ಬ್ರೆಜಿಲ್ ಫೇವರಿಟ್, ಅಚ್ಚರಿಗೆ ಕಾದಿದೆ ಕ್ರೊವೇಷಿಯಾ
ಸೌ ಪೊಲೊ: ವಿಶ್ವಕಪ್ ಇತಿಹಾಸ ಪ್ರಾರಂಭವಾದಾಗಿನಿಂದ ಪ್ರತಿ ಪಂದ್ಯಾವಳಿಯಲ್ಲೂ ಭಾಗವಹಿಸಿರುವ ಏಕೈಕ ತಂಡವಾಗಿರುವ ಬ್ರೆಜಿಲ್ ಮೇಲೆ ಈ ಬಾರಿ ನಿರೀಕ್ಷೆ ಹೆಚ್ಚಾಗಿದೆ. ಅದರಲ್ಲೂ ಪ್ರಮುಖ ವಿಷಯವೆಂದರೆ ಈ ಬಾರಿಯ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ ನಡೆಯುತ್ತಿರುವುದು ಬ್ರೆಜಿಲ್‌ನಲ್ಲಿಯೇ. ಹಾಗಾಗಿ, ಆ ತಂಡದ ಮೇಲೆ ನಿರೀಕ್ಷೆ ಗರಿಗೆದರಿದೆ.
ಅತಿ ಹೆಚ್ಚು ಬಾರಿ ವಿಶ್ವಕಪ್ (5 ಬಾರಿ) ಗೆದ್ದ ಸಾಧನೆ ಮಾಡಿರುವ ಬ್ರೆಜಿಲ್, ಇದೀಗ ಟೂರ್ನಿಯ 2014ರ ಆವೃತ್ತಿಯ ಉದ್ಘಾಟನೆ ಪಂದ್ಯದಲ್ಲೇ ಸೆಣಸುತ್ತಿದೆ. ಗುರುವಾರ ಮಧ್ಯರಾತ್ರಿ ನಡೆಯಲಿರುವ ತನ್ನ “G’ ಗುಂಪಿನ ಮೊದಲ ಪಂದ್ಯದಲ್ಲಿ ಎದುರಾಗಲಿರುವ ಕ್ರೊವೇಷಿಯಾ ತಂಡದ ವಿರುದ್ಧ ಗೆದ್ದು ಶುಭಾರಂಭ ಮಾಡುವ ವಿಶ್ವಾಸದಲ್ಲಿ ಬ್ರೆಜಿಲ್ ಆಟಗಾರರಿದ್ದಾರೆ.
ಕೋಚ್ ಫೆಲಿಪ್ ಲೂಯಿಜ್ ಸ್ಕೊಲಾರಿ ಗರಡಿಯಲ್ಲಿ ಪಳಗಿರುವ ಬ್ರೆಜಿಲ್ ಪಡೆ ಹೊಸ ರೂಪದೊಂದಿಗೆ ಈ ಬಾರಿ ಕಣಕ್ಕಿಳಿದಿದೆ. ಮುನ್ಪಡೆ ಆಟಗಾರ ನೇಮಾರ್ ಈ ತಂಡದ ಪ್ರಮುಖ ಆಕರ್ಷಣೆ. ಉಳಿದಂತೆ, ಇತರೆ ಮುನ್ಪಡೆ ಆಟಗಾರರಾದ ಜೋ, ಬೆರ್ನಾರ್ಡ್, ಸಂಪರ್ಕ ಆಟಗಾರರಾದ ರಾಮಿರೇಜ್, ಹೆನ್ರಿಕ್, ಆಸ್ಕರ್, ಫರ್ನಾಂಡಿನೊ, ಡೇವಿಡ್ ಲೂಜ್, ರಕ್ಷಣಾ ವಿಭಾಗದಲ್ಲಿ ಮಾರ್ಸೆಲೊ, ಡ್ಯಾನಿ ಆಲ್ವಸ್, ಥಿಯಾಜೊ, ಮ್ಯಾಕ್ಸ್‌ವೆಲ್ ಹಾಗೂ ಗೋಲ್‌ಕೀಪರ್‌ಗಳಾದ ಜೆಫರ್ಸನ್ ಮತ್ತು ವಿಕ್ಟರ್ ತಂಡದಲ್ಲಿರುವ ಭರವಸೆಯ ಆಟಗಾರರಾಗಿದ್ದಾರೆ.
ಮತ್ತೊಂದೆಡೆ ಕ್ರೊವೇಷಿಯಾ ಕೂಡ ಅಚ್ಚರಿ ಫಲಿತಾಂಶಕ್ಕೆ ಕಾದಿದೆ. ಬೇಯರ್ನ್ ಮ್ಯೂನಿಚ್‌ನ ಮುನ್ಪಡೆ ಆಟಗಾರ ಮಾರಿಯೊ ಮ್ಯಾಂಡ್‌ಜುಕಿಕ್ ನಾಳಿನ ಪಂದ್ಯದಿಂದ ಹೊರಗುಳಿಯುತ್ತಿರುವುದು ತಂಡಕ್ಕೆ ಕೊಂಚ ಹಿನ್ನಡೆಯಾಗಿದೆ. ನವೆಂಬರ್‌ನಲ್ಲಿ ಐಸ್‌ಲ್ಯಾಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಅವರು ಕೆಂಪು ಕಾರ್ಡ್ ಪಡೆದಿದ್ದರಿಂದ ಈ ಪಂದ್ಯದಲ್ಲಿ ಆಡುವ ಅವಕಾಶದಿಂದ ವಂಚಿತರಾಗಿದ್ದಾರೆ.
ಆದರೆ, ಕೋಚ್ ನಿಕೊ ಕೊವಾಕ್ ಗರಡಿಯಲ್ಲಿ ಉತ್ತಮ ತಾಲೀಮು ನಡೆಸಿ ಬಂದಿರುವ ಕ್ರೊವೇಷಿಯಾ ತಂಡದಲ್ಲಿ ಲೂಕಾ ಮ್ಯಾಡ್ರಿಕ್, ನಿಕೊ ಕ್ರಾಂಜಕರ್, ಎಡ್ವರ್ಡೊ, ನಿಕಿಕಾ ಜೊಲಾವಿಚ್ ಅವರಂತಹ ಸಮರ್ಥ ಆಟಗಾರರಿರುವುದು ಅದರ ಬಲ ಹೆಚ್ಚಿಸಿದೆ. ಹಾಗಾಗಿ, ಬ್ರೆಜಿಲ್ ಮುಂದೆ ಕಠಿಣ ಸವಾಲು ನಿಲ್ಲಿಸುವಷ್ಟು ಸದೃಢವಾಗಿರುವ ಕ್ರೊವೇಷಿಯಾ ಆಟಗಾರರಿಂದಲೂ ಉತ್ತಮ ಪ್ರದರ್ಶನ ನಿರೀಕ್ಷಿಸಬಹುದಾಗಿದೆ.
ಅಂತೆಯೇ ಉದ್ಘಾಟನೆ ಪಂದ್ಯದ ಆತಿಥ್ಯ ವಹಿಸಿರುವ ಸುಮಾರು 61,600 ಸಾಮರ್ಥ್ಯದ ಕಾರಿಂಥಿಯನ್ಸ್ ಏರೆನಾ ಕ್ರೀಡಾಂಗಣದಲ್ಲಿ ಫುಟ್ಬಾಲ್ ಕಿಚ್ಚು ಹೆಚ್ಚುವುದರಲ್ಲಿ ಅನುಮಾನವೇ ಇಲ್ಲ.