ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಫಿಫಾ ವಿಶ್ವಕಪ್ 2014

ಗ್ರೀಸ್ ಎದುರು ಕೊಲಂಬಿಯಾ ಕುಣಿತ

16 ವರ್ಷಗಳ ನಂತರ ವಿಶ್ವಕಪ್‌ಗೆ ಮರಳಿದ ಕೊಲಂಬಿಯಾ ತಂಡ, ನಿರೀಕ್ಷೆಯಂತೆ..

Srinivasa Murthy VN
Updated On : 15 Jun 2014, 1:11 am

ಬೇಲೊ ಹಾರಿಜಂಟೋ: 16 ವರ್ಷಗಳ ನಂತರ ವಿಶ್ವಕಪ್‌ಗೆ ಮರಳಿದ ಕೊಲಂಬಿಯಾ ತಂಡ, ನಿರೀಕ್ಷೆಯಂತೆ ಅದ್ಭುತ ಪ್ರದರ್ಶನ ನೀಡುವ ಮೂಲಕ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯ 'ಸಿ' ಗುಂಪಿನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಗ್ರೀಸ್ ವಿರದ್ಧ 3-0 ಗೋಲುಗಳ ಅಂತರದಿಂದ ಜಯ ಕಂಡುಕೊಂಡಿತು.
ಹಳದಿ ಜರ್ಸಿಯೊಂದಿಗೆ ಅಂಗಣಕ್ಕಿಳಿದಿದ್ದ ಕೊಲಂಬಿಯಾ ತಂಡದ ಆಟಗಾರರು ನೀಲಿ ಜರ್ಸಿ ಧರಿಸಿದ್ದ ಗ್ರೀಸ್ ತಂಡದ ಆಟಗಾರರ ಮೇಲೆ ಪಂದ್ಯದೂದ್ದಕ್ಕೂ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾದರು.
ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕಿಳಿದ ಕೊಲಂಬಿಯಾ,ಮೂರನೇ ನಿಮಿಷದಲ್ಲಿ ಗೋಲು ಗಳಿಸುವ ಯತ್ನ ಮಾಡಿತ್ತು. ಆದರೆ, ಇದನ್ನು ವಿಫಲಗೊಳಿಸುವಲ್ಲಿ ಗ್ರೀಸ್ ಆಟಗಾರರು ಯಶಸ್ವಿಯಾಗಿದ್ದರು.
5ನೇ ನಿಮಿಷದಲ್ಲಿ ಅದೃಷ್ಟ ಗ್ರೀಸ್ ಪರವಾಗಿರಲಿಲ್ಲ. ಕಾರಣ ಗೋಲು ದಾಖಲಿಸುವಲ್ಲಿ ಯಶಸ್ವಿಯಾದ 7ನೇ ನಂಬರ್ ಜರ್ಸಿ ತೊಟ್ಟಿದ್ದ ರಕ್ಷಣಾ ವಿಭಾಗದ ಆಟಗಾರ ಪಬ್ಲೊ ಆರ್ಮೆರೋ ಅವರು ಕೊಲಂಬಿಯಾ ತಂಡಕ್ಕೆ 1-0 ಅಂತರದ ಮುನ್ನಡೆ ತಂದುಕೊಟ್ಟರು. ಜೇಮ್ಸ್ ರೋಡ್ರಿಗೆಜ್ ಅವರು ಪಾಸ್ ಮಾಡಿದ ಚೆಂಡನ್ನು ಎದುರಾಳಿ ರಕ್ಷಣಾ ವಿಭಾಗ ಮತ್ತು ಗೋಲ್ ಕೀಪರ್ ಕಣ್ಣುತಪ್ಪಿಸಿ ಗೋಲುಪೆಟ್ಟಿಗೆ ಸೇರಿಸುವಲ್ಲಿ ಆರ್ಮೆರೋ ಯಶಸ್ವಿಯಾದರು. ಆ ಕ್ಷಣದಲ್ಲಿ ನೆರೆದಿದ್ದ ಪ್ರೇಕ್ಷಕರಷ್ಟೇ ಅಲ್ಲ. ಕ್ರೀಡಾಂಗಣದಲ್ಲಿ ಹೋರಾಟ ನಡೆಸಿದ್ದ ಆಟಗಾರರು ಕುಣಿದು ಕುಪ್ಪಳಿಸಿದರು.
ನಂತರ ಉಭಯ ತಂಡಗಳು ಸಮರ್ಥ ಹೋರಾಟ ನಡೆಸಿದವಾದರೂ, ಮೊದಲಾರ್ಧ ಪಂದ್ಯ ಮುಕ್ತಾಯವಾಗುವವರೆಗೂ ಯಾವುದೇ ಗೋಲು ದಾಖಲಾಗಲಿಲ್ಲ.
ದ್ವಿತೀಯಾರ್ಧ ಪಂದ್ಯ ಆರಂಭವಾದ ನಂತರವೂ ಪಾರಮ್ಯ ಮುಂದುವರಿಸಿದ ಕೊಲಂಬಿಯಾ ಪರ 58ನೇ 9ನೇ ನಂಬರ್ ಜರ್ಸಿ ತೊಟ್ಟಿದ್ದ ಆಟಗಾರ ಟೆವೋಫಿಲೋ ಗುಟಿರೆಜ್ಜಾ ಮತ್ತೊಂದು ಗೋಲು ದಾಖಲಿಸಿ, ಎದುರಾಳಿ ಗ್ರೀಸ್ ತಂಡದ ಮೇಲೆ ಒತ್ತಡ ಹೆಚ್ಚಾಗುವಂತೆ ಮಾಡಿದರು. ಆಗ ಕೊಲಂಬಿಯಾ 2-0 ಅಂತರದಿಂದ ಮುನ್ನಡೆ ಸಾಧಿಸುವ ಮೂಲಕ ಪಂದ್ಯದಲ್ಲಿ ತನ್ನ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿಕೊಂಡಿತು.
ನಂತರ ಗ್ರೀಸ್ ತಂಡಕ್ಕೆ ಗೋಲು ದಾಖಲಿಸಲು ಕೆಲ ಅವಕಾಶಗಳು ಸಿಕ್ಕವಾದರೂ, ಅದು ಆ ಅವಕಾಶಗಳಲ್ಲಿ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಆದರೆ, ಪಂದ್ಯದ ಆಂತ್ಯದಲ್ಲಿ ದೊರಕಿದ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೋಲು ದಾಖಲಿಸಿ ಜೇಮ್ಸ್ ರೊಡ್ರಿಗೆಜ್ ಅವರು ಕೊಲಂಬಿಯಾ 3-0 ಅಂತರದಿಂದ ಜಯ ಸಾಧಿಸುವಂತೆ ನೋಡಿಕೊಂಡರು.
ಪಂದ್ಯದ ಆರಂಭದಲ್ಲೇ ಗೋಲು ಬಿಟ್ಟುಕೊಟ್ಟ ಗ್ರೀಸ್ ತಂಡ ಎದುರಾಳಿ ಮೇಲೆ ನಿಯಂತ್ರಣ ಸಾಧಿಸುವಲ್ಲಿ ವೈಫಲ್ಯ ಕಂಡರು.

ಗೋಲು ವಿವರ
ಕೊಲಂಬಿಯಾ-3
ಆರ್ಮೆರೋ 5ನೇ ನಿಮಿಷ
ಟೆವೋಫಿಲೋ ಗುಟಿರೆಜಾ 58ನೇ ನಿಮಿಷ
ಜೇಮ್ಸ್ 90ನೇ ನಿಮಿಷ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement