ಕ್ಷೇತ್ರಗಳು

ನಗ್ಮಾ ನಗುವಿಗೆ ಮನ ಸೋಲುವುದೇ ಮೀರಟ್?

ಮಹಾಭಾರತದಲ್ಲಿ ಶಕುನಿ ಆಡಿದ ಕುತಂತ್ರ, ಕೌರವರ ಕುಟಿಲ ನೀತಿ, ಪಾಂಡವರ ಧರ್ಮಯುದ್ಧ ಎಲ್ಲಾ..

ರಾಜಕಾರಣದ ನಾನಾ ರಣತಂತ್ರಗಳನ್ನು ನಾವು ಕಂಡಿದ್ದೇ ಇಲ್ಲಿ. ಮಹಾಭಾರತದಲ್ಲಿ ಶಕುನಿ ಆಡಿದ ಕುತಂತ್ರ, ಕೌರವರ ಕುಟಿಲ ನೀತಿ, ಪಾಂಡವರ ಧರ್ಮಯುದ್ಧ ಎಲ್ಲಾ ನಡೆದಿರುವ ಹಸ್ತಿನಾಪುರ ಇರುವುದೇ ಇದೇ ಮೀರಟ್‌ನಲ್ಲಿ. ಇಂಥ ಕ್ಷೇತ್ರದಲ್ಲಿ ರಾಜಕಾರಣ ಚುನಾವಣಾ ಸಂದರ್ಭದಲ್ಲಿ ರಂಗೇರದೇ ಇರುವುದೇ ಹೇಳಿ? ಮೀರಟ್ ಲೋಕಸಭಾ ಕ್ಷೇತ್ರ ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಆಶೀರ್ವಾದ ಮಾಡಿದ ಕ್ಷೇತ್ರ. ಕಳೆದ ವಿಧಾನಸಭಾ ಚುನಾವಣೆಯಲ್ಲೂ ಈ ಕ್ಷೇತ್ರದ ಮಂದಿ ಮೂರು ಕ್ಷೇತ್ರಗಳಲ್ಲಿ ಬಿಜೆಪಿಯ ಕಮಲವನ್ನೇ ಅರಳಿಸಿದ್ದರು. ಆದರೆ ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಕಠಿಣ ಸ್ಪರ್ಧೆ ಒಡ್ಡಲು ಎಸ್‌ಪಿ ಬಿಎಸ್‌ಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಕಠಿಣ ಪರಿಶ್ರಮದಲ್ಲಿ ತೊಡಗಿದ್ದಾರೆ.
ಬಡ, ಮಧ್ಯಮ ವರ್ಗದವರನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿರುವ ಈ ಕ್ಷೇತ್ರದಲ್ಲಿ ಯಾರು ಇವರ ಮನವೊಲಿಸವಲ್ಲಿ ಯಶಸ್ವಿಯಾಗುತ್ತಾರೋ ಅವರೇ ಈ ಕ್ಷೇತ್ರಕ್ಕೆ ಒಡೆಯ. ಮೀರಟ್ ಲೋಕಸಭಾ ಕ್ಷೇತ್ರದಲ್ಲಿ ಮುಸ್ಲಿಂ ಹಾಗೂ ಎಸ್‌ಸಿ/ಎಸ್‌ಟಿ ಮತಗಳೇ ನಿರ್ಣಾಯಕ. ಇವರನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳಲು ಪ್ರತಿ ರಾಜಕೀಯ ನಾಯಕರೂ ಶತಪ್ರಯತ್ನ ಮಾಡುತ್ತಿದ್ದಾರೆ. ಮೀರಟ್ ಕ್ಷೇತ್ರದ ವಿಶೇಷತೆ ಅಂದರೆ ಇಲ್ಲಿನ ಮಂದಿ ಎಲ್ಲಾ ಪಕ್ಷದ ಅಭ್ಯರ್ಥಿಗಳನ್ನೂ ಗೆಲ್ಲಿಸಿ ಲೋಕಸಭೆಗೆ ಕಳುಹಿಸಿದ್ದಾರೆ.
