ಸಂಗ್ರಹ ಚಿತ್ರ 
ಲೇಖನಗಳು

ಅಪ್ಪನ ಕನಸು ನಾನು

ಇಪ್ಪತೈದು- ಮೂವತ್ತು ವರ್ಷಗಳ ಹಿಂದೆ ಯಾವುದು ಈಗಿನಂತೆ ವ್ಯವಸ್ಥಿತವಾಗಿ ಇರದಿದ್ದಾಗಲೇ ನನ್ನನ್ನು ತಾನು ಕಂಡ ಅಧಿಕಾರಿಗಳಂತೆಯೇ...

ಅಪ್ಪ ನನ್ನ ಜಗತ್ತು, ನನ್ನ ಅಸ್ತಿತ್ವ, ನನ್ನ ನಡೆ ನುಡಿ, ನನ್ನ ಕಣ್ಣ ಬಣ್ಣ, ನನ್ನ ಮೆದುಳಿನ ಕಿಡಿ.  ಥೇಟ್ ಅವನ ಕನಸಿನ ಪಡಿಯಚ್ಚು ನಾನು. ನಾನು ಅವನಿಗಾಗೀಯೇ ಬೆಳೆದ ಮಗಳು, ಅವನು ನನಗಾಗೀಯೇ ಬದುಕಿದ ಅಪ್ಪ.

ಕಾಡು ಪ್ರಾಣಿಗಳು ಸುಳಿದಾಡುವ ಕಾಡಿನಂಚಿನ ಹಳ್ಳಿಯೊಂದರಲ್ಲಿ ರೈತನಾಗಿರುವ ಅಪ್ಪ ಅಕ್ಷರ ಕಲಿತಿರಲಿಲ್ಲ, ಓದುವ ಬರೆಯುವ ಜನ ಅವನನ್ನು ಕಾಡು ಪ್ರಾಣಿಯಂತೆಯೇ ಕಂಡಿದ್ದರು, ಅನ್ನ ಬೆಳೆಯುವನನ್ನು ಏನು ತಿಳಿಯದ ಗಮಾರನೆಂದು ಹಿಯಾಳಿಸಿದ್ದರು. ಇಪ್ಪತೈದು- ಮೂವತ್ತು ವರ್ಷಗಳ ಹಿಂದೆ ಯಾವುದು ಈಗಿನಂತೆ ವ್ಯವಸ್ಥಿತವಾಗಿ ಇರದಿದ್ದಾಗಲೇ ನನ್ನನ್ನು  ತಾನು ಕಂಡ ಅಧಿಕಾರಿಗಳಂತೆಯೇ ಓದಿಸಲು ಪಣತೊಟ್ಟುಬಿಟ್ಟನು.
ಅಲ್ಲಿದ್ದ ಒಂದೆ ಕೊಠಡಿಯ ಶಾಲೆಗೆ ಹೆಂಚು ಕೈಯಾಡಿಸಿ, ಆವರಣದಲ್ಲಿ ಗಿಡ ಬೆಳಸಿ ನೆರಳು ಮಾಡಿದನು, ಮೇಷ್ಟರಿಗೆ ವಾಸ್ತವ್ಯ ಹೂಡಲು ಮನೆಯಲ್ಲಿಯೇ ಕಿರುಕೋಣೆ ಕಟ್ಟಿಕೊಟ್ಟು ಊಟ ತಿಂಡಿ ನೀಡಿ  ನನ್ನ ಶಾಲೆಗೆ ಸೇರಿಸಿದನು. ಪೇಟೆಯ ಮಕ್ಕಳ ಹಾಗೇ ಬೆನ್ನಿಗೆ ಬ್ಯಾಗು, ಬಣ್ಣದ ಬಳಪ, ದಪ್ಪ ಸ್ಲೇಟು ಕೊಡಿಸಿ ನಾನು ಶಾಲೆಗೆ ಹೋದರೆ ತಾನೇ ಹೊರಟ ಹಾಗೇ, ನಾನು ಬರೆದ ಅಕ್ಷರಗಳನ್ನು ಮುಟ್ಟಿ, ಗಟ್ಟಿಯಾಗಿ ಓದಿಸಿ ತಾನೇ ಕಲಿತ ಹಾಗೇ ಸಂಭ್ರಮಿಸಿದವನು ನನ್ನಪ್ಪ.

