ಅತಿಯಾದ ನೀರು ಸೇವನೆ ಆರೋಗ್ಯಕ್ಕೆ ಹಾನಿಕರ
ನೀರು ದೇಹದ ಒಳ ಅಂಗಾಗಳನ್ನು ಸ್ವಚ್ಛಗೊಳಿಸುತ್ತದೆ. ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ನೀರು ಕುಡಿಯುವುದರಿಂದ ದೇಹದಲ್ಲಿರುವ ವಿಷಕಾರಿ ಅಂಶಗಳು ಮತ್ತು ಮೂತ್ರಪಿಂಡದಲ್ಲಿರುವ ಕಲ್ಲುಗಳು ಹೊರಹೋಗುತ್ತದೆ, ಚರ್ಮ ಸುಕ್ಕುಗಟ್ಟುವುದನ್ನು ಕಾಪಾಡುತ್ತದೆ. ಬಾಯಾರಿಕೆ ನೀಗಿಸುತ್ತದೆ. ಹೀಗೆ ನೀರಿನ ಬಗ್ಗೆ ನಾನಾ ರೀತಿಯ ಆರೋಗ್ಯಕರ ವಿಷಯಗಳನ್ನು ನಾವು ಪ್ರತಿನಿತ್ಯ ಕೇಳುತ್ತಿರುತ್ತೇವೆ. ಆದರೆ, ನೀರು ಅನಾರೋಗ್ಯಕ್ಕೂ ಕಾರಣವಾಗುತ್ತದೆ ಎಂದು ಕೇಳಿರುವುದು ಅತಿ ವಿರಳ.
ಹೌದು, ನೀರು ಅತಿಯಾಗಿ ಸೇವಿಸಿದರೂ ಅದು ಆರೋಗ್ಯಕ್ಕೆ ಕುತ್ತಾಗಬಹುದು. ಯಾವುದೇ ವಸ್ತುವಾದರೂ ಅದು ಒಳ್ಳೆಯದೆಂದು ಅತಿಯಾಗಿ ಸೇವಿಸಿದರೆ ಅವು ಆರೋಗ್ಯಕರ ದೇಹದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ನಾವು ಮರೆಯಬಾರದು. ಅತಿಯಾದರೆ ಅಮೃತವೂ ವಿಷ ಅಂತರಲ್ಲಾ ಹಾಗೆ ಆರೋಗ್ಯವಾಗಿರಲು ನೀರು ಎಷ್ಟು ಮುಖ್ಯವೋ ಹಾಗೆಯೇ ನಿಯಮಿತಕ್ಕಿಂತ ಹೆಚ್ಚಾಗಿ ನೀರು ಸೇವಿಸಿದರೂ ಅನಾರೋಗ್ಯ ಕಟ್ಟಿಟ್ಟಬುತ್ತಿ.
ಸಾಮಾನ್ಯವಾಗಿ ಎಲ್ಲರೂ ಹೇಳುವುದು ಒಂದೇ...ನೀರು ಎಲ್ಲಾ ರೋಗ್ಯಕ್ಕೂ ಅಮೃತವಿದ್ದಂತೆ. ಅತಿಯಾಗಿ ನೀರು ಸೇವಿಸಿದರೆ ಯಾವ ರೋಗವು ಬರುವುದಿಲ್ಲ ಎಂದು. ಮಕ್ಕಳು ಸಹ ಪೋಷಕರು ಹೇಳಿದ್ದಾರೆಂದು ಮಿತಿಯೇ ಇಲ್ಲದೆ ನೀರು ಕುಡಿಯುವುದನ್ನು ನಾವು ನೋಡುತ್ತಿರುತ್ತೇವೆ. ದಾಹವಿಲ್ಲದೇ ಇದ್ದರೂ ಸುಮ್ಮನೆ ನೀರು ಕುಡಿಯುವುದು. ಆಟವಾಡಿ ಬಂದ ತಕ್ಷಣ ನೀರು ಕುಡಿಯುವುದು. ಎಲ್ಲಿಯಾದರೂ ಬಿದ್ದ ತಕ್ಷಣ ನೀರು ಕುಡಿಯುವುದು ಹೀಗಾ ನಾನಾ ರೀತಿಯ ಒತ್ತಡದ ಸಮಯದಲ್ಲಿ ನೀರು ಕುಡಿಯುವುದು ಸಾಮಾನ್ಯವಾಗಿ ಹೋಗಿದೆ. ಆದರೆ, ಆ ಹೊತ್ತಿನಲ್ಲಿ ಎಷ್ಟು ನೀರು ಕುಡಿಯುತ್ತೇವೆ. ಆ ಸಮಯದಲ್ಲಿ ನೀರು ಕುಡಿಯುವುದು ಒಳ್ಳೆಯದೇ ಎಂದು ಆಲೋಚಿಸುವವರ ಸಂಖ್ಯೆ ಅತಿ ವಿರಳ. ದೇಹ ಒತ್ತಡದಲ್ಲಿದ್ದಂತಹ ಸಂದರ್ಭದಲ್ಲಿ ಅತಿಯಾಗಿ ನೀರು ಕುಡಿಯಬಾರದು ಇದು ಹೃದಯಕ್ಕೆ ಬಾರಿ ತೊಂದರೆಯನ್ನುಂಟು ಮಾಡುತ್ತದೆ.
