ಕ್ಷೇತ್ರಗಳು

ಫಿಲಿಬಿಟ್‌ನಲ್ಲಿ ಮನೇಕಾ ಮೇನಿಯಾ ಹೇಗಿದೆ?

ಇದು ಗಾಂಧಿ ಕುಟುಂಬಕ್ಕೆ ಮೊದಲಿನಿಂದಲೂ ಆಶೀರ್ವಾದ ಮಾಡಿಕೊಂಡು ಬಂದಿರುವ..

ಫಿಲಿಬಿಟ್ ನೇಪಾಳ ಗಡಿಗೆ ಅಂಟಿಕೊಂಡಿರುವ ಉತ್ತರಪ್ರದೇಶದ ಸುಂದರ ನಾಡು. ಇಲ್ಲಿನ ಬಿದಿರಿನ ನಾದ ಇಡೀ ಸಂಗೀತ ಜಗತ್ತನ್ನೇ ಮಂತ್ರಮುಗ್ಧಗೊಳಿಸುತ್ತಾ ಬಂದಿದೆ. ಫಿಲಿಬಿಟ್ ಕೊಳಲುಗಳು ವಿಶ್ವವಿಖ್ಯಾತ ಕೊಳಲುವಾದಕರ ಕೈಯಲ್ಲಿ ಸೇವೆ ಸಲ್ಲಿಸಿವೆ.
ಇನ್ನು ಇಲ್ಲಿನ ಮಾವಿನ ಹಣ್ಣಿನ ರುಚಿಗೆ ದೇಶ ವಿದೇಶದ ಮಾವು ಪ್ರಿಯರು ಮಾರುಹೋಗಿದ್ದಾರೆ. ದಟ್ಟಾರಣ್ಯ ಹೊಂದಿರುವ ಫಿಲಿಬಿಟ್ ಹುಲಿಗಳ ನಗರಿಯೂ ಹೌದು. ಪ್ರಕೃತಿ ಸಂಪತ್ತೇ ಈ ನಾಡಿನ ಆಸ್ತಿ. ಇಂಥ ಸುಂದರ ನಗರಿಯಲ್ಲಿ ಈಗ ರಾಜಕಾರಣಿಗಳ ಗರ್ಜನೆ ಭರ್ಜರಿಯಾಗಿ ಕೇಳಿ ಬರುತ್ತಿದೆ. ಇಲ್ಲಿ ಚುನಾವಣಾ ಕಾವು ಹೆಚ್ಚುತ್ತಲೇ ಇದೆ.  
ಫಿಲಿಬಿಟ್ ಉತ್ತರಪ್ರದೇಶದ ಪ್ರತಿಷ್ಠಿತ ಕಣ. ಇದು ಗಾಂಧಿ ಕುಟುಂಬಕ್ಕೆ ಮೊದಲಿನಿಂದಲೂ ಆಶೀರ್ವಾದ ಮಾಡಿಕೊಂಡು ಬಂದಿರುವ ಕ್ಷೇತ್ರಗಳಲ್ಲೊಂದು. ಕಳೆದ ಐದು ಲೋಕಸಭಾ ಚುನಾವಣೆಗಳಲ್ಲಿ ಕ್ರಮವಾಗಿ  ಸಂಜಯ್ ಗಾಂಧಿ, ಮನೇಕಾ ಗಾಂಧಿ ಹಾಗೂ ಪುತ್ರ ವರುಣ್ ಗಾಂಧಿಗೆ ರಾಜಕೀಯ ಶ್ರೀರಕ್ಷೆ ನೀಡಿರುವ ಕ್ಷೇತ್ರವಿದು.
ಇಂದಿರಾ ಗಾಂಧಿ ಸೊಸೆ ಮನೇಕಾ ಗಾಂಧಿಗೆ ರಾಜಕೀಯ ಬಲ ಕೊಟ್ಟಿದ್ದೇ ಫಿಲಿಬಿಟ್ ಮತದಾರ. 1989ರಲ್ಲಿ ಮನೇಕಾಗಾಂಧಿ ಇಲ್ಲಿ ಜನತಾದಳದಿಂದ ಸ್ಪರ್ಧಿಸಿ ದಾಖಲೆ ಅಂತರದಿಂದ ಜಯಗಳಿಸಿದ್ದರು.  ಆದರೆ 1991 ರಲ್ಲಿ ರಾಮಜನ್ಮ ಭೂಮಿ ಅಲೆಯ ಕಾರಣ ಮನೇಕಾ ಬಿಜೆಪಿ ಅಭ್ಯರ್ಥಿ ಪರಶುರಾಮ ಅವರೆದುರು ಸೋಲನುಭವಿಸಿದರು. 1996ರಲ್ಲಿ ಮತ್ತೆ ಜನತಾದಳದಿಂದಲೇ ಚುನಾವಣಾ ಕಣಕ್ಕಿಳಿದ ಮನೇಕಾ ಜನರ ಅನುಕಂಪ ಗಳಿಸುವಲ್ಲಿ ಯಶಸ್ವಿಯಾದರು. 1998 ಮತ್ತು 1999ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಮತ್ತೆ ಜಯಶಾಲಿಯಾದರು. 2004ರಲ್ಲಿ ಬಿಜೆಪಿಯಿಂದ ಕಣಕ್ಕಿಳಿದಾಗಲೂ ಫಿಲಿಬಿಟ್ ಮತದಾರರು ಮನೇಕಾ ಮನಸ್ಸು ನೋಯಿಸಲಿಲ್ಲ.
ಆದರೆ 2009ರ ಚುನಾವಣೆಯಲ್ಲಿ ಮನೇಕಾ ಫಿಲಿಬಿಟ್‌ನಲ್ಲಿ ತಮ್ಮ ಪುತ್ರ, ಬಿಜೆಪಿಯ ಫಯರ್‌ಬ್ರ್ಯಾಂಡ್ ವರುಣ್ ಗಾಂಧಿಯನ್ನು ಕಣಕ್ಕಿಳಿಸಿ ಔಲಾ ಕ್ಷೇತ್ರಕ್ಕೆ ತೆರಳಿದರು. ಈಗ ಮತ್ತೆ ಅವರು ಔಲಾ ತೊರೆದು ಮತ್ತೆ ಫಿಲಿಬಿಟ್‌ಗೆ ಬಂದು ತಮ್ಮ ಅದೃಷ್ಟ ಪರೀಕ್ಷೆಗೆ ಕಣಕ್ಕಿಳಿದಿದ್ದಾರೆ.
ಫಿಲಿಬಿಟ್ ಲೋಕಸಭಾ ಕ್ಷೇತ್ರದಲ್ಲಿ ಸುಮಾರು 13,10,000 ಮತದಾರರಿದ್ದಾರೆ. ಈ ಪೈಕಿ 4 ಲಕ್ಷ ಮುಸಲ್ಮಾನರು ಹಾಗೂ 3.5 ಪರಿಶಿಷ್ಟ ಜಾತಿ  ಹಾಗೂ ಪಂಗಡದವರ ಮತ ಇದೆ. ಒಟ್ಟು 5 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಇಲ್ಲಿನ 4 ಕ್ಷೇತ್ರಗಳಲ್ಲಿ ಸಮಾಜವಾದಿ ಹಾಗೂ ಒಂದು ಕ್ಷೇತ್ರದಲ್ಲಿ ಬಿಜೆಪಿಯ ಶಾಸಕರ ಆಳ್ವಿಕೆ ಇದೆ. ಆದರೆ ಇಲ್ಲಿ ಲೋಕಸಭಾ ಚುವಾವಣೆಯನ್ನು ಹಿಂದೂ ಮತ್ತು ಮುಸಲ್ಮಾನರ ನಡುವಿನ ಸ್ಪರ್ಧೆಯೆಂದೇ ಪರಿಗಣಿಸಲಾಗುತ್ತದೆ.
ಫಿಲಿಬಿಟ್ ಲೋಕಸಭಾ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಹೆಚ್ಚಿನ ಎಲ್ಲಾ ಪ್ರಮುಖ ಪಕ್ಷಗಳೂ ಸಜ್ಜಾಗಿವೆ. ಬಿಜೆಪಿಯ ಮನೇಕಾ ಗಾಂಧಿ ಅವರಿಗೆ ನೇರ ಸ್ಪರ್ಧೆಯೊಡ್ಡಲು ಬಹುಜನವಾದಿ ಪಕ್ಷದ ಅನೀಸ್ ಅಹಮ್ಮದ್ ಅಲಿಯಾಸ್ 'ಫೂಲ್‌' ಬಾಬು ತಯಾರಾಗಿದ್ದಾರೆ. ಇನ್ನು ಸಮಾಜವಾದಿ ಪಕ್ಷದಿಂದ ಬುದ್ಧಸೇನ್ ಹಾಗೂ ಕಾಂಗ್ರೆಸ್‌ನಿಂದ ಸಂಜಯ್ ಕಪೂರ್ ಫೈಟ್ ಕೊಡಲು ಸಿದ್ಧರಾಗಿದ್ದಾರೆ.
ಗಾಂಧಿ ಕುಟುಂಬಕ್ಕೆ ನಿಷ್ಠೆ ಪ್ರದರ್ಶಿಸುತ್ತಿರುವ ಫಿಲಿಬಿಟ್ ಲೋಕಸಭಾ ಕ್ಷೇತ್ರದ ಪರಿಸ್ಥಿತಿ ಮಾತ್ರ ಕೆಟ್ಟದಾಗಿದೆ. ಈ ಕ್ಷೇತ್ರದಲ್ಲಿ ನೈಸರ್ಗಿಕ ಸಂಪತ್ತು ವಿಪುಲವಾಗಿದ್ದರೂ, ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದ ಇದು ಸಾಕಷ್ಟು ಹಿಂದುಳಿದಿದೆ. ಅದರಲ್ಲೂ ಮುಖ್ಯವಾಗಿ ಹಳ್ಳಿಗಳ ಸ್ಥಿತಿಯನ್ನು ಕೇಳುವವರೇ ಇಲ್ಲ.
ರಾಜಕಾರಣಿಗಳ ಅಸಡ್ಡೆ ಹಾಗೂ ನಿರ್ಲಕ್ಷ್ಯದಿಂದ ಇಲ್ಲಿನ ಮಂದಿ ರೋಸಿ ಹೋಗಿದ್ದಾರೆ. ಇದು ಅವರ ಮಾತಿನಿಂದಲೇ ಸ್ಪಷ್ಟವಾಗುತ್ತದೆ. ಹಳ್ಳಿಗಳ ಕತೆ ಹಾಗಿರಲಿ, ನಗರ ಪ್ರದೇಶವೇನಾದರೂ ಅಭಿವೃದ್ಧಿ ಕಂಡಿದೆಯಾ ಅಂದರೆ ಅದೂ ಇಲ್ಲ. ಮುಖ್ಯ ರಸ್ತೆಯೊಂದನ್ನು ಬಿಟ್ಟರೆ ಉಳಿದ ರಸ್ತೆಗಳೆಲ್ಲಾ ಡಾಂಬರು ಕಾಣದೇ ಮಣ್ಣುಮಯವಾಗಿವೆ.
