ಆರೋಗ್ಯ-ಜೀವನಶೈಲಿ

ಇದೀಗ ಯೋಗಾ ಶುರು ಮಾಡುವವರಿಗೆ ಒಂದಿಷ್ಟು ಟಿಪ್ಸ್!

Vishwanath S

ಒತ್ತಡದ ಪರಿಸ್ಥಿತಿಯಲ್ಲಿ ಬಹುತೇಕರು ತಮ್ಮ ಆರೋಗ್ಯ ಸುಧಾರಣೆಗೆ ಏನೇಲ್ಲ ಕಸರತ್ತು ಮಾಡುತ್ತಾರೆ. ಆದರೆ ಸುಲಭವಾಗಿ ಯೋಗ ಮಾಡುವ ಮೂಲಕ ಆರೋಗ್ಯಕ್ಕೆ ಹೊಸ ಚೇತನ ನೀಡಬಹುದು.

* ಬೆಳಗಿನ ಸಮಯದಲ್ಲೇ ಯೋಗಾಸನ ಮಾಡಬೇಕು ಅನ್ನುವ ಒತ್ತಡವಿಲ್ಲ. ಬೆಳಗಿನ ಅವಸರದ ಸಮಯದಲ್ಲಿ ಆಗದವರು ಸಂಜೆ ರಾತ್ರಿ ಊಟ ಮಾಡುವುದರೊಳಗಾಗಿ ಯೋಗಾಸನಗಳನ್ನು ಮಾಡಬಹುದು.

* ಬರೀ ಹೊಟ್ಟೆಯಲ್ಲಿ ಯೋಗಾಸನ ಮಾಡುವುದು ಸೂಕ್ತವಾದರೂ ವಯಸ್ಸಾದವರು ಹೊಟ್ಟೆಗೆ ಸ್ವಲ್ಪ ಉಪಹಾರ ಸೇವಿಸಿ ಒಂದು ಗಂಟೆಯ ನಂತರ ಯೋಗಾಸನಗಳನ್ನು ಮಾಡಬಹುದು.

* ಯೋಗಾಸನ ಮಾಡಲು ಗಾರ್ಡನ್ ಗೆ ಹೋಗಬೇಕು, ಮೈದಾನಕ್ಕೆ ಹೋಗಬೇಕು ಅಂತೇನಿಲ್ಲ. ಮನೆಯಲ್ಲಿಯೇ ಮಾಡಬಹುದು. ತಾರಸಿ ಮೇಲೆ, ಮನೆಯ ಒಂದು ಕೊಠಡಿಯಲ್ಲಿ ಮತ್ತು ಮನೆಯ ಅಂಗಳದಲ್ಲಿ. ಗಾಳಿ, ಬೆಳಕು ಸಾಕಷ್ಟು ಬರುವ ಸ್ಥಳವಿದ್ದರೆ ಸಾಕು.

* ಯೋಗಾಸನ ಮಾಡಲು ಹೊಸ ಬಟ್ಟೆಯನ್ನೇ ಅಥವಾ ಯೋಗಾಸನ ಬಟ್ಟೆಗಳನ್ನೇ ತೆಗೆದುಕೊಳ್ಳಬೇಕು ಎಂಬ ಭ್ರಮೆ ಬೇಡ. ಮನೆಯಲ್ಲಿದ್ದ ಹಳೆಯ ಬಟ್ಟೆಗಳಾದರೂ ಸರಿ, ಅವುಗಳನ್ನು ಸ್ವಚ್ಛವಾಗಿ ತೊಳೆದು ಧರಿಸಿಕೊಳ್ಳಬಹುದು. ಪ್ರತಿನಿತ್ಯ ಸ್ವಚ್ಛವಾದ ಬಟ್ಟೆಗಳನ್ನೇ ಧರಿಸಬೇಕಾಗಿರುವುದರಿಂದ ಮನೆಯಲ್ಲಿದ್ದ ಹಳೆಯ ಉಪಯೋಗಿಸದ ಬಟ್ಟೆಗಳನ್ನು ಯೋಗಾಸನ ಮಾಡಲು ಬಳಸಿಕೊಳ್ಳಬಹುದು.