2009-ಬಿಜೆಪಿ, 2004-ಬಿಎಸ್‌ಪಿ, 1999-ಕಾಂಗ್ರೆಸ್, 1989-ಜನತಾದಳ, 1977-ಬಿಎಲ್‌ಡಿ, 1967ಎಸ್‌ಎಸ್‌ಪಿ.  ಹಾಗಾಗಿ ಈ ಬಾರಿ ಪ್ರತಿ ಪ್ರಮುಖ ಪಕ್ಷಗಳು ಕಠಿಣ ಸ್ಪರ್ಧೆಯೊಡ್ಡಬಲ್ಲ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿವೆ. ಬಿಜೆಪಿಯಿಂದ ಹಿಂದೆ ಸಂಸದರಾಗಿದ್ದ ರಾಜೇಂದ್ರ ಅಗರವಾಲ್ ಅವರೇ ಸ್ಪರ್ಧೆ ಎದುರಿಸುತ್ತಿದ್ದಾರೆ. ಇವರಿಗೆ ಬಿಜೆಪಿಯೊಳಗಿನಿಂದಲೇ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಉತ್ತರ ಪ್ರದೇಶ ಬಿಜೆಪಿಯ ಹಿರಿಯ ನಾಯಕ ಲಕ್ಷ್ಮೀಕಾಂತ್ ವಾಜಪೇಯಿ ಅವರು ಮುನಿಸುಕೊಂಡಿದ್ದು ಈವರೆಗೂ ರಾಜೇಂದ್ರ ಅಗರವಾಲ್ ಅವರ ಪರ ಪ್ರಚಾರಕ್ಕೆ ಮುಂದಾಗಿಲ್ಲ. ಆದರೆ ಪಕ್ಷದೊಳಗಿನ ಅಂತಃಕಲಹವನ್ನು ನಿವಾರಿಸುವ ವಿಶ್ವಾಸ ಅಗರವಾಲ್‌ಗಿದೆ.
ಕಾಂಗ್ರೆಸ್ ಈ ಬಾರಿ ಮೀರಟ್‌ನಲ್ಲಿ ಅದೃಷ್ಟ ಪರೀಕ್ಷಿಸಲು ಬಹುಭಾಷಾ ನಟಿ ನಗ್ಮಾಳನ್ನು ಕಣಕ್ಕಿಳಿಸಿದೆ. ನಗ್ಮಾಳ ನಗು, ಆಕೆಯ ಪ್ರಚಾರ ವೈಖರಿ ಜನರನ್ನು ಆಕರ್ಷಿಸುತ್ತಿದೆ. ನಗ್ಮಾ ಮೀರಟ್‌ನ ಗಲ್ಲಿ ಗಲ್ಲಿ ತಿರುಗಾಡಿ ಮತಯಾಚಿಸುತ್ತಿದ್ದಾರೆ.
ಇನ್ನು ಈ ಕ್ಷೇತ್ರದಲ್ಲಿ ಬಿಎಸ್‌ಪಿಯ ಶಾಹಿದ್ ಅಕ್ಲಕ್ ಪ್ರಬಲ ಅಭ್ಯರ್ಥಿ ಎನಿಸಿಕೊಂಡಿದ್ದಾರೆ. ಇವರು ಮಾಧ್ಯಮದ ಮುಂದೆ ಕಾಣಿಸಿಕೊಳ್ಳದೇ ತಮ್ಮ ಪಾಡಿಗೆ ತಾವು ಮತಯಾಚಿಸುತ್ತಿದ್ದಾರೆ. ಶಾಹಿದ್ ಅಕ್ಲಕ್ ಮುಸ್ಲಿಂ ಮತ್ತು ಎಸ್‌ಸಿ, ಎಸ್‌ಟಿ ಮತದಾರರನ್ನು ಗಂಭೀರವಾಗಿಯೇ ಓಲೈಸುತ್ತಿದ್ದಾರೆ.
