ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಫಿಫಾ ವಿಶ್ವಕಪ್ 2014

ಮೆಸ್ಸಿ ಬಣದ ಮ್ಯಾಜಿಕ್‌ಗೆ ತಲೆದೂಗಿದ ಡಾರ್ಕ್ ಹಾರ್ಸ್

ಆರಂಭದಲ್ಲೇ ದೊರೆತ ಯಶಸ್ಸಿನ ಸ್ಫೂರ್ತಿಯೊಂದಿಗೆ ದಿಟ್ಟ ಹೆಜ್ಜೆಗಳನ್ನಿಟ್ಟು..

Srinivasa Murthy VN
Updated On : 6 Jul 2014, 1:08 am

ಬ್ರೆಸಿಲಿಯಾ: ಆರಂಭದಲ್ಲೇ ದೊರೆತ ಯಶಸ್ಸಿನ ಸ್ಫೂರ್ತಿಯೊಂದಿಗೆ ದಿಟ್ಟ ಹೆಜ್ಜೆಗಳನ್ನಿಟ್ಟು ಮುಂದೆ ಸಾಗಿದ ಅರ್ಜೆಂಟೀನಾ ಆಟಗಾರರು ಅಂತಿಮವಾಗಿ ನಿರೀಕ್ಷಿತ ಗುರಿ ಸೇರುವುದರೊಂದಿಗೆ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವ ಆತ್ಮವಿಶ್ವಾಸ ಇಮ್ಮುಡಿಗೊಳಿಸಿಕೊಂಡಿದ್ದಾರೆ.
ಎಸ್ಟಾಡಿಯೊ ನ್ಯಾಸಿಯೊನಲ್ ಡಿ ಬ್ರೆಸಿಲಿಯಾ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಪ್ರಿಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ತಂಡ ಏಕೈಕ ಗೋಲಿನಿಂದ ಬೆಲ್ಜಿಯಂ ತಂಡದ ವಿರುದ್ಧ ಜಯಭೇರಿ ಬಾರಿಸಿ ಅಂತಿಮ ಎಂಟರಘಟ್ಟಕ್ಕೆ ಪ್ರವೇಶ ಪಡೆಯಿತು. ಇದರೊಂದಿಗೆ ಅರ್ಜೆಂಟೀನಾ 1990ರ ನಂತರ ಮತ್ತೊಮ್ಮೆ ಸೆಮಿಫೈನಲ್ ತಲುಪಿತು.
ಅರ್ಜೆಂಟೀನಾ ತಂಡಕ್ಕೆ ಆರಂಭದಲ್ಲೇ ಅದೃಷ್ಟ ಕೈಹಿಡಿಯಿತು. ಆಟ ಪ್ರಾರಂಭವಾಗಿ 8 ನಿಮಿಷಗಳು ಕಳೆಯುವಷ್ಟರಲ್ಲಿ ಮುನ್ನಡೆಯ ಭಾಗ್ಯ ಕಂಡುಕೊಂಡಿತು. ಸಂಪರ್ಕ ಆಟಗಾರ ಆ್ಯಂಗೆಲ್ ಡಿ ಮಾರಿಯಾ ನೀಡಿದ ಪಾಸ್‌ನಲ್ಲಿ ಮುನ್ಪಡೆ ಆಟಗಾರ ಗೋಂಜಾಲೊ ಹಿಗ್ವೆನ್ ಅವರು ತುಂಬ ಬುದ್ಧಿವಂತಿಕೆಯಿಂದ ಬೆಲ್ಜಿಯಂ ತಂಡದ ಗೋಲ್‌ಕೀಪರ್ ಥಿಬೌಟ್ ಕೊರ್ಟೊಯಿಸ್ ಅವರನ್ನು ವಂಚಿಸಿ ಚೆಂಡನ್ನು ಗುರಿ ಸೇರಿಸಿ ಅರ್ಜೆಂಟೀನಾಕ್ಕೆ ಸಫಲತೆ ತಂದುಕೊಟ್ಟರು.
