- ಎನ್. ವೆಂಕಟೇಶ್
ಚಿಕ್ಕಬಳ್ಳಾಪುರ: ಗೆಲವಿನ ಮಾಲೆ ಹಾಕಿಕೊಳ್ಳುವ ನಿರೀಕ್ಷೆಯಲ್ಲಿ ಅಭ್ಯರ್ಥಿಗಳಿದ್ದರೆ, ಕ್ಷೇತ್ರದಲ್ಲೆಡೆ ಜನರು ಸೋಲು ಗೆಲವಿನ ಲೆಕ್ಕಾಚಾರ ಹಾಕುತ್ತಿದ್ದಾರೆ. ಈಗಾಗಲೇ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ತಮ್ಮದೇ ಆದ ರೀತಿಯಲ್ಲಿ ಸಮೀಕ್ಷೆಯನ್ನು ಕೈಗೊಳ್ಳುವುದರಲ್ಲಿ ನಿರತವಾಗಿವೆ.
ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳ ನಡುವೆಯೇ ಸೋಲು ಗೆಲವಿನ ವಿಮರ್ಶೆ ನಡೆಯುತ್ತಿದ್ದು ಉಳಿದ ಅಭ್ಯರ್ಥಿಗಳ ಪ್ರಸ್ತಾಪ ಗೌಣವೇ ಆಗಿದೆ. ಕಳೆದ 2009 ರಲ್ಲಿ ನಡೆದ ಲೋಕಸಭೆ ಚುನಾವಣೆಗಿಂತ ಕ್ಷೇತ್ರದಲ್ಲಿ ಈ ಬಾರಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆದಿದೆ. ಹಿಂದೆ ಶೇ.68 ರಷ್ಟು ಆಗಿದ್ದು ಈಗ ಶೇ.77 ರಷ್ಟು ಮತ ಚಲಾವಣೆಯಾಗಿರುವುದು ನಾನಾ ರೀತಿಯ ಲೆಕ್ಕಾಚಾರಗಳಿಗೆ ನಾಂದಿಯಾಡಿದೆ.
ಕ್ಷೇತ್ರದಲ್ಲಿ ಪ್ರಭಾವಿ ಅಭ್ಯರ್ಥಿಗಳು ಅಖಾಡದಲ್ಲಿದ್ದು ಸೋಲು ಗೆಲವಿನ ಅಂತರ ಕೇವಲ 5 ಸಾವಿರ ಮತಗಳು ಇರುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿರುವುದರಿಂದ ಲೆಕ್ಕಾಚಾರ ಕಬ್ಬಿಣದ ಕಡಲೆಯಾಗಿ ಪರಿವರ್ತನೆಯಾಗಿದೆ.
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕ್ಷೇತ್ರಕ್ಕೆ ಮೊದಲ ಬಾರಿ ಬಂದು ಚುನಾವಣೆ ಪ್ರಚಾರ ಕೈಗೊಂಡಿದ್ದರಿಂದ ಮತದಾರರು ಹೆಚ್ಚಿನ ಉತ್ಸಾಹದಲ್ಲಿ ಮತ ಚಲಾಯಿಸಿದ್ದಾರೆ ಎನ್ನುವುದು ಸಹಜವಾಗಿ ಕೇಳಿ ಬರುತ್ತಿರುವ ಮಾತು. ಅದರಲ್ಲೂ ಹೊಸಕೋಟೆಯಲ್ಲಿ ಶೇ.85 ರಷ್ಟು ಮತದಾನವಾಗಿರುವುದು ಮೋದಿ ಅಲೆಯ ಪ್ರಭಾವದ ಬಗ್ಗೆ ಒಮ್ಮೆ ಯೋಚನೆ ಮಾಡುವಂತಾಗಿದೆ.