ಸಣ್ಣವಳಿದ್ದಾಗಲೇ ಅವನು ಹೋಗುವ ಊರುಗಳಿಗೆ ನನ್ನನ್ನು ಕರೆದೊಯ್ಯುತ್ತಿದ್ದನು ಅದು ದನಗಳ ಸಂತೆಯಾದರು ಸರಿಯೇ ರೇಷ್ಮೇ ಗೂಡಿನ ಮಾರುಕಟ್ಟೆಯಾದರು ಸರಿಯೇ, ನಗರದ ಜನ ಹೇಗಿರುತ್ತಾರೆ ಎಂದು ತೋರಿಸುವ ಉತ್ಸಾಹ ಅವನಿಗಿತ್ತು, ನಾನು ಮುಂದೆ ಇಂತಹ ನಗರಗಳಲ್ಲಿ ಬದುಕಬೇಕಾಗುವ ಬಗ್ಗೆ ಹೇಳುತ್ತಿದ್ದನು. ಬೆಟ್ಟ ಹತ್ತುವುದು, ಮೀನು ಹಿಡಿಯುವುದು, ಜೇನು ಕೀಳುವುದು, ಗದ್ದೆಯಲ್ಲಿ ಪೈರು ನೆಡುವುದು, ಕಳೆತೆಗೆಯುವುದು ಏನೇ ಮಾಡಿದರು ಅಪ್ಪನ ಸಂಗಾತಿ ನಾನು, ಅವನ ಎಲ್ಲ ಕಥೆಗಳಿಗೆ ನಾನು ಕಿವಿ, ಯಾವುದರಿಂದಲೂ ನಾನು ಭಯಪಡದೆ ಎಲ್ಲವನ್ನು ಕಲಿಯಬೇಕೆಂಬ ಇಚ್ಚೆ ಅವನಿಗಿತ್ತು, ಅವನ ತೇರು ನಾನು, ಹಗಲು ರಾತ್ರಿಗಳೆನ್ನದೆ ನನ್ನನ್ನು ಹೊರುವಷ್ಟು ಕಾಲ ಭುಜಗಳ ಮೇಲೆ ಹೊತ್ತವನು ನನ್ನಪ್ಪ.

ನಾನು ನಾಲ್ಕೈದು ಮೈಲಿಯ ದೂರದ ಹೈಸ್ಕೂಲಿಗೆ ಹೊರಟಾಗ ಹುಡುಗಿ ನಾನೊಬ್ಬಳೆ, ಹುಡುಗರ ಜೊತೆಗೆ ನಡೆದು ಹೋಗಲೇಬೇಕಾದ ಪರಿಸ್ಥಿತಿ. ಯಾರು ಭಯಪಡಿಸಿದರೂ ಅಪ್ಪ ನನಗೆ ಧೈರ್ಯ ತುಂಬಿದರು, ಎಲ್ಲಾ ಹುಡುಗರಿಗೂ ನನ್ನ ಜವಾಬ್ದಾರಿ ವಹಿಸಿಕೊಟ್ಟರು, ಆ ನನ್ನ ಬಾಲ್ಯದ ಗೆಳೆಯರು ನನ್ನ ಪಾಲಿಗೆ ಇಂದಿಗೂ ಸವಿಯಾದ ನೆನಪು ಉಳಿಸಿದ್ದಾರೆ. ನನ್ನನ್ನು ಅವರು ಹುಡುಗಿಯೆಂದು ವಿಂಗಡಿಸದಯೇ ತಮ್ಮಲ್ಲಿ ಒಬ್ಬನಂತೆ ಸೇರಿಸಿಕೊಂಡುಬಿಟ್ಟರು. ಅದು ಮಳೆಯ ಕಾಲ ಊರ ಮಧ್ಯದ ಸಣ್ಣ ಹಳ್ಳ ತುಂಬಿದರೆ ನೀರಿಳಿಯುವವರೆಗೂ ಆಚೆ ದಡದಲ್ಲಿ ಕಾಯುತ್ತಲೆ ಕೂರುತ್ತಿದ್ದವನು ನನ್ನಪ್ಪ.