ಇದರಿಂದ ಸ್ಫೂರ್ತಿಗೊಂಡ ಅರ್ಜೆಂಟೀನಾ ಆಟಗಾರರು ಕೊನೆಯವರೆಗೂ ಎಚ್ಚರಿಕೆಯಿಂದ ಮುನ್ನಡೆಯುವ ಮೂಲಕ ಯಾವುದೇ ಅಪಾಯ ತಂದುಕೊಳ್ಳದೇ ಗೆಲವಿನ ಕೇಕೆ ಹಾಕಿದರು.
ಪಂದ್ಯದಲ್ಲಿ ಪ್ರತಿಶತ 48 ರಷ್ಟು ಹಿಡಿತ ಹೊಂದಿದ್ದ ಅರ್ಜೆಂಟೀನಾ ಉತ್ತಮ ಪ್ರದರ್ಶನ ನೀಡಿ ಗೆಲವು ದಾಖಲಿಸಿದರೂ ಸಹ ಗೋಲುಗಳಿಕೆಯ ಸುಮಾರು ಮೂರು ಸುಲಭವಾಗಿದ್ದ ಅವಕಾಶಗಳಲ್ಲಿ ವೈಫಲ್ಯ ಅನುಭವಿಸಿ ಕೊಂಚ ನಿರಾಸೆಗೂ ಒಳಗಾಯಿತು. ಪಂದ್ಯದ 27ನೇ ಮತ್ತು 55ನೇ ನಿಮಿಷದಲ್ಲಿ ಹಿಗ್ವೆನ್ ಹಾಗೂ ಕೊನೆಯ ಘಟ್ಟದಲ್ಲಿ ನಾಯಕ ಲಯೋನೆಲ್ ಮೆಸ್ಸಿ ಗೋಲುಗಳಿಸುವ ಹಾದಿಯಲ್ಲಿದ್ದರು. ಒಂದು ಹಂತದಲ್ಲಿ ಇದು ಸಾಧ್ಯವೇ ಎನಿಸಿತ್ತು. ಆದರೆ, ಚೆಂಡು ಗೋಲುಬಲೆಯ ಸ್ವಲ್ಪದರಲ್ಲಿಯೇ ಹಾದು ಹೋಗಿ ಅರ್ಜೆಂಟೀನಾಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಯಿತು.
ಮತ್ತೊಂದೆಡೆ ಪಂದ್ಯಾವಳಿಯಲ್ಲಿ ಡಾರ್ಕ್ ಹಾರ್ಸ್ ಆಗಿ ಕಣಕ್ಕಿಳಿದಿದ್ದ ಬೆಲ್ಜಿಯಂ ತಂಡಕ್ಕೂ ಸಹ ಎದುರಾಳಿ ಜೊತೆ ಸಮಗೌರವ ಸಾಧಿಸುವ ಕೆಲ ಉತ್ತಮ ಅವಕಾಶಗಳು ಕೈಗೆಟುಕಿದ್ದವು. ಆದರೆ, ಗುರಿಯೆಡೆಗೆ ಹಿನ್ನಡೆ ಅನುಭವಿಸಿ ಭಾರಿ ನಿರಾಸೆ ಅನುಭವಿಸಬೇಕಾಯಿತು. ಅಲ್ಲದೆ ತಂಡದ ನಂಬಿಕಸ್ತ ಮುನ್ಪಡೆ ಆಟಗಾರ ಎಡೆನ್ ಹಜಾರ್ಡ್ ಎಂದಿನಂತೆ ಉತ್ತಮ ಕಾಲ್ಚಳಕ ತೋರದೆ ನಿರಾಸೆ ಮೂಡಿಸಿದ್ದು ಬೆಲ್ಜಿಯಂ ಹಿನ್ನಡೆಗೂ ಕಾರಣವೆನಿಸಿತು. ಅಂತಿಮವಾಗಿ ಬೆಲ್ಜಿಯಂ ಪಡೆ ಗೌರವಯುತ ಸೋಲನುಭವಿಸಿ 2014ರ ವಿಶ್ವಕಪ್‌ನಲ್ಲಿ ತನ್ನ ಹೋರಾಟಕ್ಕೆ ತೆರೆ ಎಳೆದುಕೊಂಡಿತು.

ಅರ್ಜೆಂಟೀನಾ 1
ಗೋಂಜಾಲೊ ಹಿಗ್ವೆನ್ 8ನೇ ನಿಮಿಷ

ಬೆಲ್ಜಿಯಂ 0

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement