ಆರೋಗ್ಯ

ಸಂಚಾರ ಸಂಬಂಧಿ ಮಾಲಿನ್ಯಗಳಿಂದ ಮಕ್ಕಳಲ್ಲಿ ಅಸ್ತಮಾ ಕಾಯಿಲೆಗಳು ಹೆಚ್ಚು: ವರದಿ

Sumana Upadhyaya

ಬೊಸ್ಟೊನ್: ವಾಹನದಲ್ಲಿನ ಹೊಗೆ, ಸಂಚಾರ ದಟ್ಟಣೆ ಸಂಬಂಧಿತ ಅಂಶಗಳಿಗೆ ದೀರ್ಘಾವಧಿಯವರೆಗೆ ತೆರೆದುಕೊಳ್ಳುವುದರಿಂದ ಚಿಕ್ಕ ವಯಸ್ಸಿನ ಮಕ್ಕಳಲ್ಲಿಯೇ ಅಸ್ತಮಾ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

ಅಲರ್ಜಿ ಅಂಡ್ ಕ್ಲಿನಿಕಲ್ ಇಮ್ಯುನೋಲಜಿ ಎಂಬ ಪತ್ರಿಕೆಯಲ್ಲಿ ಈ ಅಧ್ಯಯನ ಪ್ರಕಟಗೊಂಡಿದ್ದು 1999ರಿಂದ 2002ರ ಮಧ್ಯೆ ಜನಿಸಿದ 1,522 ಮಕ್ಕಳನ್ನು ಅಧ್ಯಯನಕ್ಕೊಳಪಡಿಸಲಾಯಿತು.

ಪ್ರಮುಖ ರಸ್ತೆ, ಹೆದ್ದಾರಿಗಳ ಪಕ್ಕ ಜೀವಿಸುವುದು ಮತ್ತು ವಾಯುಮಾಲಿನ್ಯಕ್ಕೆ ಬಹುಪಾಲು ಸಮಯ ತೆರೆದುಕೊಳ್ಳುವುದರಿಂದ 7ರಿಂದ 10 ವರ್ಷದ ಮಕ್ಕಳಲ್ಲಿ ಶ್ವಾಸಕೋಶದ ಸೋಂಕು ಕಂಡುಬರುತ್ತದೆ ಎಂದು ಅಮೆರಿಕಾದ ಬೆತ್ ಇಸ್ರೇಲ್ ಡಿಯೊಕೊನೆಸ್ಸ್ ವೈದ್ಯಕೀಯ ಕೇಂದ್ರದ ಮೇರಿ ಬಿ ರೈಸ್ ತಿಳಿಸಿದ್ದಾರೆ.

ವಾಯುಮಾಲಿನ್ಯಕ್ಕೆ ಹೆಚ್ಚಾಗಿ ತೆರೆದುಕೊಳ್ಳುವುದರಿಂದ ಮಕ್ಕಳಲ್ಲಿ ಬಹುಬೇಗನೆ ಅಸ್ತಮಾ ಕಾಯಿಲೆ ಬರುವ ಸಾಧ್ಯತೆಗಳು ಹೆಚ್ಚು ಎಂದು ರೈಸ್ ತಿಳಿಸಿದ್ದಾರೆ.

ಅಧ್ಯಯನಕಾರರು ಅಮೆರಿಕಾದ ಬೊಸ್ಟನ್ ಪ್ರದೇಶದಲ್ಲಿ ಮಕ್ಕಳ ಮನೆಯಿಂದ ರಸ್ತೆಗಿರುವ ದೂರವನ್ನು ಅಳೆಯಲು ಮ್ಯಾಪಿಂಗ್ ತಂತ್ರಜ್ಞಾನವನ್ನು ಬಳಸಿದರು.

ಅಸ್ತಮಾಗಳು ಇತ್ತೀಚಿನ ದಿನಗಳಲ್ಲಿ ಇಂಧನ ದಹನ, ಸಂಚಾರ, ವಿದ್ಯುತ್ ಸ್ಥಾವರಗಳು ಮತ್ತು ಇತರ ಮಾಲಿನ್ಯ ಮೂಲಗಳಿಂದ ಬರುತ್ತವೆ. ಬಾಲ್ಯ ಜೀವನದ ಮಧ್ಯಭಾಗದಲ್ಲಿ ಅಸ್ತಮಾ ಹೆಣ್ಣುಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

SCROLL FOR NEXT