ಮುಂದೆ ನಾನು ನಗರದಲ್ಲಿ ಓದಬೇಕಾದಾಗ ಅಪ್ಪ ನನ್ನೊಟ್ಟಿಗೆ ಕುಟುಂಬ ಸಮೇತ ವಾಸ್ತವ್ಯ ಬದಲಾಯಿಸಬೇಕಾಯಿತು, ಹಣ್ಣು ತರಕಾರಿ ಮಾರಿದನು, ರಸ್ತೆ ಬದಿ ಟೀ-ಕಾಫಿ ಮಾರಿದನು, ಹಳ್ಳಿಯ ಮಕ್ಕಳು ನಗರದ ಮಕ್ಕಳೊಂದಿಗೆ ಎಲ್ಲಾ ವಿಧದಲ್ಲೂ ಹೊಂದಿಕೊಂಡು ಓದುವುದು ಸಾಹಸವೇ ಸರಿ. ಎಷ್ಟು ಕಷ್ಟವಾದರು ಅವನ ಕಣ್ಣುಗಳಲ್ಲಿನ ಕನಸಿನ ಗೋಪುರ ಉಳಿಸುವ ಪ್ರಯತ್ನಕ್ಕಾಗಿ ನಾನು ಓದಿದೆ, ನನ್ನ ಊರಿಗೆ ಮೊದಲ ಮಹಿಳಾ ಪದವೀಧರೆ ನಾನು, ಮೊದಲ ಸ್ನಾತಕೋತ್ತರ ಪದವೀಧರೆ ನಾನು. ಅವನ ಕನಸಿನಂತೆಯೇ ಕೊನೆಗೆ ಅಧಿಕಾರಿಯೂ ಆದವಳು ನಾನು. ಅವನ ಕಣ್ಣುಗಳು ನೀರು ತುಂಬಿ ತುಳುಕಿದಾಗ ನಾನು ಸಂಭ್ರಮಿಸಿದ್ದೇನೆ. ನನ್ನ ಕಣ್ಣಲ್ಲಿ ಕನಸುಗಳ ಗಿಡನೆಟ್ಟು ಅವನನ್ನೆ ಕಾವಲಿಟ್ಟು ಮರವಾಗಿಸಿದವನು ನನ್ನಪ್ಪ.  

ಎಲ್ಲ ಮಕ್ಕಳಿಗೂ ಕನಸುಗಾರ ಅಪ್ಪನಿರಬೇಕು ಅವರ ಕಣ್ಣಲ್ಲಿ ಮಕ್ಕಳು ದೀಪವಾಗಬೇಕು.

(ನನ್ನಪ್ಪ ಈಗಲೂ ಅದೇ ಹಳ್ಳಿಯಲ್ಲಿ 70 ನೇ ವಯಸ್ಸಿನಲ್ಲಿರುವ ರೈತ. ಉತ್ತು ಬಿತ್ತಿ ಬೀಜಗಳನ್ನು ಅನ್ನವಾಗಿಸುತ್ತಾನೆ)
 
ಸ್ಪೂರ್ತಿ ಗಿರೀಶ್( ವಿಶಾಲಾಕ್ಷಿ)
ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರು
ಮಂಡ್ಯ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

AI- ಚಾಲಿತ ಡಿಜಿಟಲೀಕರಣ, SIR ಕುರಿತು CECಗೆ ಐದನೇ ಪತ್ರ ಬರೆದ ಮಮತಾ ಬ್ಯಾನರ್ಜಿ

Vijay Hazare Trophy: ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

UP ದಲಿತ ಮಹಿಳೆ ಕೊಲೆ: ಯೋಗಿ ಸರ್ಕಾರ ಜಾತಿ, ಧರ್ಮದ ಆಧಾರದಲ್ಲಿ ದ್ವೇಷಕ್ಕೆ ಪ್ರಚೋದನೆ- ಕಾಂಗ್ರೆಸ್ ಕಿಡಿ!

Indian Stock Market: 5 ದಿನಗಳ ಸತತ ಕುಸಿತಕ್ಕೆ ಕೊನೆಗೂ ಬ್ರೇಕ್, Sensex 301 ಅಂಕ ಏರಿಕೆ!

SCROLL FOR NEXT