ಫ್ರಾನ್ಸ್-ಹೋಂಡುರಾಸ್ ಪಂದ್ಯದಲ್ಲಿ ಮೊಳಗದ ರಾಷ್ಟ್ರಗೀತೆ
ಪೊರ್ಟೊ ಅಲೆಗ್ರೆ (ಬ್ರೆಜಿಲ್): ವಿಶ್ವಕಪ್ನ 'ಈ' ಗುಂಪಿನಲ್ಲಿ ಫ್ರಾನ್ಸ್ ಮತ್ತು ಹೋಂಡುರಾಸ್ ನಡುವೆ ನಡೆದ ಪಂದ್ಯ ಆರಂಭವಾಗುವ ಮುನ್ನ ಎರಡೂ ತಂಡಗಳ ರಾಷ್ಟ್ರಗೀತೆಯನ್ನು ಹಾಡಿಸದಿರುವುದು ಈಗ ಅಚ್ಚರಿಗೆ ಕಾರಣವಾಗಿದೆ. ಉಭಯ ತಂಡಗಳು ರಾಷ್ಟ್ರಗೀತೆಗಾಗಿ ಕ್ರೀಡಾಂಗಣದಲ್ಲಿ ಸರದಿಯಲ್ಲಿ ನಿಂತಿದ್ದವು. ಆದರೆ, ರಾಷ್ಟ್ರಗೀತೆಗಾಗಿ ಸಂಗೀತವೇ ಮೊಳಗಲಿಲ್ಲ. ನಂತರ ರೆಫರೀ ಅವರು ನೀಡಿದ ಆದೇಶದ ಮೇರೆಗೆ ಆಟಗಾರರು ಪರಸ್ಪರ ಕೈ ಕುಲುಕುವ ಮೂಲಕ ಅಂಗಣಕ್ಕಿಳಿದರು. ಆದರೆ, ಪಂದ್ಯ ಆರಂಭವಾಗುವುದಕ್ಕೆ ಇನ್ನೂ ಸಮಯವಿದ್ದುದರಿಂದ ಆಟಗಾರರು ಕ್ರೀಡಾಂಗಣದಲ್ಲಿ ಕೆಲವು ನಿಮಿಷಗಳವರೆಗೆ ಕಾಯಬೇಕಾಯಿತು. ಈ ಪಂದ್ಯದಲ್ಲಿ ರಾಷ್ಟ್ರಗೀತೆಯನ್ನು ಏಕೆ ಹಾಡಲಿಲ್ಲ ಎಂಬ ಬಗ್ಗೆ ವಿವರ ನೀಡಲು, ಫಿಫಾ ವಕ್ತಾರರು ಮಾಧ್ಯಮ ಸಂಪರ್ಕಕ್ಕೆ ದೊರಕಿಲ್ಲ.