ಆರೋಗ್ಯ-ಜೀವನಶೈಲಿ

ನಿಯತ ಧೂಮಪಾನಿಗಳಿಗೆ ಹಲ್ಲು ಕಳೆದುಕೊಳ್ಳುವ ಅಪಾಯ ಹೆಚ್ಚು

Guruprasad Narayana

ವಾಶಿಂಗ್ಟನ್: ನಿಯತವಾಗಿ ಸಿಗರೆಟ್ ಸೇದುವವರು, ಹಲ್ಲುಗಳನ್ನು ಕಳೆದುಕೊಳ್ಳುವ ಹೆಚ್ಚಿನ ಅಪಾಯ ಎದುರಿಸುತ್ತಾರೆ ಎನ್ನುತ್ತದೆ ಹೊಸ ಅಧ್ಯಯನವೊಂದು.

ಬರ್ಮಿಂಗ್ ಹ್ಯಾಮ್ ವಿಶ್ವವಿದ್ಯಾಲಯ ನಡೆಸಿದ ಈ ಅಧ್ಯಯನದಲ್ಲಿ ಪುರುಷ ಧೂಮಪಾನಿಗಳು, ಸಿಗರೆಟ್ ಸೇದದವರಿಗಿಂತ ೩.೬ ಪಟ್ಟು ಹೆಚ್ಚು ಅಪಾಯವನ್ನು, ಮಹಿಳಾ ಧೂಮಪಾನಿಗಳು ೨.೫ ಪಟ್ಟು ಹೆಚ್ಚು ಅಪಾಯವನ್ನು ಎದುರಿಸುತ್ತಾರೆ ಎಂದು ತಿಳಿಸಿದೆ.

ಸಾಮಾನ್ಯವಾಗಿ ಒಸಡಿಗೆ ಬರುವ ರೋಗದಿಂದ, ಹುಳುಕು ಹಲ್ಲಿನಿಂದ ಹಲ್ಲುಗಳು ಬಿದ್ದುಹೋಗುತ್ತವೆ ಆದರೆ ಧೂಮಪಾನ ಈ ಒಸಡಿಗೆ ಬರುವ ರೋಗಕ್ಕೆ ಪುಷ್ಠಿ ನೀಡಿ ಧೂಮಪನಿಗಳು ಅತಿ ಬೇಗ ಹಲ್ಲು ಕಳೆದುಕೊಳ್ಳುವಂತೆ ಮಾಡುತ್ತದೆ ಎಂದು ಅಧ್ಯಯನದ ಹಿರಿಯ ಸಂಶೋಧಕ ಥಾಮಸ್ ಡೈಟ್ರಿಚ್ ತಿಳಿಸಿದ್ದಾರೆ.

ಧೂಮಪಾನದಿಂದ ಒಸಡು ರಕ್ತಸ್ರಾವ ಕೂಡ ಉಂಟಾಗಬಲ್ಲದು ಎಂದು ಕೂಡ ಅಧ್ಯಯನ ತಿಳಿಸಿದೆ. ಧೂಮಪಾನ ಮತ್ತು ಹಲ್ಲುಗಳು ಉದುರುವ ಸಂಬಂಧ ವಯಸ್ಕರಿಗಿಂತ ಯುವಕರಲ್ಲಿ ಹೆಚ್ಚಿರುತ್ತದೆ ಎಂದು ತಿಳಿಯಲಾಗಿದೆ.

ಸಿಗರೆಟ್ ಬಿಡುವುದರಿಂದ ಈ ಅಪಾಯ ಬೇಗನೆ ಕ್ಷೀಣಿಸಬಹುದು ಎಂದಿರುವ ಅಧ್ಯಯನ, ಒಟ್ಟಿನಲ್ಲಿ ಸಿಗರೆಟ್ ಸೇದದೆ ಇರುವವರ ಹಲ್ಲುಗಳು, ಸಿಗರೆಟ್ ಬಿಟ್ಟವರಿಗಿಂತಲೂ ಆರೋಗ್ಯವಾಗಿರುತ್ತವೆ ಎಂದಿದೆ.

ಈ ಅಧ್ಯಯನ ಜರ್ನಲ್ ಆಫ್ ಡೆಂಟಲ್ ರಿಸರ್ಚ್ ನಲ್ಲಿ ಪ್ರಕಟವಾಗಿದೆ.

SCROLL FOR NEXT