* ಗರ್ಭಿಣಿಯರು, ಅಶಕ್ತರು, ವೃದ್ಧರು, ಹೃದಯ ಮತ್ತು ಉಸಿರಾಟದ ಸಮಸ್ಯೆಗಳಿಂದ ಮತ್ತಿತರ ರೋಗಗಳಿಂದ ಬಳಲುತ್ತಿರುವವರು ವೈದ್ಯರ ಸಲಹೆಯನ್ನು ಪಡೆದುಕೊಂಡೇ ಯೋಗಾಭ್ಯಾಸ ಆರಂಭಿಸಬೇಕು. ಯೋಗಾಸನ ಮಾಡಲು ಆರಂಭಿಸಿದರೆ ಒಮ್ಮೆಲೆ ರೋಗದಿಂದ ಗುಣಮುಖರಾಗುತ್ತೇವೆ ಎಂಬ ಹುಚ್ಚು ಕಲ್ಪನೆ ಬಿಡಬೇಕು. ಜೀವದಾಸೆಯಿಂದ ಹುರುಪಿನಿಂದ ಮಾಡುವ ಯೋಗಾಭ್ಯಾಸದಿಂದ ತೊಂದರೆಯೂ ಆಗಬಾರದಲ್ಲವೇ?

* ನಿತ್ಯ ಯೋಗಾಭ್ಯಾಸದ ಸಮಯವನ್ನು ನಿಗದಿ ಪಡಿಸಿಕೊಳ್ಳಬೇಕು. ಮೊದಲಿಗೆ 5 ನಿಮಿಷ, ನಂತರ 10 ನಿಮಿಷ, ತದನಂತರ 15 ನಿಮಿಷ, ನಂತರ ಅರ್ಧಗಂಟೆ ಕ್ರಮೇಣ ಒಂದು ಗಂಟೆಯವರೆಗೂ ಯೋಗಾಭ್ಯಾಸಕ್ಕೆ ಸಮಯ ಮೀಸಲಿಡಬೇಕು.

* ಆಸನಗಳನ್ನು ಮಾಡುವಾಗ ಮಂತ್ರಗಳನ್ನು ಅಥವಾ ಭಕ್ತಿಗೀತೆ, ಸುಗಮ ಸಂಗೀತ ಅಥವಾ ವಾದ್ಯಗಳ ಸಂಗೀತಗಳನ್ನು ಇಷ್ಟವಿದ್ದರೆ ಆಲಿಸಬಹುದು.

* ಹೊತ್ತಿಗೆ ಸರಿಯಾದ ಊಟ ಮತ್ತು ಉಪಹಾರದಿಂದಲೂ ಆರೋಗ್ಯದಲ್ಲಿ ತೊಂದರೆ ಇರಲ್ಲ ಎಂಬುದು ನೆನಪಿರಲಿ. ನಿದ್ದೆಗೆಟ್ಟಾಗ, ಅತೀ ಸುಸ್ತಾದಾಗ, ಊಟ ಮಾಡಿದ ಕೂಡಲೇ ಯೋಗಾಭ್ಯಾಸ ಮಾಡಬಾರದು.

* ಹೆಣ್ಣು ಮಕ್ಕಳು ಋತುವಿನ ದಿನಗಳ ಹಿಂದೆ ಮುಂದೆ ಯೋಗಾಭ್ಯಾಸ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಮಾಡಬೇಕು.

* ಯೋಗಾಸನ ಮಾಡುವ ಮುನ್ನ ಸ್ನಾನ ಮಾಡಬಹುದು. ನಂತರವೂ ಮಾಡಬಹುದು, ಬೆವರಿನ ವಾಸನೆಯಿಂದ ಮುಜುಗರವಾಗುವುದರಿಂದ ಯೋಗಾಭ್ಯಾಸದ ನಂತರವೂ ಸ್ನಾನ ಮಾಡುವುದು ಆರೋಗ್ಯಕ್ಕೂ ಒಳ್ಳೆಯದು.

* ಯೋಗಾಭ್ಯಾಸ ಮಾಡಿ ಮುಗಿಸಿದ ಕೂಡಲೇ ಹೊಟ್ಟೆ ಬಿರಿಯುವಂತೆ ತಿನ್ನಬಾರದು. ಕನಿಷ್ಠ ಅರ್ಧ ಗಂಟೆ ಬಿಡಬೇಕು. ಯೋಗಾಸನ ಮಾಡುವಾಗ ಚೂಯಿಂಗ್ ಗಮ್ ಅಗೆಯುವುದು ಮತ್ತಿತರ ಅಭ್ಯಾಸಗಳಿದ್ದರೆ ಬಿಡಬೇಕು.

* ಯೋಗಾಭ್ಯಾಸ ಮಾಡುವ ಮುನ್ನವೇ ನಿತ್ಯಶೌಚ ಕರ್ಮಗಳನ್ನು ಮುಗಿಸಿಕೊಂಡಿರಬೇಕು. ಕೈ, ಕಾಲಿನ ಉಗುರುಗಳನ್ನು ಸಂಪೂರ್ಣ ತೆಗೆದಿರಬೇಕು.

- ವಿಶ್ವನಾಥ್. ಎಸ್

SCROLL FOR NEXT