ಹೈದರಾಬಾದ್: ಹೈದರಾಬಾದ್ ನಲ್ಲಿ ಈಗ ಹಂದಿ ಜ್ವರಕ್ಕೆ ಮತ್ತೊಬ್ಬರು ಬಲಿಯಾಗಿದ್ದು, ಸಾವಿನ ಸಂಖ್ಯೆ ೩ ಕ್ಕೆ ಏರಿದೆ ಹಾಗೂ ತೆಲಂಗಾಣದಾದ್ಯಂತ ಹಂದಿ ಜ್ವರಕ್ಕೆ ೮ ಜನ ಬಲಿಯಾಗಿದ್ದಾರೆ.
ಎಚ್೧ಎನ್೧ ವೈರಸ್ ತಗಲಿರುವ ಇಬ್ಬರು ಮಂಗಳವಾರ ಮೃತಪಟ್ಟಿದ್ದರು ಹಾಗು ಬುಧವಾರ ಒಬ್ಬ ರೋಗು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಅಧಿಕಾರಿ ಡಾ. ಕೆ ಸುಭಾಕರ್ ತಿಳಿಸಿದ್ದಾರೆ.
ಹಲವಾರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದ ರೋಗಿಗೆ, ಕೊನೆಗೆ ರಾಜ್ಯ ಸರ್ಕಾರದ ಗಾಂಧಿ ಆಸ್ಪತ್ರೆಗೆ ಸೇರಿಸಲು ಕೊಂಡೊಯ್ಯುವಾಗ ದಾರಿಯಲ್ಲೇ ರೋಗಿ ಮೃತಪಟ್ಟಿದ್ದಾರೆ ಎಂದು ಸುಭಾಕರ್ ತಿಳಿಸಿದ್ದಾರೆ.
ಇದೇ ವಾರ ೩ ಸಾವು ಸಂಭವಿಸಿ, ಈ ವರ್ಷ ಹಂದಿ ಜ್ವರಕ್ಕೆ ಸಾವಿಗೀಡಾದವರ ಸಂಖ್ಯೆ ತೆಲಂಗಾಣದಲ್ಲಿ ೮ ಕ್ಕೆ ಏರಿದೆ. ಅಲ್ಲದೆ ೩ ಜನ ರೋಗಿಗಳು ರಾಜ್ಯದಲ್ಲಿ ಸದ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಧಿಕಾರಿಗಳ ಪ್ರಕಾರ ಈ ವರ್ಷ ೫೪ ಹಂದಿಜ್ವರದ ಪ್ರಕರಣಗಳು ವರದಿಯಾಗಿದ್ದು, ೨೦೦೯ ನೆ ಇಸವಿಗೆ ಹೋಲಿಸಿದರೆ ಇದು ಕಡಿಮೆ ಎಂದಿದ್ದಾರೆ.
ಅಮೇರಿಕಾದ ರೋಗ ನಿಯತ್ರಂತ ಕೇಂದ್ರ ಈ ಚಳಿಗಾಲದಲ್ಲಿ ಹಂದಿ ಜ್ವರ ರೋಗ ಮರುಕಳಿಸುವ ಸಾಧ್ಯತೆಯನ್ನು ಎಚ್ಚರಿಸಿದ್ದು ನಾವು ಈ ರೋಗ ಹರಡದಂತೆ ಎಚ್ಚರಿಕೆ ವಹಿಸಬೇಕಾಗಿದೆ ಎಂದಿದ್ದಾರೆ.