ಆರೋಗ್ಯ

ಮೂತ್ರಪಿಂಡದಲ್ಲಿ ಕಲ್ಲಿದೆಯೇ? ರೋಲರ್ ಕೋಸ್ಟರ್ ಸವಾರಿ ಮಾಡಿ ನೋಡಿ!

Srinivas Rao BV

ವೈದ್ಯಕೀಯ ಚಿಕಿತ್ಸೆಯೇ ಇಲ್ಲದೇ ಮೂತ್ರಪಿಂಡದ ಕಲ್ಲುಗಳನ್ನು ಹೊರತೆಗೆಯುವ ವಿಧಾನವನ್ನು ಅಮೆರಿಕದ ಮಿಷಿಗನ್ ಸ್ಟೇಟ್ ವಿಶ್ವವಿದ್ಯಾನಿಲಯದ ಮೂತ್ರಪಿಂಡ ಶಾಸ್ತ್ರಜ್ಞರು ಕಂಡುಕೊಂಡಿದ್ದಾರೆ.

ಶಸ್ತ್ರಚಿಕಿತ್ಸೆ ಅಥವಾ ಇನ್ನಾವುದೇ ವಿಧಾನಗಳ ಚಿಕಿತ್ಸೆ ಇಲ್ಲದೇ ಮೂತ್ರ ಪಿಂಡದ ಕಲ್ಲುಗಳನ್ನು ಕರಗಿಸಲು ರೋಗಿಗಳು ರೋಲರ್ ಕೋಸ್ಟರ್ ಸವಾರಿ ಮಾಡಬೇಕಷ್ಟೆ. ಹೌದು, ವಿಜ್ಞಾನಿಗಳ ಪ್ರಕಾರ ಸಾಹಸಮಯ ಸವಾರಿ ಮೂತ್ರಪಿಂಡದಲ್ಲಿರುವ ಕಲ್ಲುಗಳನ್ನು ಹೊರತೆಗೆಯಲು ಸಹಕಾರಿಯಾಗಿದೆಯಂತೆ.

ರೋಲರ್ ಕೋಸ್ಟರ್ ಸವಾರಿಯಂತಹ ಸಾಹಸಮಯ ಸವಾರಿ ಮಾಡುವುದರಿಂದ ಮೂತ್ರಪಿಂಡದ ಕಲ್ಲುಗಳನ್ನು ಶೇ.70 ರಷ್ಟು ಹೊರಹಾಕಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ರೋಲರ್ ಕೋಸ್ಟರ್ ಸವಾರಿಯ ನಂತರ ಮೂತ್ರಪಿಂಡದ ಕಲ್ಲುಗಳನ್ನು ಹೊರಹಾಕಲು ಸಾಧ್ಯವಾಗಿದೆ ಎಂದು ಸಮಸ್ಯೆ ಎದುರಿಸುತ್ತಿದ್ದ ಅನೇಕ ರೋಗಿಗಳು ತಮ್ಮಲ್ಲಿ ಹೇಳಿಕೊಂಡಿರುವುದಾಗಿ ಮಿಷಿಗನ್ ಸ್ಟೇಟ್ ವಿಶ್ವವಿದ್ಯಾನಿಲಯದ ಮೂತ್ರಪಿಂಡ ಶಾಸ್ತ್ರಜ್ಞ ಡೇವಿಡ್ ತಿಳಿಸಿದ್ದಾರೆ.

ರೋಲರ್ ಕೋಸ್ಟರ್ ಸವಾರಿಯನ್ನು ಒಂದೆರಡು ಬಾರಿ ಮಾಡಿದ ನಂತರ ಮೂರೂ ಬಾರಿ ಮೂತ್ರಪಿಂಡದ ಕಲ್ಲುಗಳು ಮೂತ್ರದ ಮೂಲಕ ಹೊರಬಂದಿರುವುದಾಗಿ ಓರ್ವ ರೋಗಿ ತಿಳಿಸಿದ್ದಾಗಿ ಡೇವಿಡ್ ತಿಳಿಸಿದ್ದಾರೆ. ರೋಗಿಗಳು ಹೇಳುತ್ತಿದ್ದ ಅನುಭವದ ನೈಜತೆಯನ್ನು ತಿಳಿಯಲು ವಿಜ್ಞಾನಿಗಳು ಸಂಶೋಧನೆ ನಡೆಸಿದ್ದು, ಸಾಹಸಮಯ ಸವಾರಿಯಿಂದ ಮೂತ್ರಪಿಂಡಲ್ಲಿನ ಕಲ್ಲುಗಳು ಸುಲಭವಾಗಿ ಹೊರಬರುತ್ತವೆ ಎಂಬುದು ದೃಢವಾಗಿದೆ.

ಸಂಶೋಧನೆಗಾಗಿ ಗರಿಷ್ಠ 4 ಮಿಲೀಮೀಟರ್ ಗಾತ್ರದ ಮೂತ್ರಪಿಂಡದ ಕಲ್ಲುಗಳನ್ನೊಳಗೊಂಡ ಮೂತ್ರಪಿಂಡದ 3D ಮಾದರಿಯನ್ನು ಬಳಸಲಾಗಿದ್ದು ರೋಲರ್ ಕೋಸ್ಟರ್ ಸವಾರಿ ಮಾಡಿಸಲಾಗಿದೆ. ನಂತರ ಮೂತ್ರಪಿಂಡದ ಮಾದರಿಯಲ್ಲಿದ್ದ ಕಲ್ಲು ಕರಗಿದ್ದನ್ನು ವಿಜ್ಞಾನಿಗಳು ಗಮನಿಸಿದ್ದಾರೆ. ಈ ಹಿನ್ನೆಲೆಯಲ್ಲಿ  ರೋಲರ್ ಕೋಸ್ಟರ್ ಸವಾರಿಯಂತಹ ಸಾಹಸಮಯ ಸವಾರಿಯಿಂದ ಶೇ.70 ರಷ್ಟು ಮೂತ್ರಪಿಂಡದ ಕಲ್ಲುಗಳನ್ನು ಸಹಜವಾಗಿಯೇ ಹೊರಹಾಕುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. 

SCROLL FOR NEXT