ಫೀಫಾ ವಿಶ್ವ ಕಪ್ 2018

ಚಾಂಪಿಯನ್ ಫ್ರಾನ್ಸ್ ತಂಡಕ್ಕೆ ಚಿನ್ನದ ವಿಶ್ವಕಪ್ ಟ್ರೋಫಿ ಬದಲು ಅದರ ಪ್ರತಿಕೃತಿ ಕೊಟ್ಟ ಫೀಫಾ, ಕಾರಣ ಏನು ಗೊತ್ತಾ?

Srinivasamurthy VN
ಮಾಸ್ಕೋ: ಫೀಫಾ ವಿಶ್ವಕಪ್ ಗೆದ್ದ ಚಾಂಪಿಯನ್ ತಂಡ ಫ್ರಾನ್ಸ್ ಗೆ ಫೀಫಾ ಸಂಸ್ಥೆ ನಕಲಿ ವಿಶ್ವಕಪ್ ಕೊಟ್ಟಿದ್ದು, ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೀಡಾಗಿದೆ. 
ಹೌದು.. ನಿನ್ನೆ ಮಾಸ್ಕೋದ ಲುಜಿನಿಕಿ ಕ್ರೀಡಾಂಗಣದಲ್ಲಿ ನಡೆದ ಫ್ರಾನ್ಸ್ ಮತ್ತು ಕ್ರೊವೇಷಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡ ಜಯಭೇರಿ ಭಾರಿಸಿ 2018ನೇ ಸಾಲಿನ ವಿಶ್ವಚಾಂಪಿಯನ್ ಆಗಿ ವಿಶ್ವಕಪ್ ಟ್ರೋಫಿ ಎತ್ತಿ ಸಂಭ್ರಮಿಸಿತ್ತು. ಆದರೆ ಸಂಭ್ರಮಾಚರಣೆ ಬಳಿಕ ಫ್ರಾನ್ಸ್ ತಂಡಕ್ಕೆ ನಕಲಿ ವಿಶ್ವಕಪ್ ಟ್ರೋಫಿಯನ್ನು ನೀಡಲಾಗಿದೆ. 
ಹಾಗಾದರೆ ಅಸಲಿ ವಿಶ್ವಕಪ್ ಎಲ್ಲಿ?
ಇನ್ನು ಫೀಫಾ ಸಂಸ್ಥೆ ಫ್ರಾನ್ಸ್ ತಂಡಕ್ಕೆ ನೀಡಿದ್ದ ಅಸಲಿ ವಿಶ್ವಕಪ್ ಅನ್ನು ವಾಪಸ್ ಪಡೆದ ಬಳಿಕ ತಂಡಕ್ಕೆ ತಾಮ್ರದ ಕಪ್ ಗೆ ಚಿನ್ನದ ಲೇಪನ ಮಾಡಿರುವ ಕಪ್ ಅನ್ನು ನೀಡಿದೆ. ಇದೀಗ ಅಸಲಿ ವಿಶ್ವಕಪ್ ಫೀಫಾ ಮ್ಯೂಸಿಯಂನತ್ತ ಪ್ರಯಾಣ ಬೆಳೆಸಿದೆ.
ನಕಲಿ ವಿಶ್ವಕಪ್ ಕೊಟ್ಟಿದ್ದು ಏಕೆ?
ವಿಶ್ವಕಪ್ ಗೆಲ್ಲುವ ತಂಡಗಳಿಗೆ ಚಿನ್ನದ ಟ್ರೋಫಿ ನೀಡುವುದು ವಾಡಿಕೆ. ಆದರೆ ಫೀಫಾ ಸಂಸ್ಥೆ 1990ರಿಂದ ವಿಶ್ವಕಪ್ ಗೆಲ್ಲುವ ತಂಡಗಳಿಗೆ ನಕಲಿ ಅಂದರೆ ವಿಶ್ವಕಪ್ ಮಾದರಿಯ ಟ್ರೋಫಿಗಳನ್ನು ನೀಡುತ್ತಿದೆ. ಕಾರಣ ಈ ಹಿಂದೆ ನೀಡಲಾಗಿದ್ದ 2 ಅಸಲಿ ಚಿನ್ನದ ಟ್ಱೋಫಿಗಳನ್ನು ಕಳ್ಳರು ಕದ್ದು ಅದನ್ನು ಕರಗಿಸಿ ಹಣ ಮಾಡಿಕೊಂಡಿದ್ದರು. ಹೀಗಾಗಿ 1990ರಿಂದ ಫೀಫಾ ಸಂಸ್ಥೆ ಪೆಸೆಂಟೇಷನ್ ಸೆರಮನಿ ಬಳಿಕ ಚಾಂಪಿಯನ್ ತಂಡಕ್ಕೆ ನಕಲಿ ವಿಶ್ವಕಪ್ ಟ್ರೋಫಿ ಅಂದರೆ ಕಂಚಿನ ಟ್ರೋಫಿಗೆ ಚಿನ್ನದ ಲೇಪನ ಮಾಡಿರುವ ಟ್ರೋಫಿಯನ್ನು ತಂಡಗಳಿಗೆ ನೀಡುತ್ತಿದೆ. 
ಪ್ರೆಸೆಂಟೇಷನ್ ಸೆರೆಮನಿ ಬಳಿಕ ಫೀಫಾ ವಿಶ್ವಕಪ್ ಟ್ರೋಫಿಯನ್ನು ತನ್ನ ಮ್ಯೂಸಿಯಂಗೆ ರವಾನೆ ಮಾಡುತ್ತದೆ. ಅಲ್ಲಿ ಮುಂದಿನ ವಿಶ್ವಕಪ್ ಟೂರ್ನಿಯವರೆಗೂ ಟ್ಱೋಫಿ ಜೋಪಾನವಾಗಿರುತ್ತದೆ.
SCROLL FOR NEXT