ಉತ್ತರ ಪ್ರದೇಶವನ್ನು ಆಳುತ್ತಿರುವ ಎಸ್‌ಪಿಯ ಶಾಹಿದ್ ಮನ್ಸೂರ್ ಕೂಡ ಸ್ಪರ್ಧೆಗೆ ಸಿದ್ಧವಾಗಿದ್ದಾರೆ. ಇವರು ಮುಸ್ಲಿಂ, ಎಸ್‌ಸಿ/ಎಸ್‌ಟಿ ಜೊತೆಗೆ ಮೇಲ್ವರ್ಗದ ಹಿಂದುಗಳ ಮತಬ್ಯಾಂಕ್ ಮೇಲೆಯೂ ದೃಷ್ಟಿ ನೆಟ್ಟಿದ್ದಾರೆ. ಇನ್ನು ಆಮ್ ಆದ್ಮಿ ಪಕ್ಷದ ಹಿಮಾಂಶು ಸಿಂಗ್ ಕೂಡ ಮತ ಯಾಚನೆಯಲ್ಲಿ ಬ್ಯುಸಿಯಾಗಿದ್ದಾರೆ.
ಮೀರಟ್ ಲೋಕಸಭಾ ಕ್ಷೇತ್ರ ಒಟ್ಟು ಐದು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಸುಮಾರು 15 ಲಕ್ಷ ಮತದಾರರಿರುವ ಈ ಕ್ಷೇತ್ರದಲ್ಲಿ ಹಿಂದು ಮತದಾರರದ್ದೇ ಪ್ರಾಬಲ್ಯ. ಈ ಕ್ಷೇತ್ರ ಕ್ರೀಡಾ ಸಾಮಾಗ್ರಿಗಳ ತಯಾರಿಕೆಗೆ ವಿಶ್ವಪ್ರಸಿದ್ಧ. ಮೀರಟ್ ಕತ್ತರಿ ಉತ್ಪಾದನೆಗೂ ಖ್ಯಾತಿಗಳಿಸಿದೆ. ಇಲ್ಲಿನ ಹೆಚ್ಚಿನ ಮಂದಿ ಕೃಷಿಯನ್ನೇ ನಂಬಿದ್ದಾರೆ. ಕಬ್ಬು ಪ್ರಮುಖ ಬೆಳೆ. ಬೆಲ್ಲ ತಯಾರಿಕೆಗೂ ಇದು ಹೆಸರುವಾಸಿ.
ಮೀರಟ್ ಲೋಕಸಭಾ ಕ್ಷೇತ್ರದಲ್ಲಿ 'ವಿಕಾಸ' ರಾಜಕಾರಣಿಗಳ ಭರವಸೆಗಳಿಗಷ್ಟೇ ಸೀಮಿತವಾಗಿದೆ. ಇಲ್ಲಿನ ರಸ್ತೆ ಸಮಸ್ಯೆ ನೋಡಿದರೆ ಕರುಣೆ ಉಕ್ಕುತ್ತದೆ. ಇಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತದೆ. ನಗರದ ಮಂದಿ ರಸ್ತೆ, ಚರಂಡಿ ಇಲ್ಲದೆ ಆಕ್ರೋಶಿತರಾಗಿದ್ದಾರೆ.
ಇನ್ನು ಹಳ್ಳಿಗಳಲ್ಲಿ ಆರೋಗ್ಯ, ಶಿಕ್ಷಣದ ಸಮಸ್ಯೆ ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ರಾಜಕೀಯ ನಾಯಕರು ಈ ಬಗ್ಗೆ ಯೋಚನೆಯೇ ಮಾಡುತ್ತಿಲ್ಲ. ಹಳ್ಳಿ ಮಂದಿ ಕೂಡ ರಾಜಕಾರಣಿಗಳ ಅಸಡ್ಡೆಯಿಂದ ರೋಸಿಹೋಗಿದ್ದಾರೆ. ಕೃಷಿಕರನ್ನು ವಿದ್ಯುತ್ ಸಮಸ್ಯೆ ಕಾಡುತ್ತಿದೆ. ಕಬ್ಬಿನ ಹಣ ರೈತರಿಗೆ ಇನ್ನೂ ಸಂದಾಯವಾಗಿಲ್ಲ. ಬೆಳೆದ ಬೆಳೆಗೆ ಸರಿಯಾದ ಬೆಲೆಯೇ ಸಿಗುವುದಿಲ್ಲ್ಲ.
