ಫೀಫಾ ವಿಶ್ವ ಕಪ್ 2018

ಫುಟ್ಬಾಲ್ ದಂತಕಥೆ ಮೆಸ್ಸಿಗಾಗಿ ಅರ್ಜೆಂಟಿನಾ ಫ್ರಾನ್ಸ್ ಅನ್ನು ಮಣಿಸಬೇಕು

Srinivasamurthy VN
ಮಾಸ್ಕೋ: ಫೀಫಾ ವಿಶ್ವಕಪ್ ಫುಟ್ಬಾಲ್ 2018ರ ಪ್ರಶಸ್ತಿ ಎತ್ತಿಹಿಡಿಯಲೇ ಬೇಕು ಎಂದು ವಿಶ್ವದ 32 ರಾಷ್ಟ್ರಗಳು ಸೆಣಸಾಡುತ್ತಿವೆಯಾದರೂ, ಈ ಪೈಕಿ ಶತಾಯಗತಾಯ ಈ ಬಾರಿ ಟ್ರೋಫಿ ಗೆಲ್ಲಲೇ ಬೇಕು ಎಂದು ಅರ್ಜೆಂಟೀನಾ ಪಣತೊಟ್ಟಿದೆ.
ಲೀಗ್ ಹಂತದ ಕಳಪೆ ಪ್ರದರ್ಶನದ ಹೊರತಾಗಿಯೂ ಅಂತಿಮ ಪಂದ್ಯದ ಗೆಲುವು ಹಾಗೂ ಕ್ರೊವೇಷಿಯಾ ಗೆಲುವು ಅರ್ಜೆಂಟೀನಾ ತಂಡವನ್ನು ಅಂತಿಮ 16ರ ಹಂತಕ್ಕೆ ತಂದು ನಿಲ್ಲಿಸಿದೆ. ಆದರೆ ಲೀಗ್ ನಲ್ಲಿ ಆದಹಾಗೆ ಮತ್ತೆ ಅದೃಷ್ಟವೊಂದೇ ತಂಡದ ಭವಿಷ್ಯ ನಿರ್ಧರಿಸಲು ಸಾಧ್ಯವಿಲ್ಲ. ನಾಕೌಟ್ ಹಂತದಲ್ಲಿ ಪಂದ್ಯವನ್ನು ಗೆದ್ದರೆ ಮಾತ್ರ ಮುಂದಿನ ಹಂತಕ್ಕೆ ತೆರಳಲು ಸಾಧ್ಯ. ಹೀಗಾಗಿ ಇಂದು ನಡೆಯಲಿರುವ ಪ್ರಬಲ ಫ್ರಾನ್ಸ್ ವಿರುದ್ಧದ ಪಂದ್ಯವನ್ನು ಅರ್ಜೆಂಟೀನಾ ಗೆಲ್ಲಲೇಬೇಕು.
ಅಲ್ಲದೆ ಅರ್ಜೆಂಟಿನಾ ತಂಡದ ಸ್ಟಾರ್ ಆಟಗಾರ ಮತ್ತು ಫುಟ್ಬಾಲ್ ದಂತಕಥೆ ಲಿಯೋನಲ್ ಮೆಸ್ಸಿಗೆ ಇದು ಅಂತಿಮ ವಿಶ್ವಕಪ್ ಫುಟ್ಬಾಲ್ ಟೂರ್ನಿ ಎಂದು ಹೇಳಲಾಗುತ್ತಿದ್ದು. ಇದೇ ಕಾರಣಕ್ಕೆ ಅರ್ಜೆಂಟೀನಾ ತಂಡ ಶತಾಯಗತಾಯ ವಿಶ್ವಕಪ್ ಗಾಗಿ ಹೋರಾಟ ಮಾಡಲಿದೆ.
ಇದಕ್ಕೆ ಇಂಬು ನೀಡುವಂತೆ ತಂಡದ ಕೋಚ್ ಸಂಪೋಲಿ ಹೇಳಿಕೆ ಕೂಡ ಈ ಬಾರಿ ಅರ್ಜೆಂಟಿನಾ ವಿಶ್ವಕಪ್ ಗೆಲ್ಲಲೇ ಬೇಕು ಎಂದು ಆಟಗಾರರಿಗೆ ಹೇಳಿದ್ದಾರೆ. ಅಲ್ಲದೆ ಮೆಸ್ಸಿ ಕುರಿತು ಸಕರಾತ್ಮಕವಾಗಿ ಮಾತನಾಡಿರುವ ಸಂಪೋಲಿ, ಲೀಗ್ ಹಂತದ ವೇಳೆ ತಂಡ ಸಾಕಷ್ಟು ಸಮಸ್ಯೆ ಎದುರಿಸಿತ್ತು. ಐಸ್ ಲ್ಯಾಂಡ್ ವಿರುದ್ಧ ಮೆಸ್ಸಿ ಬಿಟ್ಟ ಪೆನಾಲ್ಟಿ ಕಿಕ್ ನಮಗೆ ದುಬಾರಿಯಾಗಿ ಪರಿಣಮಿಸಿ ಆ ಪಂದ್ಯ 1-1ರಲ್ಲಿ ಡ್ರಾ ಆಗಿತ್ತು. ಆ ಬಳಿಕ ಕ್ರೊವೇಷಿಯಾ ವಿರುದ್ಧ 3-0 ಸೋಲು ಟೂರ್ನಿಯಲ್ಲಿ ನಮ್ಮ ಅಸ್ತಿತ್ವದ ಕುರಿತು ಶಂಕೆ ಮೂಡುವಂತೆ ಮಾಡಿತ್ತು. ಆದರೆ ನೈಜಿರಿಯಾ ವಿರುದ್ಧದ ಗೆಲುವು ನಮಗೆ ಮತ್ತೆ ಆತ್ಮ ವಿಶ್ವಾಸ ಮೂಡಿಸಿದ್ದು, ಮೆಸ್ಸಿ ಹಾಗೂ ರೋಜೋ ತಂಡಕ್ಕೆ ಆತ್ನ ವಿಶ್ವಾಸದ ಗೆಲುವು ತಂದುಕೊಟ್ಟಿದ್ದರು.
ಅದೇ ಆತ್ಮ ವಿಶ್ವಾಸದೊಂದಿಗೆ ನಾಕೌಟ್ ನಲ್ಲಿ ಫ್ರಾನ್ಸ್ ತಂಡವನ್ನು ಎದುರಿಸಲಿದ್ದೇವೆ. ಮತ್ತದೆ ದಿ ಗ್ರೇಟ್ ಮೆಸ್ಸಿ ತಂಡಕ್ಕೆ ನೆರವಾಗಲಿದ್ದು, ಫ್ರಾನ್ಸ್ ವಿರುದ್ಧದ ಪಂದ್ಯಕ್ಕಾಗಿ ಮೆಸ್ಸಿ ತಮ್ಮದೇ ಲೆಕ್ಕಾಚಾರ ಸಿದ್ಧಪಡಿಸಿಕೊಂಡಿದ್ದಾರೆ ಎಂದು ಸಂಪೋಲಿ ಹೇಳಿದ್ದಾರೆ.
SCROLL FOR NEXT