ಕ್ಷೇತ್ರಗಳು

ಫಲಿಸಿತೇ ಪೂಜಾರಿ ಫಲ?

ಅನ್ನ ಭಾಗ್ಯ, ಕ್ಷೀರ ಭಾಗ್ಯದ ಪ್ರಚಾರ ಕತೆ, ಬಿಜೆಪಿಗರ ಭ್ರಷ್ಟಾಚಾರ, ವ್ಯಭಿಚಾರದ ಕತೆ, ಆಗಾಗ ಮೋದಿ ಪತ್ನಿ ಕತೆ, ಮಧ್ಯೆ..

ಜನರೆದುರು ಬಿಚ್ಚು ನುಡಿ, ಹಿಂಬಾಲಕರಿಗೆ ಚುಚ್ಚು ನುಡಿ
ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸುತ್ತುತ್ತಿರುವ ಪೂಜಾರಿ
-ಜಿತೇಂದ್ರ ಕುಂದೇಶ್ವರ
ಮಂಗಳೂರು: 
ಅನ್ನ ಭಾಗ್ಯ, ಕ್ಷೀರ ಭಾಗ್ಯದ ಪ್ರಚಾರ ಕತೆ, ಬಿಜೆಪಿಗರ ಭ್ರಷ್ಟಾಚಾರ, ವ್ಯಭಿಚಾರದ ಕತೆ, ಆಗಾಗ ಮೋದಿ ಪತ್ನಿ ಕತೆ, ಮಧ್ಯೆ ಜನಾರ್ದನ ಪೂಜಾರಿಯ ಆತ್ಮಕತೆ, ಅಲ್ಲಲ್ಲಿ ಮತದಾರರ ಉಪಕತೆ!
ಜನರ ಮುಂದೆ ಬಿಚ್ಚು ನುಡಿ, ಎಡವಟ್ಟಾದರೆ ಹಿಂಬಾಲಕರಿಗೆ ಚುಚ್ಚು ನುಡಿ! ಇದು “ನಾಯಕರ ನಡಿಗೆ'' ದಕ್ಷಿಣ ಕನ್ನಡ ಕಾಂಗ್ರೆಸ್ ಅಭ್ಯರ್ಥಿ ಜನಾರ್ದನ ಪೂಜಾರಿ ಪ್ರಚಾರ ಕತೆ! ಜನರಿಗೇ ಸತತ ಪ್ರಶ್ನೆ, ತಡ ರಾತ್ರಿವರೆಗೆ ಸಭೆ, ಪಾದಯಾತ್ರೆ ಮಾಡಿದರೂ ದಣಿವರಿಯದ 77 ಹರೆಯದ ಪೂಜಾರಿಯೇ ಎಲ್ಲರಿಗೂ ಯಕ್ಷ ಪ್ರಶ್ನೆ.
ಬಂಟ್ವಾಳ ಮನೆಯಿಂದ ನೆಲ್ಯಾಡಿಗೆ ಅಂಬಾಸಿಡರ್ ಕಾರ್‌ನಲ್ಲಿ ಪಯಣ. ಮಸೀದಿಗೆ ಭೇಟಿ ಬಳಿಕ ನೆಲ್ಯಾಡಿ ಪೇಟೆಯಲ್ಲಿ ಪ್ರಚಾರ ಸಭೆ. ಹಳ್ಳಿ, ಪೇಟೆಗಳಲ್ಲಿ ಸಭೆ. ಚರ್ಚ್‌ಗಳಿಗೆ ತೆರಳಿ ಪ್ರಾರ್ಥನೆ. ರಾತ್ರಿ ಕಡಬ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಿನ್ನ ಬಣಗಳು ಹೊಯ್‌ಕೈ ನಡೆಸಿದರೂ ಪೂಜಾರಿ ನಿರಂತರ ಭಾಷಣ.
ಪೂಜಾರಿ ಪ್ರಶ್ನೆಗಳು ಮತ್ತು ಉತ್ತರಗಳು ಪ್ರಚಾರದ ಹೈಲೈಟ್ಸ್. ಸಭೆಯಲ್ಲಿ ಮಹಿಳೆಗೆ ಪೂಜಾರಿ ಪ್ರಶ್ನೆ. 'ನಿಮಗೆ 100 ಮಂದಿಗೆ ಊಟ ಹಾಕಿಸಲು ಸಾಧ್ಯವೇ?', ಮಹಿಳೆ ಇಲ್ಲ ಎನ್ನುತ್ತಾರೆ. ಆಗ ಪೂಜಾರಿ '4.5 ಕೋಟಿ ಜನರಿಗೆ ಊಟ ಹಾಕುವ ಕೆಲಸ ಮಾಡಿದ್ದು ಕಾಂಗ್ರೆಸ್ ಅಲ್ಲ, ಸಿದ್ದರಾಮಯ್ಯ ಅಲ್ಲ' ಎಂದು ಹೇಳುವಾಗ ಎಲ್ಲರೂ ಕಕ್ಕಾಬಿಕ್ಕಿ. ಬಳಿಕ 'ಕಾಂಗ್ರೆಸ್‌ಗೆ ಮತ ಹಾಕಿ ಗೆಲ್ಲಿಸಿದ್ದು ನೀವು, ಆದ್ದರಿಂದ ಅಕ್ಷರ ಭಾಗ್ಯದ ಮೂಲಕ ಊಟ ಹಾಕಿಸಿದ್ದು ನೀವು, ಹಾಲು ಕೊಟ್ಟದ್ದು, ಸಾಲ ಕೊಟ್ಟದ್ದು ನೀವು' ಎಂದಾಗ ಚಪ್ಪಾಳೆ ಸುರಿಮಳೆ.
