ಚಿಕನ್ ಖಾದ್ಯಗಳನ್ನು ಇಷ್ಟಪಡುವವರಿಗೆ ಚಿಕನ್ ಯಖ್ನಿ ಪುಲಾವ್ ಉತ್ತಮ ಆಯ್ಕೆ. ಕಾಶ್ಮೀರಿ ಶೈಲಿಯ ಈ ವಿಶೇಷ ಪುಲಾವ್‌ನಲ್ಲಿ ಮಸಾಲೆಗಳ ಸುವಾಸನೆಯೊಂದಿಗೆ ಬೇಯಿಸಿದ ಚಿಕನ್ ಮತ್ತು ಅಕ್ಕಿ ವಿಶಿಷ್ಟ ರುಚಿ ನೀಡುತ್ತವೆ. ಸಾಮಾನ್ಯ ಬಿರಿಯಾನಿಗಿಂತ ಕಡಿಮೆ ಮಸಾಲೆ ಬಳಸಿ ತಯಾರಿಸುವ ಈ ಖಾದ್ಯವನ್ನು ಮನೆಯಲ್ಲೇ ಸುಲಭವಾಗಿ ಮಾಡಬಹುದು. ಮಾಡುವ ವಿಧಾನ ಇಲ್ಲಿದೆ...
ಬೇಕಾಗುವ ಪದಾರ್ಥಗಳು...
ಚಿಕನ್ – 500 ಗ್ರಾಂ
ಬಾಸ್ಮತಿ ಅಕ್ಕಿ – 2 ಬಟ್ಟಲು
ಈರುಳ್ಳಿ – 2
ಮೊಸರು – ಅರ್ಧ ಬಟ್ಟಲು
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಹಸಿಮೆಣಸಿನಕಾಯಿ – 3
ತುಪ್ಪ – 3 ಚಮಚ
ಎಣ್ಣೆ – 2 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಸ್ವಲ್ಪ
ಪುದೀನಾ ಸೊಪ್ಪು – ಸ್ವಲ್ಪ
ಯಖ್ನಿ ತಯಾರಿಸಲು...
ದಾಲ್ಚಿನ್ನಿ – 2 ಚಿಕ್ಕ ತುಂಡು
ಏಲಕ್ಕಿ – 4
ಲವಂಗ – 5
ಕಾಳುಮೆಣಸು – 8
ಜೀರಿಗೆ – 1 ಚಮಚ
ಸೋಂಪು – 1 ಚಮಚ
ಪಲಾವ್ ಎಲೆ – 2
ಶುಂಠಿ – 1 ಇಂಚು
ಬೆಳ್ಳುಳ್ಳಿ – 5 ಎಸಳು
ನೀರು – 4 ಬಟ್ಟಲು
ಮಾಡುವ ವಿಧಾನ...
ಮೊದಲು ಒಂದು ಬಟ್ಟೆಯಲ್ಲಿ ದಾಲ್ಚಿನ್ನಿ, ಏಲಕ್ಕಿ, ಲವಂಗ, ಕಾಳುಮೆಣಸು, ಜೀರಿಗೆ, ಸೋಂಪು ಮತ್ತು ಪಲಾವ್ ಎಲೆಯನ್ನು ಹಾಕಿ ಗಂಟು ಕಟ್ಟಿಕೊಳ್ಳಿ.
ಕುಕ್ಕರ್‌ಗೆ ಚಿಕನ್, ಶುಂಠಿ, ಬೆಳ್ಳುಳ್ಳಿ, ಮಸಾಲೆ ಗಂಟು, ಉಪ್ಪು ಮತ್ತು ನೀರು ಹಾಕಿ. ಚಿಕನ್ ಚೆನ್ನಾಗಿ ಬೇಯುವವರೆಗೆ ಬೇಯಿಸಿ. ನಂತರ ಚಿಕನ್ ತುಂಡುಗಳನ್ನು ಪ್ರತ್ಯೇಕಿಸಿ, ನೀರನ್ನು ಸೋಸಿಟ್ಟುಕೊಳ್ಳಿ.