ಕ್ಷೇತ್ರದಲ್ಲಿ ಜಾತಿ ರಾಜಕಾರಣ ನಡೆಯುವುದಿಲ್ಲ ಎನ್ನಲಾಗುತ್ತಿದೆಯಾದರೂ ಈ ಬಾರಿ ಬಲಿಜಿಗರು, ಒಕ್ಕಲಿಗರು, ಪ್ರಮುಖವಾಗಿ ಹೊಸ ಮತದಾರರು ಬಿಜೆಪಿಯ ಕಡೆಗೆ ಹೆಚ್ಚಿಗೆ ಒಲವು ತೋರಿಸಿದ್ದಾರೆ. ಕಾರಣ, 3ಎ ನಲ್ಲಿದ್ದ ಬಲಿಜ ಜನಾಂಗಕ್ಕೆ ಶೈಕ್ಷಣಿಕವಾಗಿ 2ಎ ಮೀಸಲನ್ನು ಬಿಜೆಪಿ ಸರ್ಕಾರ ನೀಡಿದ್ದು. ಇನ್ನೂ ಕ್ಷೇತ್ರಕ್ಕೆ ಮೋದಿ ಭೇಟಿ ನೀಡಿದ್ದರಿಂದ ಸ್ವಲ್ಪ ಮತಗಳನ್ನು ಸೆಳೆದುಕೊಂಡಿದೆ. ಮುಸ್ಲಿಮರು, ಕುರುಬರು, ಕ್ರಿಶ್ಚಿಯನ್ನರ ಹೆಚ್ಚಿನ ಮತಗಳು ಕಾಂಗ್ರೆಸ್ ಪಾಲಾಗಿವೆ. ಈ ಬಾರಿ ಹೆಚ್ಚಿನ ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲದಿದ್ದರೆ ತಮ್ಮ ಸಮುದಾಯಕ್ಕೆ ಸೇರಿರುವ ಸಿಎಂ ಸಿದ್ಧರಾಮಯ್ಯ ಅವರನ್ನು ಗಾದಿಯಿಂದ ಕೆಳಗಿಳಿಸುತ್ತಾರೆ ಎಂಬ ಮಾತಿನಿಂದಾಗಿ ಕುರುಬ ಸಮುದಾಯದವರು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ ಎಂದು ಆ ಸಮುದಾಯಕ್ಕೆ ಸೇರಿದ ಮುಖಂಡರೇ ತಿಳಿಸಿದ್ದಾರೆ. ಸಾಂಪ್ರದಾಯಿಕ ಮತಗಳನ್ನು ಕೈ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.ಆದರೆ, ಮೊಯ್ಲಿ ವಿರೋಧಿ ಅಲೆಯಿಂದ ಕಾಂಗ್ರೆಸ್‌ಗೆ ಪೆಟ್ಟೂ ಬಿದ್ದಿದೆ. ಚಿಕ್ಕಬಳ್ಳಾಪುರ ಜಿಲ್ಲಾ ರಚನೆ ಮಾಡಿದರು, ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಉತ್ತಮ ಆಡಳಿತ ನೀಡಿದರು ಎಂಬ ಪ್ರಚಾರವು ಕುಮಾರಸ್ವಾಮಿಗೆ ಫ್ಲಸ್ಟ್ ಪಾಯಿಂಟಾಗಿ ಕೆಲಸ ಮಾಡಿದೆ.
ಪ್ರಸ್ತುತ ಚಿಕ್ಕಬಳ್ಳಾಪುರ, ನೆಲಮಂಗಲ ಮತ್ತು ದೇವನಹಳ್ಳಿಯಲ್ಲಿ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ, ಬಾಗೇಪಲ್ಲಿಯಲ್ಲಿ ಸಿಪಿಐ(ಎಂ), ಕಾಂಗ್ರೆಸ್ ಮತ್ತು ಜೆಡಿಎಸ್, ಗೌರಿಬಿದನೂರಿನಲ್ಲಿ ಜೆಡಿಎಸ್, ಬಿಜೆಪಿ ಮತ್ತು ಕಾಂಗ್ರೆಸ್, ಯಲಹಂಕ, ದೊಡ್‌ಡಬಳ್ಳಾಪುರ ಮತ್ತು ಹೊಸಕೋಟೆಯಲ್ಲಿ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಪೈಪೋಟಿ ಇತ್ತು ಎನ್ನಲಾಗಿದೆ.