ನವದೆಹಲಿ: ನಿವೇದಿತಾ ಜೋಶಿ ಬ್ರೈಲ್ ಲಿಪಿಯಲ್ಲಿ ಸಿದ್ಧಪಡಿಸಿರುವ ಯೋಗ ಸೂಚನಾ ಪುಸ್ತಕ 'ಯೋಗಿಕಾ ಸ್ಪರ್ಶ' ಕೃತಿಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೋಮವಾರ ರಾಷ್ಟ್ರಪತಿ ಭವನದಲ್ಲಿ ಬಿಡುಗಡೆ ಮಾಡಿದರು,
ಈ ಸಂದರ್ಭದಲ್ಲಿ ಮಾತನಾಡಿದ ಅವರು ಯೋಗ ಕಲೆ, ವಿಜ್ಞಾನ ಮತ್ತು ತತ್ತ್ವಜ್ಞಾನ. ಇದು ದೇಶದ ಶಕ್ತಿ ವೃದ್ಧಿಸಲು ಮತ್ತು ಆತ್ಮ ಸಿದ್ಧಿಗೆ ಸಹಕಾರಿ ಎಂದಿದ್ದಾರೆ.
"ಮನುಷ್ಯನ ದೈಹಿಕ, ಮಾನಸಿಕ, ನೈತಿಕ ಮತ್ತು ಆಧ್ಯಾತ್ಮಿಕ ಅಭಿವೃದ್ಧಿಗೆ ಯೋಗವೊಂದೇ ಸಂಪೂರ್ಣ ಉತ್ತರ ನೀಡುತ್ತದೆ. ಮನುಷ್ಯನ ಒತ್ತಡವನ್ನು ಯೋಗ ಇಳಿಸುವುದಲ್ಲದೇ, ದೀರ್ಘ ಕಾಲ ಉಳಿಯುವ ಉಪಯೋಗಗಳನ್ನು ಯೋಗ ನೀಡುತ್ತದೆ ಎಂದು ಆಧುನಿಕ ವೈದ್ಯಕೀಯ ವಿಜ್ಞಾನ ಕೂಡ ತಿಳಿಸುತ್ತದೆ" ಎಂದು ರಾಷ್ಟ್ರಪತಿ ತಿಳಿಸಿದ್ದಾರೆ.
ಐಐಟಿ ದೆಹಲಿ ಸಹಯೋಗದೊಂದಿಗೆ ಯೋಗ ಗುರು ನಿವೇದಿತಾ ಜೋಶಿ ಈ ಪುಸ್ತಕವನ್ನು ಸಿದ್ಧಪಡಿಸಿದ್ದಾರೆ. ಕಣ್ಣು ಕಾಣದವರಿಗೆ ಯೋಗಾಭ್ಯಾಸ ಮಾಡಲು ಈ ಬ್ರೈಲ್ ಲಿಪಿಯ ಪುಸ್ತಕ ಉಪಯೋಗವಾಗಲಿದೆ.
ಬಿಜೆಪಿ ಮುಖಂಡ ಮುರಳಿ ಮನೋಹರ್ ಜೋಶಿ ಅವರ ಪುತ್ರಿ ನಿವೇದಿತಾ ೧೯ ವರ್ಷದ ಕೆಳಗೆ ಗಂಭೀರ ರೋಗಕ್ಕೆ ತುತ್ತಾಗಿದ್ದರು ಆದರೆ ನಂತರ ಯೋಗಾಭ್ಯಾಸದ ಸಹಾಯದಿಂದ ಸಂಪೂರ್ಣ ಗುಣಮುಖ ಕಂಡಿದ್ದರು. ತದನಂತರ ತಮ್ಮ ಇಡಿ ಜೀವನವನ್ನು ಯೋಗಾಭ್ಯಾಸ ಮತ್ತು ಯೋಗ ಬೋಧನೆಗೆ ಮುಡುಪಾಗಿಟ್ಟಿದ್ದಾರೆ.
ಈ ಸಂದರ್ಭದಲ್ಲಿ ಅವರ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.