ಫೀಫಾ ವಿಶ್ವ ಕಪ್ 2018

ಫಿಫಾ ವಿಶ್ವಕಪ್ 2018: ರಷ್ಯಾಗೆ ಜಯ, ನಿಜವಾಯ್ತು ಬೆಕ್ಕಿನ ಭವಿಷ್ಯ!

Manjula VN
ಮಾಸ್ಕೋ: 2018ರ ಫುಟ್ಬಾಲ್ ವಿಶ್ವಕಪ್'ನ ಅಧಿಕೃತ ಭವಿಷ್ಯ ವಾಣಿ ಅಕಿಲ್ಸ್ ಹೆಸರಿನ ಬೆಕ್ಕುಮೊದಲ ಪಂದ್ಯದಲ್ಲಿಯೇ ಯಶಸ್ಸು ಕಂಡಿದೆ. 
ಉದ್ಘಾಟನಾ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ ರಷ್ಯಾ ಗೆಲವು ಸಾಧಿಸಲಿದೆ ಎಂದು ಬುಧವಾರವೇ ಬೆಕ್ಕು ಭವಿಷ್ಯ ನುಡಿದಿತ್ತು. 
2 ಬಟ್ಟಲುಗಳಲ್ಲಿ ಆಹಾರವಿಟ್ಟು, ಅವುಗಳ ಮುಂದೆ ಮುಖಾಮುಖಿಯಾಗುವ ದೇಶಗಳ ಧ್ವಜವನ್ನು ಇರಿಸಲಾಗುತ್ತದೆ. ಬೆಕ್ಕು ಯಾವ ಧ್ವಜದ ಬಳಿ ಇರುವ ಬಟ್ಟಲಿನಿಂದ ಆಹಾರ ತಿನ್ನುತ್ತದೆಯೋ ಆ ತಂಡ ಗೆಲುವು ಸಾಧಿಸಿಲಿದೆ ಎಂದು ಹೇಳಲಾಗುತ್ತಿತ್ತು. ಇದರ ಆಧಾರದ ಮೇಲೆ ಪಂದ್ಯಗಳಿಗೆ ಬೆಟ್ಟಿಂಗ್ ಕೂಡ ನಡೆಯಲಿದೆ ಎಂದು ಹೇಳಲಾಗುತ್ತಿತ್ತು. 
21ನೇ ಫಿಫಾ ಫುಟ್ಬಾಲ್ ವಿಶ್ವಕಪ್'ಗೆ ರಷ್ಯಾದಲ್ಲಿ ಗುರುವಾರ ಅದ್ದೂರಿ ಆರಂಭ ದೊರೆತಿತ್ತು. ಮಾಸ್ಕೋದ ಲುಜ್ನಿಕಿ ಕ್ರೀಡಾಂಗಣದಲ್ಲಿ 80,000 ಪ್ರೇಕ್ಷಕರ ಮುಂದೆ ವರ್ಣರಂಜಿತ ಉದ್ಘಾಟನಾ ಸಮಾರಂಭ ನಡೆಯಿತು. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟನ್ ಅವರು ಟೂರ್ನಿಗೆ ಅಧಿಕೃತ ಚಾಲನೆ ನೀಡಿದ್ದರು. 
1980ರ ಮಾಸ್ಕೋ ಒಲಿಂಪಿಕ್ಸ್ ಬಳಿಕ ರಷ್ಯಾ ಆತಿಥ್ಯ ವಹಿಸುತ್ತಿರುವ ಅತ್ಯಂತ ಮಹತ್ವದ ಪಂದ್ಯಾವಳಿ ಇದಾಗಿತ್ತು. ಪಂದ್ಯಾವಳಿಗೆ ಸಾವಿರಾರು ಕೋಟಿ ವೆಚ್ಚ ಮಾಡಲಾಗಿದೆ. 
2018ರ ಫಿಫಾ ವಿಶ್ವಕಪ್'ಗೆ ಆತಿಥ್ಯ ವಹಿಸಿರುವ ರಷ್ಯಾ, ಟೂರ್ನಿಯಲ್ಲಿ ಭರ್ಜರಿ ಆರಂಭ ಪಡೆದುಕೊಂಡಿತ್ತು. 
ಲುಜ್ನಿಕಿ ಕ್ರೀಡಾಂಗಣದಲ್ಲಿ ನಡೆದ ಸೌರಿ ಅರೇಬಿಯಾ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ರಷ್ಯಾ 5-0 ಗೋಲುಗಳ ಅಮೋಘ ಗೆಲವು ಸಾಧಿಸಿತು. ಇದರೊಂದಿಗೆ ಎ ಗುಂಪಿನಲ್ಲಿ ಅಂಕದ ಖಾತೆ ತೆರೆಯಿತು. 
ಕಳೆದ 8 ತಿಂಗಳುಗಳಿಂದ ಗೆಲುವನ್ನೇ ಕಾಣದ ರಷ್ಯಾ, ತವರಿನ ಪ್ರೇಕ್ಷಕರ ಮುಂದೆಯೇ ಭಾರಿ ಒತ್ತಡದಲ್ಲಿ ಕಣಕ್ಕಿಳಿದಿತ್ತು. ಆದರೆ, 12 ನಿಮಿಷದಲ್ಲೇ ಯುರಿ ಗಜಿನ್ಸ್ಕಿ ರಷ್ಯಾಕ್ಕೆ ಮೊದಲ ಗೋಲು ತಂದುಕೊಟ್ಟರು. ಇದರೊಂದಿಗೆ 21ನೇ ಆವೃತ್ತಿಯ ವಿಶ್ವಕಪ್ ನಲ್ಲಿ ಚೊಚ್ಚಲ ಗೋಲು ಬಾರಿಸಿ ದಾಖಲೆ ಬರೆದರು. ನಿಗದಿತ 90 ನಿಮಿಷಗಳ ಬಳಿಕ ಹೆಚ್ಚುವರಿ ಸಮಯದಲ್ಲಿ ರಷ್ಯಾ 2 ಗೋಲು ದಾಖಲಿಸಿತು. ಡೆನಿಸ್ (90+1 ನಿ)ತಂಡದ ಪರ 4ನೇ ಗೋಲು ಗಳಿಸಿದರೆ, ಅಲೆಕ್ಸಾಂಡರ್ ಗೊಲೊವಿನ್ (90+4) ನಿಮಿಷದಲ್ಲಿ 5ನೇ ಗೋಲು ದಾಖಲಿಸಿ ಗೆಲುವಿನ ಅಂತರವನ್ನು 5-0ಗೇರಿಸಿದರು. 
SCROLL FOR NEXT