ಬಾಸ್ಮತಿ ಅಕ್ಕಿಯನ್ನು ತೊಳೆದು 20 ನಿಮಿಷ ನೆನೆಸಿಡಿ.
ದಪ್ಪ ತಳದ ಪಾತ್ರೆಯಲ್ಲಿ ತುಪ್ಪ ಮತ್ತು ಎಣ್ಣೆ ಬಿಸಿ ಮಾಡಿ. ಉದ್ದಕ್ಕೆ ಹೆಚ್ಚಿದ ಈರುಳ್ಳಿಯನ್ನು ಹಾಕಿ ಬಂಗಾರದ ಬಣ್ಣ ಬರುವವರೆಗೆ ಹುರಿಯಿರಿ.
ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನಕಾಯಿ ಹಾಕಿ ಹುರಿಯಿರಿ. ನಂತರ ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ನಂತರ ಬೇಯಿಸಿದ ಚಿಕನ್ ತುಂಡುಗಳನ್ನು ಹಾಕಿ, ಕೊತ್ತಂಬರಿ ಮತ್ತು ಪುದೀನಾ ಸೊಪ್ಪು ಸೇರಿಸಿ ನಿಧಾನವಾಗಿ ಮಿಶ್ರಣ ಮಾಡಿ.
ನೆನೆಸಿಟ್ಟ ಅಕ್ಕಿಯನ್ನು ನೀರು ಬಸಿದು ಪಾತ್ರೆಗೆ ಸೇರಿಸಿ. ನಂತರ ಅಕ್ಕಿಯ ಪ್ರಮಾಣಕ್ಕೆ ತಕ್ಕಂತೆ ಈಗಾಗಲೇ ಚಿಕನ್ ಬೇಯಿಸಿ ಸೋಸಿಟ್ಟುಕೊಂಡ (ಯಖ್ನಿ ಸಾರು) ನೀರು ಹಾಕಿ.
ಉಪ್ಪು ಸರಿಯಾಗಿದೆಯೇ ಎಂದು ಪರಿಶೀಲಿಸಿ. ಪಾತ್ರೆಯನ್ನು ಮುಚ್ಚಿ ಮಧ್ಯಮ ಉರಿಯಲ್ಲಿ ಬೇಯಿಸಿ. ನಂತರ ಕಡಿಮೆ ಉರಿಯಲ್ಲಿ 5–10 ನಿಮಿಷ ದಮ್ ಕಟ್ಟಿ.
ಒಲೆಯಿಂದ ಇಳಿಸಿ 10 ನಿಮಿಷ ಹಾಗೆಯೇ ಬಿಡಿ. ಬಳಿಕ ಅನ್ನವನ್ನು ಮೆಲ್ಲಗೆ ಕಲಸಿ ಬಿಸಿಬಿಸಿಯಾಗಿ ಬಡಿಸಿ.
ರುಚಿ ಹೆಚ್ಚಿಸಲು ಕೆಲವು ಸಲಹೆಗಳು...
ಮೊಸರನ್ನು ಸೇರಿಸುವಾಗ ಉರಿ ಕಡಿಮೆ ಇರಲಿ; ಇಲ್ಲದಿದ್ದರೆ ಮೊಸರು ಒಡೆಯಬಹುದು.
ಅಕ್ಕಿ ಮೆತ್ತಗಾಗದಂತೆ ನೀರಿನ ಪ್ರಮಾಣವನ್ನು ಎಚ್ಚರಿಕೆಯಿಂದ ಬಳಸಿ.
ಈ ಪುಲಾವ್‌ಗೆ ಮೊಸರು ಬಜ್ಜಿ ಉತ್ತಮ ಕಾಂಬಿನೇಷನ್.
ಚಿಕನ್ ಯಖ್ನಿ ಪುಲಾವ್‌ಗೆ ಹೆಚ್ಚು ಮಸಾಲೆಗಿಂತ ಸಂಪೂರ್ಣ ಮಸಾಲೆಗಳ ನೈಸರ್ಗಿಕ ಸುವಾಸನೆಯೇ ವಿಶೇಷ ರುಚಿ ನೀಡುತ್ತದೆ.