ಒಬ್ಬೊಬ್ಬರನ್ನು ನಿಲ್ಲಿಸಿ, ಧರ್ಮ ಯಾವುದು ಎಂಬ ಪ್ರಶ್ನೆ. ಹಿಂದು, ಮುಸ್ಲಿಂ, ಕ್ರೈಸ್ತ ಎಂದು ಹೇಳತೊಡಗಿದಾಗ ಪೂಜಾರಿ, 'ಬಿಜೆಪಿ ಸಮಾನ ನಾಗರಿಕ ಕಾನೂನು ತರುತ್ತೇವೆ ಎಂದು ಹೇಳಿದ್ದಾರೆ. ನಾವು ಸಪ್ತಪದಿ ತುಳಿದು ಮದುವೆಯಾಗುತ್ತೇವೆ. ಮುಸ್ಲಿಮರು ನಿಖಾ ಮಾಡುತ್ತಾರೆ. ಎಲ್ಲರೂ ಒಂದೇ ರೀತಿ ಮದುವೆ ಆಗಲು ಸಾಧ್ಯವೇ? ಸಮಾನ ಕಾನೂನು ಬೇಕೆ'? ಎಂದಾಗ, ಜನ ಒಕ್ಕೊರಲಿಂದ 'ಬೇಡಾ' ಎನ್ನುತ್ತಾರೆ.
ವೃದ್ಧರನ್ನು ನಿಲ್ಲಿಸಿ, 'ನಿಮಗೆ ಮದುವೆ ಆಗಿದೆಯೇ? ನಿಮ್ಮ ಪತ್ನಿ ಹೆಸರೇನು' ಎಂದು ಕೇಳುವಾಗ ವೃದ್ಧರು ನಾಚಿ ಹೆಸರು ಹೇಳುತ್ತಾರೆ. ತಕ್ಷಣ ಮೋದಿ ಮದುವೆ ವಿಚಾರ ಪ್ರಸ್ತಾಪ. 'ಮೋದಿ ಪತ್ನಿ ಹೆಸರು ಹೇಳಿಲ್ಲ, ಪತ್ನಿಯನ್ನು ಬಾಳಿಸದವರು ದೇಶ ಆಳಿಯಾರೆ' ಎಂದು ಮೋದಿಯ ವಿರುದ್ಧ ಟೀಕೆ ಆರಂಭ.
ದಾರಿ ಮಧ್ಯೆ ಹಿಂಬಾಲಕರಿಗೆ ಪೂಜಾರಿ ಸಲಹೆ- 'ಆರ್‌ಎಸ್‌ಎಸ್‌ನವರು ಮನೆ ಮನೆಗೆ ಹೋಗಿ ಬ್ರೈನ್ ವಾಶ್ ಮಾಡುತ್ತಾರೆ. ಗಂಡಸನ್ನು ಹೆಂಗಸು ಮಾಡುತ್ತಾರೆ, ಹೆಂಗಸನ್ನು ಗಂಡಸು ಮಾಡುತ್ತಾರೆ. ನಾವು ಮನೆಯಲ್ಲಿ ಜನ ಇಲ್ಲದಿದ್ದರೆ ಕಿಟಕಿ ಒಳಗೆ ಪಾಂಪ್ಲೆಟ್ ಹಾಕಿ ಹೋಗುತ್ತೇವೆ ಆದರೆ, ಅವರು ಮನೆಯಲ್ಲಿ ರಾತ್ರಿ ತಂಗುತ್ತಾರೆ'.
ಪೂಜಾರಿ ಹೇಳಿದ ಆತ್ಮಕಥೆಗಳು !: ಆಂಧ್ರದ ಮೆಹಬೂಬ್ ನಗರದಲ್ಲಿ ಸಾಲಮೇಳ ಕಾರ್ಯಕ್ರಮದಲ್ಲಿ ಒಬ್ಬ ಪೂಜಾರಿಗೆ ಚೂರಿಯಿಂದ ಇರಿದೇ ಬಿಟ್ಟ. ಜಿಲ್ಲಾಧಿಕಾರಿ ತಕ್ಷಣ ಆಸ್ಪತ್ರೆಗೆ ಒಯ್ಯಲು ಮುಂದಾದರು. ಆದರೆ ಒಪ್ಪಲೇ ಇಲ್ಲ, ಸಾಲ ಮೇಳ ಪೂರ್ಣಗೊಳಿಸಿದ ಬಳಿಕವೇ ಆಸ್ಪತ್ರೆಗೆ ದಾಖಲಾದೆ.  ಪುತ್ತೂರಲ್ಲಿ ನನ್ನ ಕುತ್ತಿಗೆಗೆ ಕತ್ತಿಯಿಂದ ಕಡಿಯಲು ಬಂದಿದ್ದ. ಕಡಿಯಲು ಬಂದವನ ಕೈ ಹಿಡಿದು ಪೊಲೀಸರಿಗೆ ಕೊಟ್ಟೆ. 2 ವರ್ಷ ಜೈಲ್‌ನಲ್ಲಿದ್ದ 3 ತಿಂಗಳು ಶಿಕ್ಷೆ ಕೂಡ ಆಯಿತು!

ಸಿಂಗ್ ಪೂಜಾರಿ ಕೈ ಕೆಳಗೆ!
ಪ್ರಧಾನಿ ಯಾರು ಎಂದು ಸಭೆಯಲ್ಲಿದ್ದವರಿಗೆ ಪೂಜಾರಿ ಪ್ರಶ್ನೆ. ಮನಮೋಹನ್ ಸಿಂಗ್ ಎಂಬ ಉತ್ತರ ಬಂದಾಗ  'ಆ ಮನಮೋಹನ ಸಿಂಗ್ ನನ್ನ ಕೆಳಗೆ ಸೆಕ್ರೆಟರಿಯಾಗಿ ಕೆಲಸ ಮಾಡುತ್ತಿದ್ದರು. ಮತ್ತೆ ರಿಸರ್ವ್ ಬ್ಯಾಂಕ್ ಗವರ್ನರ್ ಆದರು. ಅವರ ಅದೃಷ್ಟ ಒಳ್ಳೆದಿತ್ತು, ಮೇಲೆ ಬಂದರು, ಪೂಜಾರಿ ಬಿದ್ದು ಬಿಟ್ಟ', ಜನ ಅಚ್ಚರಿ ಕಣ್ಣು ಬಿಟ್ಟು ಚಪ್ಪಾಳೆ ಹೊಡೆಯುತ್ತಾರೆ. ಅರ್ಥಖಾತೆ ಸಚಿವನಾಗಿ ಆಸ್ತಿ ಮಾಡಿಲ್ಲ, ಆಗ ದೇಶ ಸುತ್ತುವಾಗ ಎಲ್ಲಿಯೂ ಊಟ ಮಾಡುತ್ತಿರಲಿಲ್ಲ. ಇಡೀ ದಿನ ಬಿಸ್ಕತ್ ಮತ್ತು ನೀರು ಕುಡಿಯುತ್ತಿದ್ದೆ.