ನೀರು ಕುಡಿಯುವುದರಿಂದ ಅನಾರೋಗ್ಯ ಹೇಗೆ?
- ನಾವು ಕುಡಿಯುವ ನೀರು ಮೂತ್ರಪಿಂಡಗಳಿಗೆ ತಲುಪುತ್ತವೆ. ಈ ಮೂತ್ರಪಿಂಡಗಳು ತನ್ನಲ್ಲಿರುವ ಬೇಡ ವಸ್ತುಗಳನ್ನು ಹೊರಹಾಕಿ ದೇಹವನ್ನು ಆರೋಗ್ಯದಿಂದಿರುವಂತೆ ಕಾಪಾಡುತ್ತದೆ. ಆದರೆ, ನಾವು ಅಗತ್ಯಕ್ಕಿಂತ ಹೆಚ್ಚು ನೀರು ಕುಡಿಯುವುದರಿಂದ ಮೂತ್ರಪಿಂಡಗಳಿಗೆ ಒತ್ತಡ ಹೆಚ್ಚಾಗಿ ಅದರ ಕಾರ್ಯ ಸರಿಯಾದ ರೀತಿಯಲ್ಲಿ ಆಗುವುದಿಲ್ಲ ಇದರಿಂದ ದೇಹದ ಆರೋಗ್ಯ ಹದಗೆಡುತ್ತಾ ಬರುತ್ತದೆ.
ನಿಯಮಿತಕ್ಕಿಂತ ಹೆಚ್ಚು ನೀರು ಸೇವನೆಯಿಂದ ಯಾವ ರೀತಿ ಅನಾರೋಗ್ಯ ಬರುತ್ತದೆ?
- ನಿಯಮಿತಕ್ಕಿಂತ ಹೆಚ್ಚು ನೀರು ಸೇವನೆಯಿಂದ ಮಿದುಳಿನ ಸಮಸ್ಯೆಗೆ ಉಂಟಾಗಬಹುದು. ಮೆದುಳಿನ ಜೀವಕೋಶಗಳ ಒಳಗೆ ನೀರು ಹೆಚ್ಚಿನ ರೀತಿಯಲ್ಲಿ ಸರಬರಾಜಾದರೆ ಮಿದುಳಿನ ಜೀವಕೋಶಗಳಲ್ಲಿ ಊತ ಉಂಟಾಗುತ್ತದೆ. ಇದರಿಂದ ಉಸಿರಾಟದ ಸಮಸ್ಯೆ ಉಂಟಾಗಬಹುದು. ಕೆಲವೊಮ್ಮೆ ಮನುಷ್ಯ ಕೋಮಾ ಹಂತಕ್ಕೆ ಕೂಡಾ ತಲುಪಲು ಕಾರಣವಾಗುತ್ತದೆ.
- ದಣಿದು ಬಂದಾಗ ತಕ್ಷಣ ಒಂದೇ ಸಮನೆ ಅಳತೆಯಿಲ್ಲದೆ, ವಿರಾಮವಿಲ್ಲದಂತೆ ನೀರು ಕುಡಿಯುವುದರಿಂದಲೂ ಅನಾರೋಗ್ಯ ಉಂಟಾಗುತ್ತದೆ. ನೀರು ಅತಿಯಾಗಿ ಸೇವಿಸಿದರೆ ದೇಹದಲ್ಲಿ ರಕ್ತದ ಪ್ರಮಾಣವೂ ಹೆಚ್ಚುತ್ತದೆ. ಈ ರೀತಿಯ ಅಧಿಕ ರಕ್ತವು ಹೃದಯ ಹಾಗೂ ರಕ್ತನಾಳಗಳಲ್ಲಿ ಒತ್ತಡ ಹೆಚ್ಚಿಸುವುದಲ್ಲದೇ, ರಕ್ತ ಪರಿಚಲನೆ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ.
- ಅತಿಯಾದ ನೀರು ಸೇವನೆಯಿಂದ ರಕ್ತದಲ್ಲಿ ಸೋಡಿಯಂ ಕೊರತೆ ಉಂಟಾಗಿ ಜೀವಕೋಶಗಳ ಊತಕ್ಕೆ ಕಾರಣವಾಗುತ್ತದೆ. ಇದಕ್ಕೆ ಹೈಪೋನೇಟ್ರೇಮಿಯಾ ಎಂದು ಕರೆಯಲಾಗುತ್ತದೆ. ಇಂತಹ ರೋಗ ಉಂಟಾದವರಿಗೆ ವಾಕರಿಕೆ, ತಲೆಸುತ್ತಿಬೀಳುವುದು, ಮೂತ್ರವಿಸರ್ಜನೆ ಹೆಚ್ಚಾಗುವಂತಹ ಸಮಸ್ಯೆಗಳು ಉಂಟಾಗುತ್ತದೆ.
- ಮೂತ್ರವಿಸರ್ಜನೆ ಅತಿಯಾದರೆ ಒಳ್ಳೆಯದೇ ಅಲ್ಲವೇ ಎಂದು ಕೇಳಬಹುದು. ಮೂತ್ರವಿಸರ್ಜನೆ ಹೆಚ್ಚಾದರೆ ದೇಹದ ಕಲ್ಮಶ ಹೊರಹೋಗಿ ಆರೋಗ್ಯವಾಗಿರಬಹುದೇನೋ ನಿಜ. ಆದರೆ, ಇದು ದೇಹದಲ್ಲಿನ ನೀರಿನ ಪ್ರಮಾಣ ಕಡಿಮೆಯಾಗುವುದಕ್ಕೆ ಕಾರಣವಾಗುತ್ತದೆ. ಅಲ್ಲದೆ, ದೇಹವು ತನಗೆ ಬೇಕಾದ ದ್ರವ ಪದಾರ್ಥಗಳನ್ನು ಹೀರಿಕೊಳ್ಳುವಲ್ಲಿ ವಿಫಲವಾಗುತ್ತದೆ.
ಇಷ್ಟಕ್ಕೂ ಎಷ್ಟು ನೀರು ಕುಡಿಯಬೇಕು?
- ಪ್ರತಿದಿನ ಕನಿಷ್ಟ ಎಂದರೂ 2-3 ಲೀಟರ್ ನೀರು ಕುಡಿಯಬೇಕು. ಹಾಗೆಂದು ಒಂದೇ ಬಾರಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.
- ಬೆಳಗ್ಗೆ ಎದ್ದ ಕೂಡಲೇ 2 ಲೋಟ ಹಾಗೂ ಮಲಗುವ ಮುನ್ನ 2 ಲೋಟ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು.
- ಬಾಯಾರಿಕೆ ಆಗುವುದಕ್ಕೂ ಮುಂಚೆಯೇ ನೀರು ಕುಡಿಯಬೇಕು.
- ಊಟದ ಮಧ್ಯೆ ಮಧ್ಯೆ ನೀರು ಸೇವಿಸುವುದು ಆರೋಗ್ಯಕ್ಕೆ ಹಾನಿಕರ. ಊಟ ಮಾಡುವುದಕ್ಕೂ ಮುಂಚೆ ಅಥವಾ ಊಟ ಮಾಡಿದ ನಂತರ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು.
- ಮಲಬದ್ಧತೆ ರೋಗದಿಂದ ನರಳುತ್ತಿರುವವರು ನೀರನ್ನು ಹೆಚ್ಚಾಗಿ ಕುಡಿದು ನಂತರ ಸ್ವಲ್ಪಹೊತ್ತು ಓಡಾಡಬೇಕು. ಈ ರೀತಿ ಮಾಡುವುದರಿಂದ ರೋಗ ಶಮನವಾಗುತ್ತದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos