ಆರೋಗ್ಯ-ಜೀವನಶೈಲಿ

ಹಣ್ಣು ತಿನ್ನುವ ಮೊದಲು ಈ ಕ್ರಮಗಳನ್ನು ಅನುಸರಿಸಿ

Sumana Upadhyaya

ಈಗ ಬೇಸಿಗೆ ಕಾಲ. ಬೇರೆಲ್ಲಾ ಆಹಾರ ಪದಾರ್ಥಗಳಿಗಿಂತ ಹಣ್ಣು, ಹಣ್ಣುಗಳ ಜ್ಯೂಸ್, ಹಸಿರು ತರಕಾರಿ ಸೇವನೆ ಹೊಟ್ಟೆಗೆ ತಂಪು ಕೊಡುತ್ತದೆ. ಬೇಸಿಗೆಯಲ್ಲಿ ಹಣ್ಣು ತಿಂದರೆ ಒಳ್ಳೆಯದು ಎಂದು ಸಿಕ್ಕ ಸಿಕ್ಕ ಹಣ್ಣನ್ನು ಸಿಕ್ಕಾಪಟ್ಟೆ ತಿಂದರೆ ಅದಕ್ಕೆ ಅರ್ಥವಿಲ್ಲ. ಹಣ್ಣುಗಳನ್ನು ತಿನ್ನುವುದಕ್ಕೂ ಒಂದು ಕ್ರಮವಿದೆ ಎನ್ನುತ್ತಾರೆ ಮಂಗಳೂರಿನ ಆಹಾರ ತಜ್ಞೆ ರಾಧಿಕಾ.

ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು ಎನ್ನುತ್ತಾರೆ ಅವರು. ಇದರಿಂದ ನಮ್ಮ ದೇಹದ ಅತಿಯಾದ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುವುದಲ್ಲದೆ, ಜೀವನದ ಇತರ ಚಟುವಟಿಕೆಗಳನ್ನು  ನಿರ್ವಹಿಸಲು ಚೈತನ್ಯವನ್ನು ನೀಡುತ್ತದೆ. ದೇಹದಲ್ಲಿ ಸಂಗ್ರಹವಾಗಿರುವ ಅನಗತ್ಯ ವಿಷಪೂರಿತ ಅಂಶಗಳನ್ನು ತೊಡೆದು ಹಾಕುವಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತವೆ.

ಆದ್ದರಿಂದ ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿರುವಾಗ ಅಥವಾ ಊಟಕ್ಕೆ ಮೊದಲು ತಿನ್ನುವುದು ಉತ್ತಮ. ಬೇರೆ ಆಹಾರಗಳ ಒಟ್ಟಿಗೆ ಹಣ್ಣನ್ನು ತಿಂದರೆ ಹೊಟ್ಟೆಯುರಿ, ಉಬ್ಬರಿಸುವಿಕೆ, ಸರಿಯಾಗಿ ಜೀರ್ಣವಾಗದಿರುವುದು ಉಂಟಾಗುತ್ತದೆ. ಹಣ್ಣು ತಿಂದ ಬಳಿಕ, ಬೇರೆ ಯಾವುದೇ ಆಹಾರ ತಿನ್ನುವ ಮೊದಲು ಕನಿಷ್ಠ 30 ನಿಮಿಷಗಳ ಅಂತರವನ್ನು ಪಾಲಿಸಿರಿ. ಒಂದು ವೇಳೆ ನೀವು ಅದಾಗಲೇ ಊಟವನ್ನು ಮಾಡಿಯಾಗಿದ್ದರೆ, ಸುಮಾರು 3 ಗಂಟೆಗಳ ಬಳಿಕ ಹಣ್ಣನ್ನು ಸೇವಿಸಿರಿ. ಆದ್ದರಿಂದ ತಿಂದ ಹಣ್ಣು ಹೊಟ್ಟೆಗೆ ಹೋಗುವ ಮೊದಲು, ನೀವು ಸೇವಿಸಿದ ಎಲ್ಲ  ಆಹಾರಗಳು ಜೀರ್ಣವಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.

ಹಣ್ಣಿನ ರಸ ಕುಡಿಯಬೇಕೆಂದೆನಿಸಿದಾಗ, ಕ್ಯಾನ್‌ಗಳಲ್ಲಿ ಸಂಗ್ರಹಿಸಿಟ್ಟ ಹಣ್ಣಿನ ರಸ ಕುಡಿಯುವ ಬದಲು ತಾಜಾ ಹಣ್ಣಿನ ರಸವನ್ನು ಕುಡಿಯಿರಿ. ಅಷ್ಟೇ ಅಲ್ಲದೆ, ಬಿಸಿ ಮಾಡಿದ ಹಣ್ಣಿನ ರಸವನ್ನು ಕುಡಿಯಬೇಡಿರಿ. ಬೇಯಿಸಿದ ಹಣ್ಣುಗಳನ್ನು ತಿನ್ನಬೇಡಿ. ಇದರಿಂದ ನಿಮಗೆ ರುಚಿ ಸಿಗುತ್ತದೆಯೇ ಹೊರತು, ಪೋಷಕಾಂಶಗಳು ಸಿಗುವುದಿಲ್ಲ.

ನಿರಂತರ ಮೂರು ದಿನಗಳವರೆಗೆ ಕೇವಲ ಹಣ್ಣುಗಳನ್ನು ಮಾತ್ರ ತಿನ್ನುವ ಮೂಲಕ, ನೀವು ನಿಮ್ಮ ದೇಹವನ್ನು ಶುದ್ಧ ಮಾಡಿಕೊಳ್ಳಬಹುದು ಎನ್ನುತ್ತಾರೆ ಆಹಾರ ತಜ್ಞೆ ರಾಧಿಕಾ.

SCROLL FOR NEXT