ಆರೋಗ್ಯ

ಹೆಚ್1ಎನ್1 ಮಹಾಮಾರಿ ತಡೆಗೆ ಅಲೋಪತಿ-ಹೋಮಿಯೋಪತಿ ಔಷಧಿ

Manjula VN
ಬೆಂಗಳೂರು: ಹೆಚ್1ಎನ್1 ಮಹಾಮಾರಿಯನ್ನು ತಡೆಗಟ್ಟಲು ಆರೋಗ್ಯ ಇಲಾಖೆ ಈಗಾಗಲೇ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದು, ಸಾಂಕ್ರಾಮಿಕ ರೋಗದೊಂದಿಗೆ ಹೋರಾಟ ಮಾಡುತ್ತಿರುವ ಜನರಿಗೆ ಅಲೋಪತಿ ಹಾಗೂ ಹೋಮಿಯೋಪತಿ ಸಂಯೋಜಿತ ಔಷಧಿಯನ್ನು ನೀಡುವ ಮೂಲಕ ಅವರಲ್ಲಿ ರೋಗನಿರೋಧಶಕ್ತಿ ಹೆಚ್ಚಿಸುವ ಪ್ರಯತ್ನಗಳನ್ನು ಮಾಡುತ್ತಿದೆ. 
ಈಗಾಗಲೇ ಸರ್ಕಾರಿ ಆಸ್ಪತ್ರೆಗಳು, 600 ಆಯುಷ್ ಔಷದಾಲಯಗಳು ಹಾಗೂ 2,300 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳಿಗೆ ಕಳೆದ 2 ತಿಂಗಳಿನಿಂದಲೂ ಈ ಔಷಧಿಗಳನ್ನು ವಿತರಿಸಲಾಗುತ್ತಿದೆ. ರೋಗಿಗಳಿಗೆ  ಅಲೋಪತಿ ಹಾಗೂ ಹೋಮಿಯೋಪತಿ ಸಂಯೋಜಿತ ಔಷಧಿಯನ್ನು ಸುದೀರ್ಘವಾಗಿ ನೀಡುವುದರಿಂದ ರೋಗಿಗಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ಮುಖ್ಯ ಆರೋಗ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಹೇಳಿದ್ದಾರೆ. 
ಪರಿಶೀಲನೆ ನಡೆಸಿದ ಬಳಿಕ ವ್ಯಕ್ತಿಯಲ್ಲಿ ಹೆಚ್1ಎನ್1 ಇರುವುದಾಗಿ ಕಂಡಬಂದರೆ 24 ಗಂಟೆಯೊಳಗಾಗಿ ರೋಗಿಗೆ ಉಚಿತವಾಗಿ ರಿಪೋರ್ಟ್ ನೀಡಲಾಗುತ್ತದೆ. ನಂತರ ಎಲ್ಲಾ ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಉಚಿತವಾಗಿ ಟಮಿಫ್ಲ್ಯೂ ಮಾತ್ರೆಗಳನ್ನು ನೀಡಲಾಗುತ್ತದೆ. ಅಲ್ಲದೆ, ರೋಗಿಯಲ್ಲಿ ರೋಗನಿರೋಧ ಶಕ್ತಿ ಹೆಚ್ಚಿಸಲು ಹೋಮಿಯೋಪತಿ ಓಷಧವನ್ನು ನೀಡಲಾಗುತ್ತದೆ. ನಂತರ ಹೋಮಿಯೋಪತಿ ಹಾಗೂ ಅಲೋಪತಿ ಸಂಯೋಜನೆಗೊಂಡಿರುವ ಔಷಧಿಯನ್ನು ಏಕಕಾಲದಲ್ಲಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. 
SCROLL FOR NEXT