ಸದ್ಯಕ್ಕೆ ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ತಮ್ಮದೇ ರಣನೀತಿ ರೂಪಿಸಿ ಮತಯಾಚಿಸುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ನಗ್ಮಾ ಆಗಮನ ಈ ಕ್ಷೇತ್ರಕ್ಕೆ ಪ್ರತಿಷ್ಠಿತ ಪಟ್ಟ ನೀಡಿದೆ. ನಗ್ಮಾ ಮತದಾರರ ಮನವೊಲಿಸಲು ಕಠಿಣ ಶ್ರಮ ಪಡುತ್ತಿದ್ದಾರೆ. ತಮ್ಮ ಪರಿಶ್ರಮಕ್ಕೆ ಮೀರಟ್ ಮಂದಿ ಬೆಂಬಲ ಕೊಡುತ್ತಾರೆ ಎನ್ನುವ ವಿಶ್ವಾಸದಲ್ಲಿದ್ದಾರೆ. ಮತ್ತೊಂದೆಡೆ ಬಿಜೆಪಿ ಅಭ್ಯರ್ಥಿ ರಾಜೇಂದ್ರ ಅಗರ್‌ವಾಲ್ ಕೂಡ ಪಕ್ಷದ ಎಲ್ಲರನ್ನು ಒಗ್ಗೂಡಿಸಿ ಮತಯಾಚಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಮೋದಿ ಅಲೆಯ ಲಾಭ ಪಡೆದು ಈ ಬಾರಿಯೂ ಮೀರಟ್ ಲೋಕಸಭಾ ಕ್ಷೇತ್ರದ ಒಡೆಯನಾಗಲು ಬಯಸುತ್ತಿದ್ದಾರೆ. ಏಪ್ರಿಲ್ 10ಕ್ಕೆ ನಡೆಯುವ ಮತದಾನಕ್ಕೆ ಮೀರಟ್ ಕ್ಷೇತ್ರ ಸಜ್ಜಾಗಿದೆ.
=  ವಿಜಯಲಕ್ಷ್ಮಿ ಶಿಬರೂರು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಯುದ್ಧನೌಕೆಗಳ ಕಳುಹಿಸಿ': ಇರಾನ್ ಹೆಡೆಮುರಿ ಕಟ್ಟಲು ಜಗತ್ತಿಗೆ Donald Trump ಸಂದೇಶ!

ನೌಕಾಪಡೆ ಭದ್ರತೆಯಲ್ಲಿ Hormuz ಜಲಸಂಧಿ ದಾಟಿದ ಭಾರತ ಮೂಲದ LPG tanker!

ರಷ್ಯಾ ಮೇಲೂ ಡ್ರೋನ್ ದಾಳಿ: 16 ಮಾನವರಹಿತ ಡ್ರೋನ್ ಗಳ ಹೊಡೆದುರುಳಿಸಿದ Moscow!

'ನಾನು ಕೂಡ ಪರಪುರುಷನ ಜತೆ ಹೋದರೆ ಒಪ್ಪಿಕೊಳ್ಳುತ್ತಾರೆಯೇ?': ನಟ ಜಯಂ ರವಿ ವಿರುದ್ಧ ಮಾಜಿ ಪತ್ನಿ ಆರತಿ ಕಿಡಿ!

Cricket Wedding: ಬಾಲ್ಯದ ಗೆಳತಿ ವಂಶಿಕಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ Kuldeep Yadav!

SCROLL FOR NEXT