ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಫಿಫಾ ವಿಶ್ವಕಪ್ 2014

ಆಂಗ್ಲರ ಮೇಲೆ ಇಟಲಿ ಸವಾರಿ

ಶಕ್ತಿಶಾಲಿ ತಂಡ ಇಂಗ್ಲೆಂಡ್ ಮೊದಲ ಹೆಜ್ಜೆಯಲ್ಲೇ ಇಟಲಿ ವಿರುದ್ದ ಆಘಾತ ಕಂಡಿದೆ

Srinivasa Murthy VN
Updated On : 16 Jun 2014, 10:50 am

ಮಾನೌಸ್: ಜಾಗತಿಕ ಫುಟ್ಬಾಲ್ ಕ್ಷೇತ್ರದ ದಿಗ್ಗಜರಲ್ಲಿ ಒಬ್ಬರಾದ ಇಟಲಿ ಪಡೆ 2014ರ ಫಿಫಾ ವಿಶ್ವಕಪ್ ಅಭಿಯಾನವನ್ನು ಭರ್ಜರಿಯಾಗಿ ಆರಂಭಿಸಿದೆ. ಆದರೆ, ಮತ್ತೊಂದು ಶಕ್ತಿಶಾಲಿ ತಂಡ ಇಂಗ್ಲೆಂಡ್ ಮೊದಲ ಹೆಜ್ಜೆಯಲ್ಲೇ ಆಘಾತ ಕಂಡಿದೆ.
ಭಾನುವಾರ ಬೆಳಗ್ಗೆ ಎರೆನಾ ಅಮಾಜೋನಿಯಾದಲ್ಲಿ ನಡೆದ 'ಡಿ' ಗುಂಪಿನ ಪಂದ್ಯದಲ್ಲಿ ಇಟಲಿ ತಂಡದ ಆಟಗಾರರು 2-1 ಗೋಲುಗಳಿಂದ ಇಂಗ್ಲೆಂಡ್ ಪಡೆಯನ್ನು ಸದೆಬಡಿದರು.
ಕ್ಲೌಡಿಯೊ ಮಾರ್ಚಿಸಿಯೊ ಮತ್ತು ಮಾರಿಯೊ ಬಾಲೊಟೆಲಿ ಆಕರ್ಷಕ ಗೋಲು ದಾಖಲಿಸಿ ಇಟಲಿಗೆ ನಿರೀಕ್ಷಿತ ಗೆಲವು ತಂದುಕೊಟ್ಟರು. ಇಂಗ್ಲೆಂಡ್ ಪರ ಡ್ಯಾನಿಯಲ್ ಸ್ಟರಿಜೆ ಗೋಲು ದಾಖಲಿಸಿದ್ದು ಫಲ ತಂದುಕೊಡಲಿಲ್ಲ.
ಇಟಲಿ ತಂಡ ಮೊದಲ ಅವಧಿಯ 35ನೇ ನಿಮಿಷದಲ್ಲಿ ಕ್ಲೌಡಿಯೊ ಮೂಲಕ ಗೋಲಿನ ಖಾತೆ ತೆರೆದು 1-0ಯಿಂದ ಮುನ್ನಡೆಯಿತು. ಆದರೆ, ಎರಡು ನಿಮಿಷಗಳ ಅಂತರದಲ್ಲಿ ಡ್ಯಾನಿಯಲ್ ಸ್ಟರಿಜೆ ಇಂಗ್ಲೆಂಡ್ ಪರ ಗೋಲು ದಾಖಲಿಸಿ ಹೋರಾಟ ಸಮಸ್ಥಿತಿಗೆ ಬರುವಂತೆ ಮಾಡಿದರು.
ವಿರಾಮದ ವೇಳೆಗೆ ಉಭಯ ತಂಡಗಳು ಸಮಬಲ ಸಾಧಿಸಿದ್ದವು. ಆದರೆ, ಉತ್ತರಾರ್ಧದ ಆಟ ಪ್ರಾರಂಭವಾಗಿ 5 ನಿಮಿಷ ಕಳೆಯುವಷ್ಟರಲ್ಲಿ ಇಟಲಿ ಪಾಲಿಗೆ ಮತ್ತೊಂದು ಅದೃಷ್ಟ ಒಲಿದುಬಂದಿತು. ಮ್ಯಾಂಚೆಸ್ಟರ್ ಸಿಟಿ ತಂಡದ ಮುನ್ಪಡೆ ಆಟಗಾರ ಬಾಲೊಟೆಲಿ ಪಂದ್ಯದ 50ನೇ ನಿಮಿಷದ ಆಟದಲ್ಲಿ ಹೆಡ್ ಮಾಡುವ ಮೂಲಕ ಚೆಂಡನ್ನು ಗುರಿಯತ್ತ ತಲುಪಿಸುವುದರೊಂದಿಗೆ ಇಟಲಿ ತಂಡ 2-1 ಗೋಲುಗಳ ಮುನ್ನಡೆಯೊಂದಿಗೆ ಪಂದ್ಯದ ಮೇಲೆ ಹಿಡಿತ ಸಾಧಿಸಿತು.
2012ರ ಯೂರೋ ಕಪ್‌ನಲ್ಲಿ ಇಟಲಿ ಕೈಯಲ್ಲಿ ಪೆನಾಲ್ಟಿ ಗೋಲಿನಿಂದಾಗಿಯೇ ಸೋಲುಂಡಿದ್ದ ಇಂಗ್ಲೆಂಡ್ ಇಲ್ಲಿಯೂ ಅದೇ ಕಹಿ ಅನುಭವ ಪಡೆಯಿತು.
