ನ್ಯೂಯಾರ್ಕ್: ಹೊಸ ರೋಗಗಳಿಗೆ ಹೆಸರನ್ನಿಡುವಾಗ ಎಚ್ಚರಿಕೆ ಇರಲಿ. ಇದು ತೀರಾ ಸೂಕ್ಷ್ಮ ವಿಚಾರ ಎಂಬುದು ವಿಶ್ವ ಆರೋಗ್ಯ ಸಂಸ್ಥೆಯ ಕಳಕಳಿ. ಸದ್ಯ ಇರುವ ರೋಗಗಳಿಗೆ ಹೊರತಾದ ಯಾವುದೇ ಹೊಸ ರೋಗಗಳು ಬರಲಿ, ಆದರೆ ಇವುಗಳ ಹೆಸರಿಸುವಾಗ ಯಾವುದೇ ದೇಶಕ್ಕೆ, ಸಂಸ್ಕೃತಿಗೆ, ಸಮುದಾಯಕ್ಕೆ, ಧರ್ಮಕ್ಕೆ ನೋವಾಗದಿರಲಿ.
ಏಕೆಂದರೆ, ಸದ್ಯ ಇರುವ ಕೆಲ ರೋಗಗಳ ಹೆಸರು ಕೆಲ ದೇಶಗಳ ಜನರಿಗೆ ತೀವ್ರ ನೋವುಂಟು ಮಾಡುತ್ತಿವೆ ಎಂದು ಹೇಳಿದೆ. ಇತ್ತೀಚಿನ ದಿನಗಳಲ್ಲಿ ಬರುತ್ತಿರುವ ರೋಗಗಳು ಭಯಾನಕವಾಗಿರುತ್ತವೆ. ಇಂಥ ರೋಗಗಳಿಗೆ ಪ್ರಾಣಿಗಳ, ಭೌಗೋಳಿಕ ಸ್ಥಳಗಳ, ಮನುಷ್ಯ ಅಥವಾ ಸಮುದಾಯಗಳ, ಆಹಾರದ ಹೆಸರುಗಳನ್ನಿಟ್ಟರೆ ಇದರಿಂದಾಗಿ ಇವೆಲ್ಲವಕ್ಕೆ ಅವಮಾನ ಮಾಡಿದಂತಾಗುತ್ತದೆ ಎಂಬುದು ವಿಶ್ವ ಆರೋಗ್ಯ ಸಂಸ್ಥೆಯ ಆಕ್ಷೇಪಕ್ಕೆ ಕಾರಣ.
ಯಾವ ಯಾವ ಕಾಯಿಲೆಗಳು?
ಹಂದಿಜ್ವರ, ಮಂಗನಕಾಯಿಲೆ (ಕ್ಯಾಸನೂರುಕಾಯಿಲೆ), ಮ್ಯಾಡ್ ಕೌ, ಸ್ಪಾನೀಶ್ ಫ್ಲೂ, ರಿಫ್ಟ್ ವ್ಯಾಲಿ ಫಿವರ್, ವೆಸ್ಟ್ ನೈಲ್ ವೈರಸ್, ಲೈಮ್ ಡಿಸೀಸ್ ಹಾಗೂ ಎಬೋಲಾ. ಈ ಎಲ್ಲಾ ಕಾಯಿಲೆಗಳಲ್ಲೂ ಒಂದಿಲ್ಲೊಂದು ಪ್ರಾಣಿ, ದೇಶ, ಸಮುದಾಯ, ಪ್ರದೇಶ ಅಥವಾ ನದಿಯನ್ನು ಬಳಸಿಕೊಳ್ಳಲಾಗಿದೆ.
ಇತ್ತೀಚೆಗಷ್ಟೇ ತುಸು ಕೆಟ್ಟದಾಗಿಯೇ ಕಾಡಿದ ಎಬೋಲಾ ಎಂಬುದು ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯಕ್ಕೆ ಸೇರಿದ್ದಾಗಿದೆ.
ಇದರಿಂದಾಗುವ ಅನಾಹುತ: ರೋಗವೊಂದಕ್ಕೆ ಪ್ರಾಣಿ ಹೆಸರಿಡುವುದರಿಂದ, ಆ ಪ್ರಾಣಿಯಿಂದಲೇ ಈ ರೋಗ ಬಂದಿದೆಂಯೇನೋ ಎಂಬ ತಪ್ಪು ಕಲ್ಪನೆ ಬರತೊಡಗುತ್ತದೆ. ಈ ಮೂಲಕ ಆ ಪ್ರಾಣಿಯನ್ನೇ ಅನುಮಾನದಿಂದ ನೋಡುವಂತಾಗುತ್ತದೆ. ಉದಾಹರಣೆಗೆ, ಹಂದಿಜ್ವರ ಎಂದ ಕೂಡಲೇ, ಕಂಡ ಕಂಡಲ್ಲಿ ಹಂದಿ ಕೊಲ್ಲುವುದು, ಹಂದಿ ಮಾಂಸದ ಉದ್ದಿಮೆಯನ್ನೇ ಬೀದಿಗೆ ತರುವುದು, ಕೋಳಿ ಜ್ವರವೆಂದ ಕೂಡಲೇ ಇಡೀ ಕುಕ್ಕುಟ ಉದ್ಯಮವನ್ನೇ ನಾಶ ಮಾಡುವುದು, ಮಂಗನ ಕಾಯಿಲೆಯಲ್ಲಿ ಮಂಗನ ಕುಲವನ್ನೇ ಕೊಲ್ಲುವಂಥ ವಿಚಾರಗಳು ಸೇರುತ್ತವೆ.
ಸ್ಪಾನೀಶ್ ಫ್ಲೂ ಮತ್ತು ರಿಫ್ಟ್ ವ್ಯಾಲಿ ಫಿವರ್ ರೋಗಗಳ ಸಂದರ್ಭದಲ್ಲಿ ಸ್ಪೇನ್ ದೇಶ ಮತ್ತು ರಿಫ್ಟ್ ವ್ಯಾಲಿ ಪ್ರದೇಶಗಳನ್ನೇ ಅವಮಾನ ಮಾಡಿದಂತಾಗುತ್ತದೆ. ಅಷ್ಟೇ ಅಲ್ಲದೇ, ರೋಗಗಳ ಹೆಸರಿನ ಪ್ರಾಣಿಗಳನ್ನೇ ಅನುಮಾನದಲ್ಲಿ ನೋಡುವುದು, ಪ್ರದೇಶಗಳಿಗೆ ಹೋಗದೇ ಇರುವುದು, ಅಲ್ಲಿಂದ ಬಂದವರನ್ನು ಸಂದೇಹಿಸುವ ಕ್ರಿಯೆ ಕೂಡ ಶುರುವಾಗಿಬಿಡುತ್ತದೆ.
ಹೇಗೆ ಹೆಸರಿಡಬೇಕು?
ರೋಗ ಲಕ್ಷಣಗಳು(ಉಸಿರಾಟದ ತೊಂದರೆ, ಅತಿಸಾರ ಇತ್ಯಾದಿ)
ಯಾರಿಗೆ ತೊಂದರೆ(ಮಗು.ಅಪ್ರಾಪ್ತರು, ತಾಯಂದಿರಿಗೆ)
ಕಾಲಮಾನ(ಬೇಸಿಗೆ, ಚಳಿಗಾಲ)
ಮನುಷ್ಯರ ಹೆಸರೂ ಇವೆ
ಚಾಗಸ್, ಕ್ರ್ಯೂಸ್ ಫೆಲ್ಡ್, ಆಲ್ಜೈಮರ್, ಲ್ಯೂ ಗ್ರೆಹಿಗ್ ಎಂಬ ಮನುಷ್ಯರ ಹೆಸರುಗಳ ರೋಗಗಳೂ ಇವೆ. ಇಧೂ ಕೂಡ ಆ ವ್ಯಕ್ತಿಗಳಿಗೆ ಅವಮಾನ ಮಾಡಿದಂತಾಗುತ್ತದೆ ಎಂಬುದು ವಿಶ್ವಸಂಸ್ಥೆಯ ಅಭಿಪ್ರಾಯ.