ಆಡಳಿತ ಕಚೇರಿಗಳೂ ಕೂಡ ಓಬಿರಾಯನ ಕಾಲದಲ್ಲಿ ರಿಪೇರಿ ಕಂಡವು. ಆಸ್ಪತ್ರೆ, ಶಾಲೆಗಳ ಗೋಳು ಕೇಳುವವರೇ ಇಲ್ಲ. ಐದು ಬಾರಿ ಸಂಸದೆಯಾಗಿರುವ ಮನೇಕಾ ಗಾಂಧಿ ಅವರಿಗೆ ಪ್ರಾಣಿಗಳ ಮೇಲಿರುವ ಪ್ರೀತಿಯಲ್ಲಿ ಒಂದಂಶವಾದರೂ ಕ್ಷೇತ್ರದ ಮಂದಿಯ ಮೇಲಿದ್ದರೆ ಆ ಕ್ಷೇತ್ರ ಒಂದಿಷ್ಟು ಅಭಿವೃದ್ಧಿಯಾದರೂ ಆಗುತ್ತಿತ್ತು.
ಇಲ್ಲಿ ಶಾರಾದಾ ನದಿ ಉಕ್ಕಿ ಹರಿದರೆ ಮಂದಿಯ ಬದುಕು ಅಧೋಗತಿ. ಈವರೆಗೆ ಇವರ ಈ ಸಮಸ್ಯೆಗೆ ಪರಿಹಾರವೇ ಸಿಕ್ಕಿಲ್ಲ. ಇನ್ನು ರಾಜಧಾನಿಯಿಂದ ಕೆಲವೇ ಕಿಲೋ ಮೀಟರ್ ದೂರದಲ್ಲಿರುವ ಫಿಲಿಬಿಟ್‌ನಲ್ಲಿ ರೈಲುಗಳು ಓಡುತ್ತಿರುವುದು ಮೀಟರ್‌ಗೇಜ್‌ನಲ್ಲಿ. ಬ್ರಾಡ್ ಗೇಜ್‌ನ ಇವರ ಬೇಡಿಕೆಗೆ ಬೆಲೆಯೇ ಇಲ್ಲದಂತಾಗಿದೆ. ಒಟ್ಟಾರೆ ಈ ಕ್ಷೇತ್ರದಲ್ಲಿ ಅಭಿವೃದ್ಧಿಗಿಂತ ಜಾತಿ, ಮತದ ಲೆಕ್ಕಾಚಾರವೇ ಪ್ರಮುಖವಾಗಿರುವುದರಿಂದ ಪ್ರಗತಿ ಕನ್ನಡಿಯೊಳಗಿನ ಗಂಟಾಗಿದೆ.
ಫಿಲಿಬಿಟ್ ಕ್ಷೇತ್ರದಲ್ಲಿ ಮೋದಿ ಅಲೆಯ ಅಬ್ಬರ ಇರುವುದರಿಂದ ಬಿಜೆಪಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ಹೆಚ್ಚಿದೆ. ಇವರ ಪ್ರಚಾರ ಕಾರ್ಯವೂ ಭರ್ಜರಿಯಾಗಿ ನಡೆಯುತ್ತಿದೆ.
ಮನೇಕಾ ಹಳ್ಳಿ ಹಳ್ಳಿಗಳಲ್ಲಿ ತಮ್ಮ ಓಟ್ ಬ್ಯಾಂಕ್ ಹುಡುಕಿಕೊಂಡು ಹೋಗಿ ಅವರ ಮನವೊಲಿಸುವಲ್ಲಿ ನಿರತರಾಗಿದ್ದಾರೆ. ಬಿಜೆಪಿಗೆ ಕಠಿಣ ಸ್ಪರ್ಧೆ ಒಡ್ಡಲು ಈ ರಾಜ್ಯದಲ್ಲಿ ಆಳ್ವಿಕೆ ನಡೆಸುತ್ತಿರುವ ಸಮಾಜವಾದಿ ಪಕ್ಷವೂ ರೆಡಿಯಾಗಿದೆ. ಇನ್ನು ಕಾಂಗ್ರೆಸ್‌ಗೆ ಇಲ್ಲಿ ನೆಲೆ ಇಲ್ಲದಿದ್ದರೂ ತನ್ನ ಪ್ರಯತ್ನದಲ್ಲಿ ಅದು ಹಿಂದೆ ಬಿದ್ದಿಲ್ಲ. ಸೋನಿಯಾ ಗಾಂಧಿಯ ಆಪ್ತರಾಗಿರುವ ಸಂಜಯ್ ಕಪೂರ್ ಕೂಡ ಉತ್ಸಾಹದಲ್ಲಿದ್ದಾರೆ.
ಉಳಿದಂತೆ ಬಹುಜನ ಸಮಾಜವಾದಿ ಪಕ್ಷ ಹೆಚ್ಚು ಅಬ್ಬರ ಇಲ್ಲದೆ, ಮಾಧ್ಯಮಗಳ ಕೈಗೆ ಸಿಗದೆ ತನ್ನದೇ ರಣನೀತಿಯನ್ನ ರೂಪಿಸುತ್ತಿದೆ. ಆಮ್ ಆದ್ಮಿ ಪಕ್ಷ ಈಗತಾನೇ ಇಲ್ಲಿ ಕಣ್ಣು ಬಿಡುತ್ತಿದೆ. ಒಟ್ಟಾರೆ ನೋಡುವುದಾದರೆ ಫಿಲಿಬಿಟ್‌ನಲ್ಲಿ ಬಿಜೆಪಿ ಬಲಿಷ್ಠ ಪಕ್ಷವೆಂದು ಹೊರನೋಟಕ್ಕೆ ಕಂಡರೂ, ಎಸ್‌ಪಿ ಮತ್ತು ಬಿಎಸ್‌ಪಿಯ ಪ್ರಾಬಲ್ಯವನ್ನೂ ತಳ್ಳಿ ಹಾಕುವುದಕ್ಕೆ ಸಾಧ್ಯವಿಲ್ಲ.

