಭ್ಯರ್ಥಿಯಾಗಿದ್ದಾರೆ. ಆದ್ರೆ ಬಿಜೆಪಿ ಬಿಜ್ನೋರ್ ಕ್ಷೇತ್ರದಲ್ಲಿ ಒಂದು ಯಡವಟ್ಟು ಮಾಡಿತ್ತು. ಆರಂಭದಲ್ಲಿ ರಾಜೇಂದ್ರ ಸಿಂಗ್ ಅಡ್ವೊಕೇಟ್‌ಗೆ ಟಿಕೆಟ್ ನೀಡಿತ್ತು. ಆದ್ರೆ ಆ ಬಳಿಕ ರಾಜೇಂದ್ರ ಸಿಂಗ್‌ಗೆ ಟಿಕೆಟ್ ಕ್ಯಾನ್ಸಲ್ ಮಾಡಿ ಕುಮಾರ್ ಭರತೇಂದ್ರ ಸಿಂಗ್ ಅವರಿಗೆ ನೀಡಿತ್ತು. ಇದರಿಂದ ಬಿಜೆಪಿಯೊಳಗೆ ಕಲಹ ಭುಗಿಲೆದ್ದಿತು. ಆದ್ರೆ ಸದ್ಯಕ್ಕೆ ಕಲಹ ಶಮನಗೊಂಡಿದೆ. ಮುಜಾಫರ್‌ನಗರ ದಂಗೆಯಿಂದ ನೊಂದ ಹಿಂದೂಗಳ ಮನಗೆಲ್ಲಲು ಜಿಜೆಪಿ ಶತಪ್ರಯತ್ನ ಮಾಡುತ್ತಿದೆ.
ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷ ಮುಲುಕ್‌ನಗರ್ ಅವರನ್ನು ಕಣಕ್ಕಿಳಿಸಿದೆ. ಯುವನಾಯಕನಾಗಿರೋ ಮುಲುಕ್‌ನಗರ್ ಈ ಬಾರಿ ಗೆಲ್ಲುವ ಕಪ್ಪು ಕುದುರೆ ಅಂತ ರಾಜಕೀಯ ತಜ್ಞರು ಲೆಕ್ಕಾಚಾರ ಮಾಡ್ತಿದ್ದಾರೆ. ಯಾವುದೇ ಅಬ್ಬರವಿಲ್ಲದೆ ಹೊಸ ರಣತಂತ್ರ ಅನುಸರಿಸಿರೋ ಬಿಎಸ್‌ಪಿ ಜನರ ಓಲೈಕೆಗೆ ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಬಿಜ್ನೋರ್ ಲೋಕಸಭಾ ಕ್ಷೇತ್ರ ಉತ್ತರ ಪ್ರದೇಶದ ಅತ್ಯಂತ ಹಿಂದುಳಿದ ಕ್ಷೇತ್ರಗಳಲ್ಲಿ ಒಂದು. ಇಲ್ಲಿನ ಜನರು ಮೂಲಭೂತ ಸೌಕರ್ಯದ ಕೊರತೆಯ ಜೊತೆಗೆ ನಿರುದ್ಯೋಗ ಸಮಸ್ಯೆಯಿಂದ ನರಳುತ್ತಿದ್ದಾರೆ. ಈ ಕ್ಷೇತ್ರದ ಕೆಲವು ಭಾಗದ ಜನರಿಗೆ ಒಪ್ಪೊತ್ತಿನ ಊಟಕ್ಕೂ ಕಷ್ಟ ಇದೆ. ಇಲ್ಲಿ ಯಾವುದೇ ಉದ್ಯಮಗಳಿಲ್ಲ. ಉನ್ನತ ಶಿಕ್ಷಣ ಪಡೆದ ಯುವಕರು ಬೇರೆ ರಾಜ್ಯಗಳಿಗೆ ವಲಸೆ ಹೋಗುವ ಅನಿವಾರ್ಯತೆ ಬಂದಿದೆ. ಹಳ್ಳಿಗಳಲ್ಲಿ ನಕಲಿ ಸಾರಾಯಿ ಹಾವಳಿಯೂ ಜನರ ನೆಮ್ಮದಿ ಕೆಡಿಸಿದೆ.
ಇನ್ನು ನಗರ ಪ್ರದೇಶಗಳ ರಸ್ತೆಗಳೆಲ್ಲಾ ಡಾಂಬಾರ್ ಕಾಣದೆ ವರ್ಷಗಳೇ ಕಳೆದಿವೆ. ಚರಂಡಿ ವ್ಯವಸ್ಥೆ ಹೇಳದಿರುವುದೇ ಲೇಸು. ರಾಜಕಾರಣಿಗಳ ಓಟು ನಾಟಕಗಳಿಂದ ಜನ ರೋಸಿ ಹೋಗಿದ್ದಾರೆ. ಬರೀ ಮತಕೇಳಲು ಬರುವ ನಾಯಕರು ಶಿಕ್ಷಣ, ಆರೋಗ್ಯದ ಬಗ್ಗೆ ಗಮನವೇ ಹರಿಸುತ್ತಿಲ್ಲ ಅಂತ ದೂರುತ್ತಾರೆ. ಇಲ್ಲಿನ ಮಕ್ಕಳಲ್ಲಿ ಅಪೌಷ್ಟಿಕತೆ ಸಮಸ್ಯೆ ಸಾಮಾನ್ಯವಾಗಿದೆ. ಬಿಜ್ನೋರ್‌ಗೆ ಗಂಗಾ ನದಿಯ ಕೃಪೆ ಇದ್ರೂ, ಜನನಾಯಕರ ಇಚ್ಛಾಶಕ್ತಿಯ ಕೊರತೆಯಿಂದ ಜನರ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಿಲ್ಲ. ರೈತರಿಗೆ ನೀರು ಹಾಗೂ ವಿದ್ಯುತ್ ಸಮಸ್ಯೆ ಪರಿಪರಿಯಾಗಿ ಕಾಡುತ್ತಿದೆ. ಆದ್ರೂ ಜನನಾಯಕರು ಈ ಬಾರಿಯೂ ಅಭಿವೃದ್ಧಿಯ ವಿಚಾರವನ್ನೇ ಮುಂದಿಟ್ಟುಕೊಂಡು ಜನರ ಬಳಿ ಸಾಗುತ್ತಿದ್ದಾರೆ. 
ಈ ಕ್ಷೇತ್ರದ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಿದಾಗ ಇಲ್ಲಿ ಬಿಜೆಪಿ ಹಾಗೂ ಬಿಎಸ್‌ಪಿ ನಡುವೆ ತೀವ್ರ ಸ್ಪರ್ಧೆ ನಡೆಯಲಿದೆ. ಮುಜಾಫರ್‌ನಗರ ಗಲಭೆಯ ಪ್ರಭಾವ ಇಲ್ಲೂ ಇರುವುದರಿಂದ ಬಿಜೆಪಿಗೆ ಹಿಂದೂಗಳು ಕೈ ಹಿಡಿಯೋ ಸಾಧ್ಯತೆ ಇದೆ. ಆರ್‌ಎಲ್‌ಡಿಗೆ ಮಹಿಳಾ ಮತದಾರರೇನಾದ್ರೂ ಆಶೀರ್ವಾದ ಮಾಡಿದ್ರೆ ಜಯಪ್ರದಾ ಅವರು ಗೆಲವಿನ ಭರವಸೆ ಇಟ್ಟುಕೊಳ್ಳಬಹುದು.