ನಿಂತೇ ಶೂ ಹಾಕಿದ್ರು !
ನೆಲ್ಯಾಡಿ ಪರಿಸರದಲ್ಲಿ ಚರ್ಚ್ ಹೆಚ್ಚು. ಚರ್ಚ್ ಕಂಡಾಗ ಹಿಂಬಾಲಕರು ಒಳಗೆ ಕರೆದುಕೊಂಡು ಹೋಗುತ್ತಿದ್ದರು. ಶೂ ಬಿಚ್ಚಿ, ಹಾಕಿಕೊಳ್ಳಬೇಕು. 77 ವರ್ಷದ ಪೂಜಾರಿ 7-8 ಬಾರಿ ನಿಂತು ಕೊಂಡೇ ಬಾಗಿ ಶೂ ಹಾಕಿಕೊಳ್ಳುತ್ತಿದ್ದರು! ಬಿಳಿನೆಲೆ ದೇವಸ್ಥಾನಕ್ಕೆ ಬಂದಾಗ ಕುರ್ಚಿ ಬೇಕಾಯಿತು.

ದಿನಚರಿ
ಹಿಂದಿನ ದಿನ ತಡ ರಾತ್ರಿ 4 ಗಂಟೆಗೆ ಮಲಗಿದ್ದ ಜನಾರ್ದನ ಪೂಜಾರಿ ಬೆಳಗ್ಗೆ 7 ಗಂಟೆಗೆ ಎದ್ದು ನಿತ್ಯ ಕರ್ಮ ಮುಗಿಸಿ 8 ಗಂಟೆಗೆ ತಿಂಡಿ. ಆಗ ಕನ್ನಡ ಪ್ರಭ ಸಹಿತ ಪ್ರಮುಖ ದಿನಪತ್ರಿಕೆಗಳ ಮೇಲೆ ಕಣ್ಣಾಡಿಸಿದರು. ಸಂಜೆ 4 ಗಂಟೆಗೆ ಬಿಳಿನೆಲೆ ದೇವಸ್ಥಾನದಲ್ಲಿ ಊಟ, ಮನೆ ಮುಟ್ಟುವಾಗ ರಾತ್ರಿ 12 ಗಂಟೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಯುದ್ಧನೌಕೆಗಳ ಕಳುಹಿಸಿ': ಇರಾನ್ ಹೆಡೆಮುರಿ ಕಟ್ಟಲು ಜಗತ್ತಿಗೆ Donald Trump ಸಂದೇಶ!

ನೌಕಾಪಡೆ ಭದ್ರತೆಯಲ್ಲಿ Hormuz ಜಲಸಂಧಿ ದಾಟಿದ ಭಾರತ ಮೂಲದ LPG tanker!

ರಷ್ಯಾ ಮೇಲೂ ಡ್ರೋನ್ ದಾಳಿ: 16 ಮಾನವರಹಿತ ಡ್ರೋನ್ ಗಳ ಹೊಡೆದುರುಳಿಸಿದ Moscow!

'ನಾನು ಕೂಡ ಪರಪುರುಷನ ಜತೆ ಹೋದರೆ ಒಪ್ಪಿಕೊಳ್ಳುತ್ತಾರೆಯೇ?': ನಟ ಜಯಂ ರವಿ ವಿರುದ್ಧ ಮಾಜಿ ಪತ್ನಿ ಆರತಿ ಕಿಡಿ!

Cricket Wedding: ಬಾಲ್ಯದ ಗೆಳತಿ ವಂಶಿಕಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ Kuldeep Yadav!

SCROLL FOR NEXT