-ವಿಜಯಲಕ್ಷ್ಮಿ ಶಿಬರೂರು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಯುದ್ಧನೌಕೆಗಳ ಕಳುಹಿಸಿ': ಇರಾನ್ ಹೆಡೆಮುರಿ ಕಟ್ಟಲು ಜಗತ್ತಿಗೆ Donald Trump ಸಂದೇಶ!

ನೌಕಾಪಡೆ ಭದ್ರತೆಯಲ್ಲಿ Hormuz ಜಲಸಂಧಿ ದಾಟಿದ ಭಾರತ ಮೂಲದ LPG tanker!

ರಷ್ಯಾ ಮೇಲೂ ಡ್ರೋನ್ ದಾಳಿ: 16 ಮಾನವರಹಿತ ಡ್ರೋನ್ ಗಳ ಹೊಡೆದುರುಳಿಸಿದ Moscow!

'ನಾನು ಕೂಡ ಪರಪುರುಷನ ಜತೆ ಹೋದರೆ ಒಪ್ಪಿಕೊಳ್ಳುತ್ತಾರೆಯೇ?': ನಟ ಜಯಂ ರವಿ ವಿರುದ್ಧ ಮಾಜಿ ಪತ್ನಿ ಆರತಿ ಕಿಡಿ!

Cricket Wedding: ಬಾಲ್ಯದ ಗೆಳತಿ ವಂಶಿಕಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ Kuldeep Yadav!

SCROLL FOR NEXT