ರಿಯೋ ಡಿ ಜನೈರೋ: ಕೊನೆಯ ಪಂದ್ಯದಲ್ಲಾದರೂ ಜಯ ಸಾಧಿಸಿ ಪಂದ್ಯಾವಳಿಯಲ್ಲಿ ತನ್ನ ಹೋರಾಟ ಅಂತ್ಯಗೊಳಿಸಬೇಕು ಎಂಬ ಇಂಗ್ಲೆಂಡ್ ತಂಡದ ಹಠ ಕೊನೆಗೂ ಈಡೇರಲೇ ಇಲ್ಲ.
ಮಂಗಳವಾರ ನಡೆದ 'ಡಿ' ಗುಂಪಿನಲ್ಲಿ ಈಗಾಗಲೇ ನಾಕೌಟ್ ಹಂತ ತಲುಪಿ ಒತ್ತಡವಿಲ್ಲದ ಪ್ರದರ್ಶನ ನೀಡಿದ ಕೋಸ್ಟರಿಕಾ ವಿರುದ್ಧ ಗೋಲು ದಾಖಲಿಸದೇ ಡ್ರಾ ಸಾಧಿಸಿದ್ದೇ ಅದರ ದೊಡ್ಡ ಸಾಧನೆಯಾಯಿತು. ಇದರೊಂದಿಗೆ ಪಂದ್ಯಾವಳಿಯ ಲೀಗ್ ಹಂತದಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಕೇವಲ ಒಂದು ಅಂಕ ಪಡೆದ ಇಂಗ್ಲೆಂಡ್ ತವರಿನ ಹಾದಿ ಹಿಡಿಯಿತು.
ಬಲಿಷ್ಠ ಇಟಲಿ ಮತ್ತು ಉರುಗ್ವೆ ವಿರುದ್ಧ ಅಚ್ಚರಿಯ ಜಯ ಕಂಡಿದ್ದ ಕೋಸ್ಟರಿಕಾ ಆಟಗಾರರಿಗೆ ಇಂಗ್ಲೆಂಡ್ ವಿರುದ್ಧ ಜಯ ಕಾಣಲು ಸಾಧ್ಯವಾಗಲಿಲ್ಲ. ಆದರೆ, 'ಡಿ' ಗುಂಪಿನಲ್ಲಿ ಸೋಲರಿಯದ ತಂಡ ಎಂಬ ಹೆಗ್ಗಳಿಕೆಗೆ ಕೊಸ್ಟರಿಕಾ ಪಾತ್ರವಾಯಿತು.
ಈಗಾಗಲೇ ಎರಡು ಸೋಲಿನಿಂದ ಕಂಗೆಟ್ಟಿದ್ದ ಇಂಗ್ಲೆಂಡ್ ಅಭಿಮಾನಿಗಳು ಕೊನೆಯ ಪಂದ್ಯದಲ್ಲಾದರೂ ತಮ್ಮ ಹೀರೋಗಳು ಜಯ ಸಾಧಿಸುತ್ತಾರೆ ಎಂಬ ಆಸೆಯನ್ನು ಹೊಂದಿದ್ದರು. ಆದರೆ, ಫಲಿತಾಂಶ ಅವರಿಗೆ ಸಂಭ್ರಮವನ್ನೂ ತರಲಿಲ್ಲ. ಸಂಪೂರ್ಣ ನಿರಾಸೆಯನ್ನೂ ಉಂಟುಮಾಡಲಿಲ್ಲ.
ತವರಿಗೆ ಹೋಗುವ ಮುನ್ನ ಗೋಲಿನ ಆಸೆ ಇಟ್ಟುಕೊಂಡಿದ್ದ ಇಂಗ್ಲೆಂಡ್ನ ರಾಸ್ ಬರ್ಕಿಲಿ, ಆ್ಯಡಮ್ ಲಲ್ಲಾನಾ ಹಾಗೂ ಡ್ಯಾನಿಯಲ್ ಸ್ಟರಡ್ಜಿ ಅವರು ಅವಿರತ ಪ್ರಯತ್ನ ನಡೆಸಿದರು. ಆದರೆ, ಅವರಿಗೆ ಗೋಲು ದಾಖಲಿಸಲು ಮಾತ್ರ ಸಾಧ್ಯವಾಗಲಿಲ್ಲ.