ಆರೋಗ್ಯ

ಪುರುಷರ ಜ್ಞಾಪಕ ಶಕ್ತಿ ಕುಂದುವಿಕೆ ತಡೆಯಲು ಕಿತ್ತಳೆ ಹಣ್ಣಿನ ರಸ, ಬೆರ್ರಿ ಹಣ್ಣು ಸೇವನೆ ರಾಮಬಾಣ!

Manjula VN
ಸ್ಮರಣ ಶಕ್ತಿ ಎಂಬುದು ಮನುಷ್ಯನಿಗೆ ಅತ್ಯಂತ ಮುಖ್ಯವಾದದ್ದು. ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಜ್ಞಾಪಕ ಶಕ್ತಿಗಳು ಕುಂದುತ್ತಿರುವುದು ಹೆಚ್ಚಾಗುತ್ತಲೇ ಇದೆ. ಮನುಷ್ಯರು ತಮ್ಮ ಬುದ್ಧಿ ಶಕ್ತಿಯನ್ನು ಉಪಯೋಗಿಸುವ ಬದಲು ಕಂಪ್ಯೂಟರ್ ಹಾಗೂ ಫೋನ್ ಗಳ ಮೊರೆ ಹೋಗುತ್ತಿರುವುದೇ ಹೆಚ್ಚಾಗುತ್ತಿದೆ. 
ಯಾವುದೇ ವಿಚಾರ ಅಥವಾ ವಸ್ತುಗಳ ಬಗ್ಗೆ ತಿಳಿಯಬೇಕೆಂದರೂ ಗೂಗಲ್ ಸರ್ಚ್ ಮಾಡುತ್ತಾರೆ. ಸಣ್ಣಪುಟ್ಟ ಲೆಕ್ಕಾಚಾರಕ್ಕೂ ಮೊಬೈಲ್ ಕ್ಯಾಲ್ಕ್ಯೂಲೇಟರ್ ಬಳಸುತ್ತೇನೆ. ಇದು ಮನುಷ್ಯರ ಮೆದುಳಿನ ಸಾಮರ್ಥ್ಯ ಕುಂದುತ್ತಿರುವುದನ್ನು ಸೂಚಿಸುತ್ತದೆ. 
ಪ್ರತೀನಿತ್ಯ ಹಸಿರು ಸೊಪ್ಪು, ತರಕಾರಿ, ಕಿತ್ತಳೆ ಹಣ್ಣಿನ ರಸ ಹಾಗೂ ಬೆರ್ರಿ ಹಣ್ಣುಗಳನ್ನು ಸೇವನೆ ಮಾಡುವುದರಿಂದ ನೆನಪಿನ ಶಕ್ತಿ ವೃದ್ಧಿಯಾಗುತ್ತದೆ. ಪ್ರಮುಖವಾಗಿ ಪುರುಷರಲ್ಲಿ ಎಂದು ಅಧ್ಯಯನವೊಂದು ಹೇಳಿದೆ. 
ಜರ್ನಲ್ ನ್ಯೂರೋಲಜಿ ಈ ವರದಿಯನ್ನು ಪ್ರಕಟಿಸಿದ್ದು, ಅಧ್ಯಯನಕ್ಕೆ 27,842 ಪುರುಷರನ್ನು ಬಳಸಿಕೊಳ್ಳಲಾಗಿದ್ದು, ಇದರಲ್ಲಿ ಬಹುತೇಕರು ಆರೋಗ್ಯ ವೃತ್ತಿಪರರಾಗಿದ್ದಾರೆ. ಅಧ್ಯಯನಕ್ಕೊಳಗಾದವರಿಗೆ ಪ್ರಶ್ನಾವಳಿಗಳನ್ನು ನೀಡಲಾಗಿದ್ದು, ಪ್ರಶ್ನಾವಳಿಯಲ್ಲಿ ಪ್ರತೀನಿತ್ಯ ಎಷ್ಟರ ಮಟ್ಟಿಗೆ ಹಣ್ಣು ಹಾಗೂ ತರಕಾರಿಗಳನ್ನು ತಮ್ಮ ಆಹಾರದೊಂದಿಗೆ ಸೇವನೆ ಮಾಡಲಾಗುತ್ತದೆ ಎಂಬುದನ್ನು ಕೇಳಲಾಗಿದೆ. 
ಮೆದುಳಿನ ಆರೋಗ್ಯವನ್ನು ಕಾಪಾಡಲು ನಿಯಮಿತ ಆಹಾರ ಸೇವನೆ ಅತ್ಯಂತ ಮುಖ್ಯವಾಗಿರುತ್ತದೆ ಎಂದು ಅಮೆರಿಕಾದ ಹಾರ್ವರ್ಡ್ ಟಿಹೆಚ್ ಛಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್'ನ ಸಂಶೋಧಕ ಛಾಂಗ್ಝೆಂಗ್ ಯುವಾನ್ ಹೇಳಿದ್ದಾರೆ. 
ಅಧ್ಯಯನ ಅಂತ್ಯಗೊಳ್ಳುವುದಕ್ಕೂ ನಾಲ್ಕು ವರ್ಷಕ್ಕೂ ಮುನ್ನವೇ ಅಧ್ಯಯನಕ್ಕೊಳಗಾದವರ ಸ್ಮರಣಾ ಶಕ್ತಿಯನ್ನು ಪರಿಶೀಲನೆ ನಡೆಸಲಾಗಿತ್ತು. ಅಧ್ಯಯನಕ್ಕೊಳಗಾಗುವುದಕ್ಕೂ ಮುನ್ನ ಅವರಲ್ಲಿದ್ದ ಸ್ಮರಣಾ ಶಕ್ತಿ ಹಾಗೂ ಅಧ್ಯಯನಕ್ಕೊಳಗಾದ ಬಳಿಕ ಅವರಲ್ಲಿದ್ದ ಸ್ಮರಣ ಶಕ್ತಿಯಲ್ಲಿ ಸಾಕಷ್ಟು ಭಿನ್ನತೆಗಳು ಕಂಡು ಬಂದಿದ್ದವು. 
ಕಿತ್ತಳೆ ಹಣ್ಣಿನ ರಸವನ್ನು ಪ್ರತೀನಿತ್ಯ ಕುಡಿಯುತ್ತಿದ್ದ ಶೇ.6.6ರಷ್ಟು ಪುರುಷರಲ್ಲಿ ಸ್ಮರಣಾ ಶಕ್ತಿ ಹೆಚ್ಚಾಗಿರುವುದು ಅಧ್ಯಯನದಲ್ಲಿ ತಿಳಿದುಬಂದಿದೆ. 
ತಿಂಗಳಿಗೆ ಒಮ್ಮೆ ಕಿತ್ತಳೆಹಣ್ಣಿನ ರಸ ಕುಡಿಯುತ್ತಿದ್ದ ಪುರುಷರಿಗಿಂತ ಪ್ರತೀನಿತ್ಯ ಕಿತ್ತಳೆ ಹಣ್ಣಿನ ರಸ ಸೇವನೆ ಮಾಡುತ್ತಿದ್ದ ಶೇ.47 ರಷ್ಟು ಪುರುಷರಲ್ಲಿ ನೆನಪಿನ ಶಕ್ತಿ ಹೆಚ್ಚಾಗಿತ್ತು. ಪ್ರತೀನಿತ್ಯ ತರಕಾರಿ ಹಾಗೂ ಸೊಪ್ಪು, ಹಣ್ಣುಗಳ ಸೇವನೆ ಮಾಡುವ ಅಭ್ಯಾಸ ಬೆಳೆಸಿಕೊಳ್ಳುವ ವ್ಯಕ್ತಿಗಳಲ್ಲಿ ಸ್ಮರಣ ಶಕ್ತಿ ಕುಂದುವುದು ಅತ್ಯಂತ ಕಡಿಮೆ ಎಂಬುದನ್ನು ಅಧ್ಯಯನ ಹೇಳಿದೆ. 
SCROLL FOR NEXT