ಈಗಾಗಲೇ ನಾಲ್ಕು ಬಾರಿ ವಿಶ್ವಕಪ್ ಎತ್ತಿ ಹಿಡಿದು ದಾಖಲೆಯ ಐದನೇ ಪ್ರಶಸ್ತಿ ಕನಸಲ್ಲಿರುವ ಇಟಲಿ ತನ್ನ ಯೋಜನೆಗೆ ತಕ್ಕ ತಂತ್ರ ರೂಪಿಸಿಕೊಂಡು ಇಂಗ್ಲೆಂಡ್ ಸವಾಲನ್ನು ಮೆಟ್ಟಿನಿಲ್ಲುವಲ್ಲಿ ಸಫಲವಾಯಿತು. ಹಾಗೆ ನೋಡಿದರೆ, ಪಂದ್ಯದಲ್ಲಿ ಇಟಲಿ ಮತ್ತು ಇಂಗ್ಲೆಂಡ್ ಆಟಗಾರರ ನಡುವೆ ಹೋರಾಟ ಹೆಚ್ಚು ಸಮಬಲದಿಂದಲೇ ಕೂಡಿತ್ತು. ಪಂದ್ಯದಲ್ಲಿ ಇಟಲಿ ಪ್ರತಿಶತ 52ರಷ್ಟು ಚೆಂಡಿನ ಮೇಲೆ ನಿಯಂತ್ರಣ ಹೊಂದಿದ್ದರೆ, ಇಂಗ್ಲೆಂಡ್ ಪ್ರತಿಶತ 48ರಷ್ಟು ಚೆಂಡಿನ ಮೇಲೆ ತನ್ನ ಹಿಡಿತ ಸಾಧಿಸಿತ್ತು.
ಇಂಗ್ಲೆಂಡ್ ಮ್ಯಾನೇಜರ್ ರಾಯ್ ಹಾಜ್‌ಸನ್ ಅವರು ತಮ್ಮ ಯುವಪಡೆಯಲ್ಲಿ ಶಕ್ತಿ ತುಂಬುವ ಪ್ರಯತ್ನ ಮಾಡಿದರಾದರೂ ಕನಿಷ್ಠ ಡ್ರಾ ಸಾಧಿಸುವ ಅವರ ಲೆಕ್ಕಾಚಾರ ಸಹ ಫಲಿಸಲಿಲ್ಲ.
ಲಿವರ್‌ಪೂಲ್‌ನ ಸಂಪರ್ಕ ಆಟಗಾರ ರಹೀಂ ಸ್ಟೆರ್ಲಿಂಗ್ ಮತ್ತು ಜೋರ್ಡಾನ್ ಹೆಂಡರ್ಸನ್ ಉತ್ತಮ ಪ್ರದರ್ಶನ ನೀಡಿ ಗೋಲುಗಳಿಸುವ ಕೆಲವು ಉತ್ತಮ ಅವಕಾಶಗಳನ್ನು ಸೃಷ್ಟಿ ಮಾಡಿದ್ದರೂ ಸಹ ಇಂಗ್ಲೆಂಡ್ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.  ಇಟಲಿ ಮಾತ್ರ ಪ್ರಬಲ ರಕ್ಷಣಾ ಗೋಡೆಯನ್ನು ನಿರ್ಮಿಸಿಕೊಂಡು ಇಂಗ್ಲೆಂಡ್ ಪ್ರಯತ್ನಗಳನ್ನು ವ್ಯರ್ಥಗೊಳಿಸುವಲ್ಲಿ ಯಶಸ್ವಿಯಾಯಿತು. ಇಂಗ್ಲೆಂಡ್ ತಂಡದಲ್ಲಿನ ಕೇಂದ್ರಬಿಂದು ಆಟಗಾರ ವೇಯ್ನ್ ರೂನಿಯನ್ನು ಸಂಪೂರ್ಣ ಬಂಧಿಸಿಡುವಲ್ಲಿ ಇಟಲಿ ಪಡೆ ಸಫಲವಾಯಿತು.
1934, 1938, 1982 ಹಾಗೂ 2006ರಲ್ಲಿ ಚಾಂಪಿಯನ್ ಆಗಿದ್ದ ಇಟಲಿ ಆಟಗಾರರು ಈ ಬಾರಿ ದಾಖಲೆಯ ಐದನೇ ಪ್ರಶಸ್ತಿ ಗೆಲ್ಲುವ ವಿಶ್ವಾಸ ಹೊಂದಿದ್ದು, ಆ ನಿಟ್ಟಿನಲ್ಲಿ ಇಂಗ್ಲೆಂಡ್ ವಿರುದ್ಧದ ಗೆಲವು ಅವರಲ್ಲಿ ಹೊಸಶಕ್ತಿ ತುಂಬಿದಂತಾಗಿದೆ.
ಮತ್ತೊಂದೆಡೆ 1966ರಲ್ಲಿ ಒಮ್ಮೆ ಮಾತ್ರ ವಿಶ್ವಕಪ್ ಗೆದ್ದುಕೊಂಡಿದ್ದ ಇಂಗ್ಲೆಂಡ್ ಆಟಗಾರರು ಮೊದಲ ಪಂದ್ಯದಲ್ಲೇ ಸೋಲನುಭವಿಸುವ ಮೂಲಕ ಅಪಾಯದತ್ತ ಹೆಜ್ಜೆಯನ್ನಿಟ್ಟಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement