ಆರೋಗ್ಯ

ಎಚ್ಚರ...ಅಧಿಕ ಬಿಪಿ ಮಾತ್ರೆಗಳಿಂದ ಖಿನ್ನತೆಗೆ ಒಳಗಾಗುವಿರಿ!

Srinivasamurthy VN

ಲಂಡನ್: ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಹೆಚ್ಚೆಚ್ಚು ಬಿಪಿ ಮಾತ್ರೆಗಳನ್ನು ಸೇವಿಸುವುದರಿಂದ ಖಿನ್ನತೆಗೆ ಒಳಗಾಗಲಿದ್ದಾರೆ ಎಂದು ನೂತನ ವೈದ್ಯಕೀಯ ಸಂಶೋಧನೆಯೊಂದು  ಹೇಳಿದೆ.

ಅಧಿಕ ರಕ್ತದೊತ್ತಡ ನಿವಾರಣೆಗೆ ನಾವು ಸೇವಿಸುವ ಸಾಮಾನ್ಯ ಬಿಪಿ ಮಾತ್ರೆಗಳು ನಮ್ಮನ್ನು ಖಿನ್ನತೆಗೆ ದೂಡುತ್ತವೆ ಎಂದು ನೂತನ ಸಂಶೋಧನೆಯೊಂದು ತಿಳಿಸಿದೆ. ಬಿಪಿ ನಿಯಂತ್ರಣಕ್ಕೆ  ಸಾಮಾನ್ಯವಾಗಿ ಸೇವಿಸುವ ನಾಲ್ಕು ಔಷಧಿಗಳು ಮನುಷ್ಯನ ನರಮಂಡಲದ ಮೇಲೆ ಪ್ರಭಾವ ಬೀರಿ ಆತನ ಚಿಂತಾನಶೀಲತೆಯನ್ನೇ ಕುಂದಿಸುತ್ತದೆ. ಆ ಮೂಲಕ ಆತನನ್ನು ಆಲೋಚನಾ  ಅಸ್ವಸ್ಥತೆ ಅಥವಾ ಖಿನ್ನತೆಗೆ ದೂಡುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ರಕ್ತದೊತ್ತಡ ನಿವಾರಣೆಗೆ ಸಾಮಾನ್ಯವಾಗಿ ಸೇವಿಸಲಾಗುವ 4 ಬಗೆಯ ಔಷಧಿಗಳು ಮತ್ತು ಅದರಿಂದಾಗುವ ಮನಸ್ಥಿತಿಯ ಬದಲಾವಣೆ ಬಗ್ಗೆ ಅಧ್ಯಯನ ನಡೆಸಲಾಗಿತ್ತು. 5,25,046 ರೋಗಿಗಳ  ಮೇಲೆ ಈ ಸಮೀಕ್ಷೆ ನಡೆಸಲಾಗಿದ್ದು, ಬಿಪಿ ಔಷಧ ತೆಗೆದುಕೊಂಡು 90 ದಿನದಲ್ಲಿ 299 ಜನರು ಖಿನ್ನತೆಯಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿದ್ದರಂತೆ. ಸತತವಾಗಿ 2 ವರ್ಷ ರಕ್ತದೊತ್ತಡ ಔಷಧ  ಸೇವಿಸಿದವರಲ್ಲಿ ಖಿನ್ನತೆ ತುಂಬ ಹೆಚ್ಚಾಗಿರುವುದು ಕಂಡು ಬಂದಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಬ್ರಿಟನ್ ನ ಗ್ಲಾಸ್ಕೋ ವಿಶ್ವವಿದ್ಯಾಲಯದ ಪ್ರೊಫೆಸರ್ ಭಾರತ ಮೂಲದ ಸಂತೋಷ್ ಪದ್ಮನಾಭನ್ ಅವರು ಈ ಸಂಶೋಧನೆ ನಡೆಸಿದ್ದು, ರಕ್ತದೊತ್ತಡ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗುವ  ಸಾಮಾನ್ಯ ಔಷಧಗಳು ವ್ಯಕ್ತಿಯನ್ನು ಖಿನ್ನತೆಗೆ ದೂಡುತ್ತವೆ ಎಂದು ತಿಳಿಸಿದ್ದಾರೆ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ವ್ಯಕ್ತಿಯ ಮಾನಸಿಕ ಆರೋಗ್ಯದ ಮೇಲೆ ಈ ವಿಧದ ಔಷಧಿಗಳು  ಋಣಾತ್ಮಕ ಪ್ರಭಾವ ಬೀರುವ ಸಾಧ್ಯತೆಗಳಿವೆ ಎಂದು ಅವರು ಎಚ್ಚರಿಸಿದ್ದಾರೆ.

ವೈದ್ಯರು ಔಷಧ ಸೂಚಿಸುವಾಗ ರೋಗಿಯ ಮಾನಸಿಕ ಆರೋಗ್ಯವನ್ನೂ ಪರಿಗಣಿಸಿದ ಬಳಿಕವೇ ಅವರಿಗೆ ಮುಂದಿನ ಚಿಕಿತ್ಸೆ ನೀಡಬೇಕು ಎಂದು ಅವರು ವೈದ್ಯರಿದೆ ಸಲಹೆ ನೀಡಿದ್ದಾರೆ.

SCROLL FOR NEXT