-ವಿಜಯಲಕ್ಷ್ಮಿ ಶಿಬರೂರು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಯುದ್ಧನೌಕೆಗಳ ಕಳುಹಿಸಿ': ಇರಾನ್ ಹೆಡೆಮುರಿ ಕಟ್ಟಲು ಜಗತ್ತಿಗೆ Donald Trump ಸಂದೇಶ!

ನೌಕಾಪಡೆ ಭದ್ರತೆಯಲ್ಲಿ Hormuz ಜಲಸಂಧಿ ದಾಟಿದ ಭಾರತ ಮೂಲದ LPG tanker!

ರಷ್ಯಾ ಮೇಲೂ ಡ್ರೋನ್ ದಾಳಿ: 16 ಮಾನವರಹಿತ ಡ್ರೋನ್ ಗಳ ಹೊಡೆದುರುಳಿಸಿದ Moscow!

'ನಾನು ಕೂಡ ಪರಪುರುಷನ ಜತೆ ಹೋದರೆ ಒಪ್ಪಿಕೊಳ್ಳುತ್ತಾರೆಯೇ?': ನಟ ಜಯಂ ರವಿ ವಿರುದ್ಧ ಮಾಜಿ ಪತ್ನಿ ಆರತಿ ಕಿಡಿ!

Cricket Wedding: ಬಾಲ್ಯದ ಗೆಳತಿ ವಂಶಿಕಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ Kuldeep Yadav!

SCROLL FOR NEXT